ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಕ್ಕೆ ಮನವಿ ಮಾಡಿರುವುದು ಆತುರದ ನಿರ್ಧಾರ- ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಂದ ಆಕ್ಷೇಪ…

ಬೆಂಗಳೂರು,ಆ,26,2020(www.justkannada.in): ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರು ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದು ಆತುರದ ನಿರ್ಧಾರವಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಅಧ್ಯಕ್ಷ ಎ.ಪಿ.ರಂಗನಾಥ ಆಕ್ಷೇಪಿಸಿದ್ದಾರೆ.jk-logo-justkannada-logo

ಈ ಕುರಿತು ಮಾತನಾಡಿರುವ ಬೆಂಗಳೂರು ವಕೀಲರ ಸಂಘ ಅಧ್ಯಕ್ಷ ಎ.ಪಿ.ರಂಗನಾಥ ಅವರು, ತೋಟಗಾರಿಕೆ ಸಚಿವರು ಕಬ್ಬನ್ ಉದ್ಯಾನವನ್ನು ಲಾಕ್‌ಡೌನ್ ಅವಧಿಯಲ್ಲಿ ಗಮನಿಸಿ ಈ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ. ಮಾನ್ಯ ಸಚಿವರಿಗೆ ಬೆಂಗಳೂರು ನಗರದ ಕುರಿತು ಸಂಪೂರ್ಣ ಮಾಹಿತಿ ಇರುವಂತೆ ಕಂಡುಬರುವುದಿಲ್ಲ. ಕಬ್ಬನ್ ಉದ್ಯಾನವನ ನಗರದ ಹೃದಯಭಾಗದಲ್ಲಿರುವ ಶ್ವಾಸಕೋಶ ಎಂಬುದು ಎಷ್ಟು ಸತ್ಯವೋ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವೂ ಹೌದು ಎಂಬುದನ್ನು ತೋಟಗಾರಿಕಾ ಮಂತ್ರಿಗಳು ಅರಿಯಬೇಕು ಎಂದು ಸಲಹೆ ನೀಡಿದ್ದಾರೆ.

ಕಬ್ಬನ್ ಉದ್ಯಾನವನದ ಒಳಗಿನ ರಸ್ತೆಗಳು ನ್ಯಾಯದಾನ ಮಾಡುವ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್‌ ಮತ್ತು ನಗರ ಕೇಂದ್ರ ಗ್ರಂಥಾಲಯಗಳಿಗೆ ಸಾವಿರಾರು ವಕೀಲರು ದಿನನಿತ್ಯ ನಡಿಗೆಯ ಮೂಲಕ ಹಾಗೂ ವಾಹನಗಳಲ್ಲಿ ತೆರಳಲು ಅವಕಾಶ ನೀಡಿದೆ. ಈಗಾಗಲೇ ಸರ್ಕಾರಿ ರಜೆ ಮತ್ತು ಭಾನುವಾರಗಳಂದು ಕಬ್ಬನ್ ಪಾರ್ಕ್ ರಸ್ತೆಗಳನ್ನು ಬಂದ್ ಮಾಡಿ ಸಂಪೂರ್ಣ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.  ಇದನ್ನು ಪ್ರಶ್ನಾತೀತವಾಗಿ ಎಲ್ಲರೂ ಸ್ವಾಗತಿಸಿದ್ದಾರೆ. ಲಾಕ್‌ಡೌನ್ ತೆರವಾದ ನಂತರ ಸರ್ಕಾರಿ ಕಚೇರಿಗಳು, ಹೈಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಕಾರ್ಯನಿರ್ವಹಣೆ ಆರಂಭವಾದ ನಂತರ ವಕೀಲರ ಮತ್ತು ಸಾರ್ವಜನಿಕರ ಓಡಾಟಕ್ಕೆ ಕಬ್ಬನ್ ಉದ್ಯಾನವನದ ರಸ್ತೆಗಳ ಬಳಕೆ ಅಗತ್ಯವಿದೆ.request-traffic-ban-cubbon-park-hasty-decision-objection-president-bangalore-lawyers-association

ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧರಾಗಿದ್ದು ಸರ್ಕಾರ ಏಕಪಕ್ಷೀಯವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮುನ್ನ ಸರ್ಕಾರಿ ನೌಕರರ ಸಂಘ, ವಕೀಲರ ಸಂಘ ಮತ್ತು ಪರಿಸರವಾದಿಗಳ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಎ.ಪಿ.ರಂಗನಾಥ ಮನವಿ ಮಾಡಿದ್ದಾರೆ.

Key words: request – traffic ban – Cubbon Park – hasty –decision-Objection – President -Bangalore Lawyers Association