ಬೆಂಗಳೂರು ನಗರದಲ್ಲಿ ಶೀಘ್ರದಲ್ಲೇ ರಸ್ತೆಬದಿ ಪೇಡ್ ಪಾರ್ಕಿಂಗ್.     

 ಬೆಂಗಳೂರು, ಸೆಪ್ಟೆಂಬರ್ 19, 2022 (www.justkannada.in): ಅತಿಯಾದ ವಾಹನಗಳಿಂದ ಬೆಂಗಳೂರು ಮಹಾನಗರದ ನಿವಾಸಿಗಳು ಕಂಗೆಟ್ಟಿದ್ದಾರೆ. ಅವಶ್ಯಕತೆ ಇಲ್ಲದಿದ್ದರೂ ಸಹ ಒಂದೊಂದು ಮನೆಯಲ್ಲಿ ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ನಾಲ್ಕು ಚಕ್ರ ವಾಹನಗಳಿದ್ದು, ನಿಲ್ಲಿಸಲು ಸ್ಥಳಾವಕಾಶವಿಲ್ಲದೆ ರಸ್ತೆಬದಿಗಳಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದು ಇಡೀ ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಹರಡಿರುವ ಸಮಸ್ಯೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ. ಚಿಕ್ಕ ಚಿಕ್ಕ ರಸ್ತೆಗಳಲ್ಲೂ ಸಹ ಎರಡೂ ಬದಿಗಳಲ್ಲಿ ಕಾರುಗಳನ್ನು ನಿಲ್ಲಿಸಲಾಗಿರುತ್ತದೆ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಇಲ್ಲಿಯವರೆಗೆ ಉಚಿತವಾಗಿ ರಸ್ತೆಬದಿಗಳಲ್ಲಿ ಕಾರುಗಳನ್ನು ರಾಜಾರೋಷವಾಗಿ ನಿಲ್ಲಿಸಿ ಗಂಟೆಗಟ್ಟಲೇ, ದಿನಗಟ್ಟಲೆ ಆರಾಮವಾಗಿದ್ದಂತಹ ಬೆಂಗಳೂರಿನ ನಿವಾಸಿಗಳಿಗೆ ಶಾಕ್ ಒಂದನ್ನು ನೀಡಲು ಮುಂದಾಗಿದೆ. ಹೌದು. ಬಿಬಿಎಂಪಿ ರಸ್ತೆ ಬದಿ ವಾಹನ ನಿಲ್ಲಿಸುವವರಿಗೆ ಶುಲ್ಕ ವಿಧಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಫೆಬ್ರವರಿ 2, 2021ರಂದು ಈ ಹೊಸ ವಾಹನ ನಿಲುಗಡೆ ನೀತಿಗೆ ಅನುಮೋದನೆ ನೀಡಿದ್ದು, ಶುಲ್ಕ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಅಳವಡಿಕೆಗೆ ಬಿಬಿಎಂಪಿಗೆ ಜವಾಬ್ದಾರಿ ವಹಿಸಿದೆ. ಇದರಿಂದಾಗಿ ವೈಯಕ್ತಿಕ ವಾಹನಗಳ ಬಳಕೆಯನ್ನು ಪರೋಕ್ಷವಾಗಿ ತಡೆಗಟ್ಟಲು ಮುಂದಾಗಿದೆ.

ಇದರಿಂದ ಬಿಬಿಎಂಪಿ ವಾರ್ಷಿಕ ರೂ.೧೮೮ ಕೋಟಿ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಈ ಯೋಜನೆಯನ್ನು ವಿವರವಾದ ಅಧ್ಯಯನ ಕೈಗೊಂಡ ನಂತರ ನಗರ ಭೂಸಾರಿಗೆ (ಡಿಯುಎಲ್‌ಟಿ) ನಿರ್ದೇಶನಾಲಯ ಸಿದ್ಧಪಡಿಸಿ, ನಗರದ ಎಂಟು ಪ್ರದೇಶಗಳಲ್ಲಿ ಜಾರಿಗೊಳಿಸಲಿದೆ.

