ವಿದ್ಯಾರ್ಥಿನಿಗೆ 9 ಲಕ್ಷ ರೂ. ಪರಿಹಾರ ನೀಡುವಂತೆ ಮುಕ್ತ ವಿವಿಗೆ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಆದೇಶ

ಮೈಸೂರು, ಜೂನ್ 22, 2019 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಮಾನ್ಯತೆ ರದ್ದಾದ ಅವಧಿಯಲ್ಲಿ, ಪರೀಕ್ಷೆ ಬರೆಯಲು ಅವಕಾಶ ಸಿಗದ ವಿದ್ಯಾರ್ಥಿನಿಗೆ 9 ಲಕ್ಷ ಪರಿಹಾರ ನೀಡುವಂತೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಶ್ರೀವಿದ್ಯಾ ನಾಯರ್ ಎಂಬುವವರು, 2014ರಲ್ಲಿ ‘ಹೊಯಸಾಫ್ಟ್’ ಸಂಸ್ಥೆ ಮೂಲಕ ಕೆಎಸ್‌ಒಯುನಲ್ಲಿ ಬಿಬಿಎಂ ಕೋರ್ಸ್‌ಗೆ ನೋಂದಣಿ ಮಾಡಿಸಿದ್ದರು. 1ರಿಂದ 4 ಸೆಮಿಸ್ಟರ್‌ವರೆಗೆ ಪರೀಕ್ಷೆ ಬರೆದ ನಂತರ ಕೆಎಸ್‌ಒಯು ಮಾನ್ಯತೆ ರದ್ದಾಗಿತ್ತು. ಇದರಿಂದಾಗಿ, ಅವರಿಗೆ ಈ ಸೆಮಿಸ್ಟರ್‌ಗಳ ಅಂಕಪಟ್ಟಿ ಬಂದಿರಲಿಲ್ಲ ಹಾಗೂ ಪರೀಕ್ಷಾ ಶುಲ್ಕ ಕಟ್ಟಿದ್ದರೂ ಮುಂದಿನ ಸೆಮಿಸ್ಟರ್‌ಗಳ ಪರೀಕ್ಷೆಗೆ ಅವಕಾಶ ಸಿಕ್ಕಿರಲಿಲ್ಲ.

‘ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದರಿಂದ ನನ್ನ ಭವಿಷ್ಯ ಕಮರಿ ಹೋಗಿದೆ. ಇದಕ್ಕೆ ವಿ.ವಿ.ಯ ಬೇಜವಾಬ್ದಾರಿಯೇ ಕಾರಣ’ ಎಂದು ಶ್ರೀವಿದ್ಯಾ ಜೂನ್‌ 7, 2017ರಂದು ಇಲ್ಲಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದಾವೆ ಹೂಡಿದ್ದರು.

ಶಿಕ್ಷಣವು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕೆಎಸ್‌ಒಯು ವಾದವನ್ನು ವೇದಿಕೆ ಪುರಸ್ಕರಿಸಲಿಲ್ಲ. ಪರಿಹಾರ ರೂಪವಾಗಿ, ವಿದ್ಯಾರ್ಥಿನಿಗೆ 9 ಲಕ್ಷ ರೂ.ಗಳನ್ನು ‘ಹೊಯಸಾಫ್ಟ್‌’ ಹಾಗೂ ಕೆಎಸ್‌ಒಯು ಜಂಟಿಯಾಗಿ ನೀಡಬೇಕು ಎಂದು ಜೂನ್‌ 20ರಂದು ಆದೇಶಿಸಿದೆ. ವಿದ್ಯಾರ್ಥಿನಿ ಪರವಾಗಿ ವಕೀಲರಾದ ವಿಶ್ವನಾಥ ದೇವಶ್ಯ ವಾದ ಮಂಡಿಸಿದ್ದರು.

ಕೃಪೆ: ಪ್ರಜಾವಾಣಿ