ತ್ಯಾಜ್ಯ ಸುರಿಯುವ ಸ್ಥಳಗಳ ನಿಗಾವಣೆಗಾಗಿ ಬಿಬಿಎಂಪಿ ವತಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ರೂ.22 ಕೋಟಿ ಯೋಜನೆ.

ಬೆಂಗಳೂರು, ಜುಲೈ 28, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯವನ್ನು ಸುಡಲು ಹಾಗೂ ಸುರಿಯಲು ಬಳಕೆಯಾಗುವಂತಹ ಸಾರ್ವಜನಿಕ ತೆರೆದ ಸ್ಥಳಗಳು ಅಥವಾ ಬ್ಲ್ಯಾಂಕ್ ಸ್ಪಾಟ್‌ಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಬಿಬಿಎಂಪಿ ಇಂತಹ ೨,೪೧೫ ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಯೋಚಿಸುತ್ತಿದೆ. ಒಂದು ನಯಂತ್ರಣ ಕೇಂದ್ರದ ಸ್ಥಾಪನೆಯೂ ಒಳಗೊಂಡಿರುವ ಈ ಯೋಜನೆಗೆ ಬರೋಬ್ಬರಿ ರೂ.೨೨.೩೨ ಕೋಟಿ ವೆಚ್ಚ ಮಾಡಲಾಗುತ್ತದಂತೆ.jk

ಕ್ರಿಯಾ ಯೋಜನೆ ಸಿದ್ಧವಾಗುತ್ತಿದ್ದಂತೆಯೇ, ಬಿಬಿಎಂಪಿ ಟೆಂಡರ್‌ಗಳನ್ನು ಆಹ್ವಾನಿಸಲು ಆರಂಭಿಸಲಿದೆ. ಈ ಯೋಜನೆಗೆ ನಗರಾಭಿವೃಧ್ಧಿ ಇಲಾಖೆ ಇದೇ ವರ್ಷದ ಜೂನ್ ತಿಂಗಳಲ್ಲಿ ಅನುಮೋದನೆಯನ್ನೂ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕೈಗಾರಿಕಾ ಪ್ರದೇಶಗಳು ಹಾಗೂ ಜೈವಿಕ ವೈದ್ಯಕೀಯ ಪ್ರದೇಶಗಳು ಒಳಗೊಂಡಂತೆ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಅಧಿಕೃತ ದಾಖಲಾತಿಗಳ ಪ್ರಕಾರ ಇದಕ್ಕಾಗಿ ಮೀಸಲಿರುವ ನಿಧಿಯನ್ನು ನಿಗಾವಣಾ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಸೆನ್ಸಾರ್‌ ಗಳು ಮತ್ತು ಐಒಟಿ ಉಪಕರಣಗಳನ್ನು ಬಳಸಿ ಘನ ತ್ಯಾಜ್ಯ ನಿರ್ವಹಣಾ  ನಿಗಾವಣೆಯ ಕೇಂದ್ರೀಯ ಕಮ್ಯಾಂಡ್ ಸೆಂಟರ್ ಸ್ಥಾಪಿಸಲು ವ್ಯಯಿಸಲಾಗುತ್ತದಂತೆ. ಈ ನಿಯಂತ್ರಣ ಕೇಂದ್ರ ವಸಂತನಗರದಲ್ಲಿರುವ ಎಸ್‌ಡಬ್ಲ್ಯುಎಂನ ಹೊಸ ಕಚೇರಿಯ ಮೊದಲನೇ ಮಹಡಿಯಲ್ಲಿ ಸ್ಥಾಪಿಸಲಾಗುತ್ತಿದೆ.

15ನೇ ಹಣಕಾಸು ಆಯೋಗದಡಿ ಒದಗಿಸಲಾಗಿರುವ ರೂ.೨೨.೩೦ ಕೋಟಿ ಅನುದಾನದ ಒಂದು ಭಾಗವನ್ನು, ಪ್ರಾಥಮಿಕ ಹಾಗೂ ಮಾಧ್ಯಮಿಕ ತ್ಯಾಜ್ಯ ಸಾಗಿಸುವ ವಾಹನಗಳು ಹಾಗೂ ರಸ್ತೆಗಳನ್ನು ಗುಡಿಸುವ ಯಂತ್ರೋಪಕರಣಗಳೂ ಒಳಗೊಂಡಂತೆ ಎಸ್‌ಡಬ್ಲ್ಯುಎಂನ ಇತರೆ ಕಾರ್ಯಗಳ ನಿಗಾವಣೆಗಾಗಿ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. ಮೂರನೇ ಪಾರ್ಟಿ ಏಜೆನ್ಸಿಯ ಭಾಗವಹಿಸುವಿಕೆಯೊಂದಿಗೆ ತ್ಯಾಜ್ಯ ಸಂಗ್ರಹಿಸುವ ಉತ್ತಮ ಕ್ರಮಗಳನ್ನು ಪತ್ತೆ ಹಚ್ಚಲು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳ (ಬ್ಲಾಕ್ ಮ್ಯಾಪ್ಪಿಂಗ್ ಹಾಗೂ ಡಿಜಿಟಲ್ ಮ್ಯಾಪ್ಪಿಂಗ್) ಸಮೀಕ್ಷೆಯನ್ನು ನಡೆಸಲು ಸಹ ಯೋಜಿಸಲಾಗುತ್ತಿರುವುದು ಬಿಬಿಎಂಪಿ ದಾಖಲಾತಿಗಳ ಪ್ರಕಾರ ತಿಳಿದು ಬಂದಿದೆ.

ಬಿಬಿಎAಪಿ ಬ್ಲ್ಯಾಂಕ್ ಸ್ಪಾಟ್‌ಗಳ ನಿಗಾವಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ರೂಪಿಸಿರುವ ಈ ಯೋಜನೆ ಇದೇ ಮೊದಲ ಬಾರಿಯೇನಲ್ಲ. ಮೂರು ವರ್ಷಗಳ ಹಿಂದೆ ಇದೇ ರೀತಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುರಿಯುವವರ ಮೇಲೆ ನಿಗಾವಹಿಸಲು ೨,೫೦೦ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ರೂ.೨೦ ಕೋಟಿ ವಚ್ಚ ಮಾಡಿತ್ತು. ಎಲ್ಲಾ ೧೯೮ ವಾರ್ಡುಗಳಿಗೂ ತಲಾ ರೂ.೧೦ ಲಕ್ಷ ನೀಡಿತ್ತು. ಆದರೆ ಪ್ರಸ್ತುತ, ಒಂದೇ ಒಂದು ಸಿಸಿಟಿವಿ ಕ್ಯಾಮೆರಾ ಸಹ ಕೆಲಸ ಮಾಡುತ್ತಿಲ್ಲ.

ಘನ ತ್ಯಾಜ್ಯ ನಿರ್ವಹಣಾ ತಜ್ಞರು ಹಾಗೂ ನಾಗರಿಕರ ಪ್ರಕಾರ, ಈ ರೀತಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನು ಅಳವಡಿಸಿ ಸೂಕ್ತ ರೀತಿಯಲ್ಲಿ ನಿಗಾವಣೆ ಮಾಡದ ಹೊರತಾಗಿ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳದ ಹೊರತಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದ ಯಾವುದೇ ಉಪಯೋಗವಾಗುವುದಿಲ್ಲ. ಎಸ್‌ಡಬ್ಲ್ಯುಎಂ ತಜ್ಞೆ ಮಂಜುಳಾ ರಾವ್ ಅವರು ಹೇಳುವಂತೆ, ಬ್ಲ್ಯಾಂಕ್ ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮ ಶಿಫಾರಸ್ಸು ಮಾಡಿದೆ. “ಇತ್ತೀಚಿನ ಸಾಫ್ಟ್ವೇರ್ ಪದೇ ಪದೇ ಈ ರೀತಿ ಎಲ್ಲೆಂದರಲ್ಲಿ ಕಸ ಎಸೆದು ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಬಿಬಿಪಿಎಂಪಿಗೆ ಎಸ್‌ಎಂಎಸ್ ಸಂದೇಶಗಳನ್ನು ಕಳುಹಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಸಿಸಿಟಿವಿ-ಆಧಾರಿತ ನಿಗಾವಣಾ ವ್ಯವಸ್ಥೆ ಉತ್ತಮ ಕ್ರಮವೇ. ಆದರೆ ಬಿಬಿಎಂಪಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸದೇ ಇದ್ದರೆ ಯಾವುದೇ ಪ್ರಯೋಜನವಿಲ್ಲ,” ಎನ್ನುತ್ತಾರೆ.

ಯಶವಂತಪುರದ ನಿವಾಸಿ ಡಾ. ಲಕ್ಷ್ಮೀಕಾಂತ್ ಅವರು ಹೇಳುವಂತೆ, ಸಿಸಿಟಿವಿ-ಆಧಾರಿತ ನಿಗಾವಣಾ ವ್ಯವಸ್ಥೆಯನ್ನು ಬ್ಲ್ಯಾಂಕ್ ಸ್ಪಾಟ್‌ಗಳನ್ನು ತೆರವುಗೊಳಿಸುವ ಏಕೈಕ ಪರಿಹಾರದಂತೆ ನೋಡಬಾರದು. “ಒಂದು ವೇಳೆ ಬಿಬಿಎಂಪಿ ಹಾಲಿ ಬ್ಲ್ಯಾಂಕ್ ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಮರುದಿನವೇ ಅಂತಹ ಸಾವಿರಾರು ಹೊಸ ಬ್ಲ್ಯಾಂಕ್ ಸ್ಪಾಟ್‌ ಗಳು ಹುಟ್ಟಿಕೊಳ್ಳುತ್ತವೆ. ಪ್ರಾಧಿಕಾರಗಳು ಇಡೀ ನಗರದಾದ್ಯಂತ ಈ ರೀತಿ ಕ್ಯಾಮೆರಾಗಳನ್ನು ಅಳವಡಿಸುವುದು ಅಸಾಧ್ಯ. ಪ್ರತಿ ದಿನ ಕಸ ಸಂಗ್ರಹ ಆಗದಿದ್ದರೆ, ಜನರು ಒಂದು ದಿನದವರೆಗೆ ಕಾಯುತ್ತಾರೆ, ನಂತರ ಮರು ದಿನ ಕಸವನ್ನು ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಾರೆ. ಹಾಗಾಗಿ ಪ್ರತಿ ದಿನ ತಪ್ಪದೇ ಕಸ ಸಂಗ್ರಹಿಸುವುದೇ ಇದಕ್ಕೆ ಅತ್ಯುತ್ತಮ ಪರಿಹಾರ,” ಎನ್ನುತ್ತಾರೆ.

ಬೆಂಗಳೂರಿನ ಎಸ್‌ಡಬ್ಲ್ಯುಎಂ ಲಿ.ನ ಕಾರ್ಯನಿರ್ವಾಹಕ ನಿರ್ದೇಶಕ ಸರ್ಫರಾಜ್ ಖಾನ್ ಅವರು ಹೇಳುವಂತೆ, “ಬೆಂಗಳೂರು ನಗರದಲ್ಲಿ ಇಂತಹ ೨,೪೧೫ ಬ್ಲ್ಯಾಂಕ್ ಸ್ಪಾಟ್‌ಗಳಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಈ ಎಲ್ಲಾ ಸ್ಥಳಗಳಲ್ಲಿಯೂ ಅಳವಡಿಸಿ, ಅವುಗಳನ್ನು ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆ ಮುಂದಿನ ಆರು ತಿಂಗಳೊಳಗೆ ಸಿದ್ಧವಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯೊಂದೇ ಇದಕ್ಕೆ ಪರಿಹಾರವಲ್ಲ ಎನ್ನುವುದು ನಮಗೆ ತಿಳಿದಿದೆ. ಆದರೆ, ಎಲ್ಲಿ ಯಾರು ಕಸ ಎಸೆಯುತ್ತಾರೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಅದನ್ನು ಆಧರಿಸಿ, ಅಂತಹ ಸ್ಥಳಗಳಲ್ಲಿ ಕಸ ಸಂಗ್ರಹಿಸುವ ಕೆಲಸವನ್ನು ಸುಧಾರಿಸಬಹುದು,” ಎನ್ನುತ್ತಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Rs 22 crore -project – install -CCTV – BBMP