ಡಿಯುಎಲ್‌ ಟಿ ಅಧಿಕಾರಿಗಳು ತಿಳಿಸಿದ ಪ್ರಕಾರ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಜೊತೆಗೆ, ಸೈಕಲ್‌ಗಳು, ಅನ್ವಯವಾಗುವ ಕಡೆ ಲೋಡಿಂಗ್ ಹಾಗೂ ಅನ್‌ ಲೋಡಿಂಗ್ ಮಾಡುವ ವಾಹನಗಳು ಮತ್ತು ಆಟೋ ನಿಲ್ದಾಣಗಳಿಗೂ ಸಹ ಪ್ರತ್ಯೇಕ ನಿಲ್ದಾಣಗಳನ್ನು ಗುರುತಿಸಲಾಗಿದೆ.

ಈ ಸಂಬಂಧ ಮಾತನಾಡಿರುವ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರು, ಇನ್ನೆರಡು ದಿನಗಳಲ್ಲಿ ಈ ಸಂಬಂಧ ಟೆಂಡರ್‌ ಗಳು ಬಿಡ್ಡಿಂಗ್‌ ಗೆ ಲಭ್ಯವಾಗಲಿದೆ ಎಂದರು. ಸಂಚಾರಿ ಇಂಜಿನಿಯರಿಂಗ್ ಘಟಕ (ಟಿಇಸಿ)ದ ಅಧಿಕಾರಿಗಳು, ನಗರದಲ್ಲಿ ಮೂರು ವರ್ಗಗಳಡಿ ರಸ್ತೆಗಳನ್ನು ಗುರುತಿಸಲಾಗಿದ್ದು, ಅದರ ಪ್ರಕಾರವಾಗಿ ವಾಹನ ನಿಲ್ಲಿಸಲು ಶುಲ್ಕವನ್ನು ನಿಗಧಿಪಡಿಸಲಾಗಿದೆ ಎಂದರು.

ಭೂಮಿಯ ಮಾರುಕಟ್ಟೆ ಬೆಲೆ ಹಾಗೂ ರಸ್ತೆಯ ಅಗಲವನ್ನು ಆಧರಿಸಿ ರಸ್ತೆಗಳನ್ನು ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಲಭ್ಯವಿರುವ ಸ್ಥಳವನ್ನು ಆಧರಿಸಿ ಪ್ರತಿ ಪ್ರದೇಶದಲ್ಲೂ ವಾಹನ ನಿಲ್ಲಿಸುವ ಸ್ಥಳವನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಇಂಜಿನಿಯರ್ (ಟಿಇಸಿ) ಹೆಚ್.ಎನ್. ಜಯಸಿಂಗ ತಿಳಿಸಿದ್ದಾರೆ. ಮತ್ತೊಬ್ಬ ಅಧಿಕಾರಿ ತಿಳಿಸಿದಂತೆ, ಈ ಪೇಡ್ ಪಾರ್ಕಿಂಗ್ ವ್ಯವಸ್ಥೆ ಬೆಳಿಗ್ಗೆ ೭ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ, ೧೨ ರಿಂದ ೧೫ ಗಂಟೆಗಳವರೆಗೆ ಅನ್ವಯವಾಗಲಿದೆ.

“ವಾಹನ ನಿಲುಗಡೆಗೆ ವಿಧಿಸುವ ಶುಲ್ಕ ಹಾಗೂ ಅವಧಿಯ ಕುರಿತು ಚರ್ಚೆಗಳು ಅಂತಿಮ ಹಂತದಲ್ಲಿವೆ. ಸಂಭವನೀಯವಾಗಿ ‘ಎ’ ವರ್ಗದಡಿ ವಾಹನ ನಿಲುಗಡೆ ಶುಲ್ಕ ಪ್ರತಿ ಗಂಟೆಗೆ ರೂ.೧೫ (ದ್ವಿಚಕ್ರವಾಹನಗಳಿಗೆ), ರೂ.೩೦ (ನಾಲ್ಕು ಚಕ್ರ ವಾಹನಗಳಿಗೆ) ವಿಧಿಸಬಹುದು. ‘ಬಿ’ ವರ್ಗದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ.೧೦ ಮತ್ತು ಕಾರುಗಳಿಗೆ ರೂ.೨೦ ಶುಲ್ಕವಿರುತ್ತದೆ. ‘ಸಿ’ ವರ್ಗದ ಪ್ರದೇಶದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಮಾಲೀಕರು ಕ್ರಮವಾಗಿ ಪ್ರತಿ ಗಂಟೆಗೆ ರೂ.೫ ರಿಂದ ರೂ.೧೦ ಪಾವತಿಸಬೇಕಾಗುತ್ತದೆ,” ಎಂದು ವಿವರಿಸಿದರು.

ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ಪ್ರದೇಶಗಳಲ್ಲಿ, ಅವು ‘ಎ’ ವರ್ಗದಡಿ ಸೇರದ ಕಾರಣದಿಂದಾಗಿ ವಾಹನ ನಿಲುಗಡೆ ವೆಚ್ಚ ಅಷ್ಟು ಹೆಚ್ಚಾಗಿ ಇರುವುದಿಲ್ಲ. ಆದರೆ ಪ್ರಮುಖ ಪ್ರದೇಶಗಳಲ್ಲಿ ಮತ್ತು ಬಹಳ ವಾಹನಗಳ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಶುಲ್ಕ ಹೆಚ್ಚಾಗಿರುತ್ತದೆ.

ಈ ಮೂಲಕ ಬಿಬಿಎಂಪಿ, ಬೆಂಗಳೂರು ಪೂರ್ವ ಭಾಗದಿಂದ ವಾರ್ಷಿಕ ಕನಿಷ್ಠ ರೂ.೬೨ ಕೋಟಿ, ದಕ್ಷಿಣ ಭಾಗದಿಂದ (ರೂ.೫೦ ಕೋಟಿ), ಪಶ್ಚಿಮ (ರೂ.೨೦.೭೧ ಕೋಟಿ) ಆದಾಯಗಳಿಸುವ ನಿರೀಕ್ಷೆ ಹೊಂದಿದೆ. ರಾಜರಾಜೇಶ್ವರಿ ನಗರದಿಂದ ಅತ್ಯಂತ ಕಡಿಮೆ, ಅಂದರೆ ರೂ.೫ ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಜನಾಗೃಹದ ನಾಗರಿಕ ಭಾಗವಹಿಸುವಿಕೆ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಅವರು, “ಶುಲ್ಕ ಪಾವತಿಯೊಂದಿಗೆ ರಸ್ತೆಬದಿ ವಾಹನ ನಿಲುಗಡೆ ವ್ಯವಸ್ಥೆ ಮತ್ತು ಸಾರ್ವಜನಿಕ ಸಾರಿಗೆ ಪ್ರೋತ್ಸಾಹ, ಎರಡೂ ಜೊತೆಜೊತೆಯಾಗಿ ನಡೆಯಬೇಕು,” ಎಂದರು.

“ರಸ್ತೆಗಳು ನಗರದ ಭಾಗವಾಗಿದ್ದು, ಎಲ್ಲರಿಗೂ ಸೇರಿದೆ. ಆದರೆ ಕೆಲವು ಲಕ್ಷಗಳಲ್ಲಿರುವ ಕಾರುಗಳ ಮಾಲೀಕರು ಈ ಅಮೂಲ್ಯವಾದ ಸ್ಥಳದ ಬಹುಪಾಲನ್ನು ಆಕ್ರಮಿಸಿಕೊಂಡಿದ್ದಾರೆ. ಅವರಿಗೆ ಅಷ್ಟು ಅಗತ್ಯವಿದ್ದರೆ, ಹಣ ಪಾವತಿಸಿ ಸ್ಥಳವನ್ನು ಬಳಸಿಕೊಳ್ಳಲಿ,” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Roadside -paid -parking -soon – Bengaluru city.