ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೊಬ್ಡೆ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ನವೆಂಬರ್ 18, 2019 (www.justkannada.in): ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಸುಪ್ರೀಂಕೋರ್ಟ್‌ನ 47 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ಬೊಬ್ಡೆ ಅವರ ಮುಖ್ಯ ನ್ಯಾಯಮೂರ್ತಿಯ ಅವಧಿ ಸುಮಾರು 17 ತಿಂಗಳುಗಳು, ಅವರು 23 ಏಪ್ರಿಲ್ 2021 ರಂದು ನಿವೃತ್ತರಾಗಲಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಏಪ್ರಿಲ್ 24, 1956 ರಂದು ನಾಗ್ಪುರದಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರಾಗಿದ್ದರು. ನಾಗ್ಪುರ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನು ಪದವಿ ಪಡೆದ ಎಸ್.ಎ. ಬೊಬ್ಡೆ 1978 ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಂಡರು ಮತ್ತು 21 ವರ್ಷಗಳ ಕಾಲ ಹೈಕೋರ್ಟ್ ನಾಗ್ಪುರ ಪೀಠದಲ್ಲಿ ಸೇವೆ ಸಲ್ಲಿಸಿದರು.

ನಂತರ ನ್ಯಾಯಮೂರ್ತಿ ಬೊಬ್ಡೆ ಮಾರ್ಚ್ 2000 ರಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾದರು. ಅಕ್ಟೋಬರ್ 16, 2012 ರಂದು ಅವರು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು, ಬಳಿಕ 12 ಏಪ್ರಿಲ್ 2013 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು.