ಉತ್ತರ ಕರ್ನಾಟಕ ಉಳಿಸಿ: ಪ್ರವಾಹ ಪರಿಹಾರಕ್ಕಾಗಿ ಆಗ್ರಹಿಸಿ ಅ.3ರಂದು ಪ್ರತಿಭಟನೆ…..

ಬೆಂಗಳೂರು,ಅ,1,2019(www.justkannada.in):  ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದು ಎರಡು ತಿಂಗಳು ಕಳೆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡದಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿರುವ ಉತ್ತರ ಕನಾಟಕ ಸಂಘಟನೆಗಳ ಮಹಾ ಒಕ್ಕೂಟದಿಂದ ಅಕ್ಟೋಬರ್ 3 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 3 ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಬೃಹತ್ ಮೆರವಣಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನಾ ಮೆರವಣಿಗೆಗೆ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಗೌರವ ಅಧ್ಯಕ್ಷ ನಿವೃತ್ತ ಡಿಜಿಪಿ ಶಂಕರ್ ಬಿದರಿ ಚಾಲನೆ ನೀಡಲಿದ್ದಾರೆ ಎಂದು ಉತ್ತರ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ನಲುಗಿರುವ ಜನರಿಗೆ ತಕ್ಷಣ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗುವುದು. ಉತ್ತರ ಕರ್ನಾಟಕ ಜನತೆಯ ಮುಗ್ದತೆ, ಸಹನೆ ಮತ್ತು ತಾಳ್ಮೆಯನ್ನು ಸರ್ಕಾರಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಉತ್ತರ ಕರ್ನಾಟಕ ಜನರ ತಾಳ್ಮೆಯ ಕಟ್ಟೆ ಒಡೆದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎರಡೂ ಸರ್ಕಾಗಳಿಗೆ ಎಚ್ಚರಿಸಲು ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನಾ ರ್ಯಾಲಿ ಯಾವುದೇ ಪ್ರದೇಶ, ಪಕ್ಷ ಹಾಗೂ ಧರ್ಮವನ್ನು ಪ್ರತಿನಿಧಿಸದೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಪರವಾಗಿ ನಡೆಯುವ ಹೋರಾಟವಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕ ಭಾಗದ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

Key words: Save- North Karnataka-Protest – flood relief