ಹಿರಿಯ ರಾಜಕಾರಣಿ: ಹೋರಾಟಗಾರ ಎ.ಕೆ ಸುಬ್ಬಯ್ಯ ನಿಧನ..

ಬೆಂಗಳೂರು,ಆ, 27,2019(www.justkannada.in):  ನಾಡಿನ ಹಿರಿಯ ರಾಜಕಾರಣಿ ಹೋರಾಟಗಾರ,  ಜನಪರ ವಕೀಲ ಎ.ಕೆ.ಸುಬ್ಬಯ್ಯ(86) ನಿಧನರಾಗಿದ್ದಾರೆ.

ಎಕೆ ಸುಬ್ಬಯ್ಯ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎ.ಕೆ.ಸುಬ್ಬಯ್ಯ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಎ ಕೆ ಸುಬ್ಬಯ್ಯ  ಅವರು ರಾಜ್ಯ ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆ ಹಾಗೂ ವಿವಿಧ ಅನಾರೋಗ್ಯದಿಂದಾಗಿ ಕಳೆದ ಒಂದು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದು ಆಗಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ವಾರಕ್ಕೆ ಮೂರು ದಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ನಿನ್ನೆ ಅವರ ಆರೋಗ್ಯಸ್ಥಿತಿ ಗಂಭೀರವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಅಜ್ಜಿಕುಟೀರ ಕಾರ್ಯಪ್ಪ ಮತ್ತು ಸೀತಮ್ಮ ದಂಪತಿ ಪುತ್ರನಾಗಿ 1934ರ ಆಗಸ್ಟ್ 8ರಂದು ಜನಿಸಿದ ಎ.ಕೆ.ಸುಬ್ಬಯ್ಯ ಇಂದು ನಿಧನರಾಗಿದ್ದು ವಿವಿಧ ನಾಯಕರಿಂದ ಸಂತಾಪ ವ್ಯಕ್ತವಾಗಿದೆ. ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇತ್ತು.

ಎ ಕೆ ಸುಬ್ಬಯ್ಯ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಹಿರಿಯ ರಾಜಕಾರಣಿ ಏಕೆ ಸುಬ್ಬಯ್ಯ ನಿಧಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಸಂತಾಪ ಸೂಚಿಸಿರುವ ಅವರು, ನೇರ, ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ನಮ್ಮ ಆತ್ಮಸಾಕ್ಷಿಯಂತಿದ್ದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಸಾವಿನಿಂದ ವೈಯಕ್ತಿಕವಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಡು ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.

ಕಾಂಗ್ರೆಸ್ ಸಂತಾಪ…

ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಖಾತೆ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ರಾಜಕಾರಣಿ, ಮಾಜಿ ಶಾಸಕ, ಸಾಮಾಜಿಕ ಚಿಂತಕ, ಲೇಖಕ, ಪ್ರಗತಿಪರ ಹೋರಾಟಗಾರರಾದ ಎ.ಕೆ.ಸುಬ್ಬಯ್ಯ ಅವರ ನಿಧನದ ಸುದ್ದಿ ಆಘಾತ ತಂದಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ,
ಅವರ ಕುಟುಂಬದ ನೋವಿನಲ್ಲಿ ನಾವೂ ಭಾಗಿಗಳು. ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದಿದೆ.

Key words: Senior politician – fighter- AK Subbaiah- dies