ಕೆಂಗೇರಿ ಮೆಟ್ರೊ ಲೈನ್‌ ಗೆ ಸುರಕ್ಷತಾ ಅನುಮೋದನೆ: ಸದ್ಯದಲ್ಲೇ ಉದ್ಘಾಟನೆ.

ಬೆಂಗಳೂರು, ಆಗಸ್ಟ್ 17, 2021 (www.justkannada.in): ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತರು ಮೈಸೂರು ರಸ್ತೆ-ಕೆಂಗೇರಿ ಮೆಟ್ರೊ ಲೈನ್‌ ನ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿಸಿದ್ದು, ಈ ಯೋಜನೆಯ ಉದ್ಘಾಟನೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾಯಕರ ಜೊತೆಗೆ ಸಂಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎಲ್ಲವೂ ಯೋಜಿಸಿದಂತೆ ನಡೆದರೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಅಧಿಕಾರಿಗಳ ಪ್ರಕಾರ ಈ ಭಾಗದ ಮೆಟ್ರೊ ರೈಲು ಸೇವೆಗಳು ಮುಂದಿನ ಎರಡು ವಾರಗಳೊಳಗೆ ಕಾರ್ಯಾರಂಭಗೊಳ್ಳಲಿದೆ.

ಈ ಸಂಬಂಧ ಮಾತನಾಡಿರುವ ಬಿಎಂಆರ್‌ ಸಿಎಲ್‌ ನ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಅವರು, “ನಮಗೆ ಇಂದು (ಸೋಮವಾರ) ಸಂಜೆ ಮೈಸೂರು ರಸ್ತೆ-ಕೆಂಗೇರಿ ನಡುವಿನ ಮೆಟ್ರೋ ರೈಲು ಸೇವೆಗಳನ್ನು ಆರಂಭಿಸಲು ಷರತ್ತುಬದ್ದ ಅನುಮೋದನೆ ಲಭಿಸಿದೆ. ಜೊತೆಗೆ ಹಲವು ಸಲಹೆಗಳನ್ನೂ ಸಹ ನೀಡಲಾಗಿದೆ,” ಎಂದ್ದಾರೆ.

ಉದ್ಘಾಟನೆಯ ಸಂಭವನೀಯ ದಿನಾಂಕದ ಬಗ್ಗೆ ಕೇಳಿದಾಗ ಅಧಿಕಾರಿಯೊಬ್ಬರು ಈ ಕುರಿತು ಇನ್ನೂ ರಾಜ್ಯ ಹಾಗೂ ಕೇಂದ್ರದ ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಸಂಪರ್ಕಿಸಿ ಅಂತಿಮಗೊಳಿಸಬೇಕಿದೆ. “ಅದು ಶೀಘ್ರದಲ್ಲೇ ಜರುಗಲಿದೆ ಎಂದು ನಂಬಿದ್ದೇವೆ,” ಎಂದರು.

ಮೂಲಗಳ ಪ್ರಕಾರ ಈ ಹಿಂದೆ ಈ ಮೆಟ್ರೊ ರೈಲು ಸೇವೆಗಳನ್ನು ವರಮಹಾಲಕ್ಷ್ಮಿ ಹಬ್ಬದಂದು ಆರಂಭಿಸಲು ಯೋಜಿಸಲಾಗಿತ್ತು. ಆದರೆ ಈಗ ಮುಂದೂಡಲಾಗಿದೆಯಂತೆ. “ಬಹಳ ಕಡಿಮೆ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರದ ಸಚಿವರನ್ನು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಜೊತೆಗೂಡಿಸುವುದು ಸ್ವಲ್ಪ ಕಷ್ಟ. ಹಾಗಾಗಿ, ಮುಂದಿನ ಕೆಲವು ದಿನಗಳ ಒಳಗಾಗಿ ಉದ್ಘಾಟನೆಯ ದಿನಾಂಕವನ್ನು ನಿಗಧಿಪಡಿಸುತ್ತೇವೆ,” ಎನ್ನುತ್ತದೆ ಆ ಮೂಲಗಳು.

ಮೈಸೂರು ರಸ್ತೆ-ಕೆಂಗೇರಿ ನಡುವಿನ ಮೆಟ್ರೊ ನೇರಳೆ ಲೈನ್ ೬.೨ ಕಿ.ಮೀ.ಗಳಿದ್ದು, ಆರು ನಿಲ್ದಾಣಗಳನ್ನು ಹೊಂದಿದೆ. ಈ ಲೈನ್‌ನ ಕಾರ್ಯಾರಂಭ ಐಎಲ್&ಎಫ್‌ಎಸ್ ಬಿಕ್ಕಟ್ಟಿನಿಂದ ಹಿಡಿದು ಕೋವಿಡ್-೧೯ ಸಾಂಕ್ರಾಮಿಕವರೆಗೆ ಹಲವಾರು ಕಾರಣಗಳಿಂದಾಗಿ ಎರಡು ವರ್ಷಗಳಷ್ಟು ವಿಳಂಬವಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Safety- Approval – Kengeri -Metro Line-  Inauguration