ಮಂಡ್ಯ ಜಿಲ್ಲೆಯ ಬಾಕಿ ಉಳಿದ 4 ತಾಲ್ಲೂಕುಗಳ ಗ್ರಾಮಗಳಿಗೆ ರೂ. 1091 ಕೋಟಿ ಮೊತ್ತದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ – ಸಚಿವ ಡಾ. ನಾರಾಯಣಗೌಡ

ಮಂಡ್ಯ, ಆಗಸ್ಟ್, 12,2021(www.justkannada.in): ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್. ಪೇಟೆ ಹಾಗೂ ಪಾಂಡವಪುರ ತಾಲ್ಲೂಕುಗಳಿಗೆ ರೂ. 690.36 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಈಗಾಗಲೇ ಮಂಜೂರಾಗಿದ್ದು, ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಈಗ ಇನ್ನುಳಿದ ನಾಲ್ಕು ತಾಲ್ಲೂಕುಗಳ 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಮಂಜೂರು ಮಾಡಿಸಲು ಸಚಿವ ಡಾ. ನಾರಾಯಣಗೌಡ ಸಫಲರಾಗಿದ್ದು, ಒಟ್ಟು ರೂ. 1091 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಆ ಮೂಲಕ ಸಚಿವ ಡಾ. ನಾರಾಯಣಗೌಡ ಕೊಟ್ಟ ಭರವಸೆ ಈಡೇರಿದೆ.

ಮಂಡ್ಯ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವುದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ಕನಸಾಗಿತ್ತು. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಕೊಟ್ಟ ಭರವಸೆಯಂತೆ ಈಗ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೊಡಿಸಲಾಗಿದೆ. ಕೇಂದ್ರ ಸರ್ಕಾರದÀ ಶೇ. 50 ರಷ್ಟು ಅನುದಾನ ಹಾಗೂ ರಾಜ್ಯ ಸರ್ಕಾರ ಶೇ. 50 ರಷ್ಟು ಅನುದಾನದೊಂದಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ಈ ತಾಲೂಕುಗಳಲ್ಲಿ ಸಾಕಾರಗೊಳ್ಳಲಿದೆ. ಜಲಧಾರೆ ಯೋಜನೆಯಡಿ ಎರಡು ತಿಂಗಳ ಹಿಂದೆ ಕೆ.ಆರ್. ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲ್ಲೂಕಿನ 791 ಗ್ರಾಮಗಳಿಗೆ ರೂ. 690.36 ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಆಹ್ವಾನಿಸಲಾಗಿದೆ. ಮುಂದುವರಿದ ಭಾಗವಾಗಿ ಈಗ ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಕ್ರಿಯಾಯೋಜನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮೋದನೆ ನೀಡಿದೆ.

ಜಿಲ್ಲೆಯ ಒಟ್ಟು 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ

ಮೊದಲ ಹಂತದಲ್ಲಿ ರೂ. 690.36 ಕೋಟಿ ವೆಚ್ಚದಲ್ಲಿ ಕೆ.ಆರ್. ಪೇಟೆ ತಾಲೂಕಿನ 310 ಗ್ರಾಮಗಳಿಗೆ, ನಾಗಮಂಗಲ ತಾಲೂಕಿನ 391 ಗ್ರಾಮಗಳು ಹಾಗೂ ಬಿ.ಜಿ. ನಗರ ಮತ್ತು ಬೆಳ್ಳೂರು ಪಟ್ಟಣ ಪಂಚಾಯತಿ, ಪಾಂಡವಪುರ ತಾಲೂಕಿನ 96 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯು ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಿತ್ತು. ಈಗ ಎರಡನೇ ಹಂತದಲ್ಲಿ ರೂ. 1091 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಮದ್ದೂರು ತಾಲೂಕಿನ 75 ಗ್ರಾಮಗಳಿಗೆ, ಮಳವಳ್ಳಿ ತಾಲೂಕಿನ – 103 ಗ್ರಾಮಗಳು, ಶ್ರೀರಂಗಪಟ್ಟಣ ತಾಲೂಕಿನ 47 ಗ್ರಾಮಗಳು ಹಾಗೂ ಮಂಡ್ಯ ತಾಲ್ಲೂಕಿನ 188 ಗ್ರಾಮಗಳು ಸೇರಿದಂತೆ ಒಟ್ಟು 413 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಒಟ್ಟಾರೆ ಎರಡೂ ಹಂತ ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ.

ಜಿಲ್ಲೆಯಲ್ಲಿ ಒಟ್ಟು ರೂ. 1781.36 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ

ಮೊದಲ ಹಂತದಲ್ಲಿ ರೂ. 690.36 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ದೊರೆತಿದ್ದು, ಎರಡನೇ ಹಂತದಲ್ಲಿ ನಾಲ್ಕು ತಾಲ್ಲೂಕುಗಳಿಗೆ ರೂ. 1091 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲು ಅನುಮೋದನೆ ಸಿಕ್ಕಿದೆ. ನಾಲ್ಕು ತಾಲ್ಲೂಕುಗಳಿಂದ ಒಟ್ಟು 679961 ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಅದರಲ್ಲಿ ಎಸ್.ಸಿ. ಸಮುದಾಯದ 96962 ಜನರಿಗೆ ಹಾಗೂ ಎಸ್‍ಟಿ ಸಮುದಾಯದ 6009 ಜನರಿಗೆ ಮತ್ತು ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.

ಎರಡು ತಿಂಗಳಲ್ಲಿ ಟೆಂಡರ್ ಆಹ್ವಾನ, 2023ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿ

ಶುದ್ಧ ಕುಡಿಯುವ ನೀರಿನ ಯೋಜನೆಯ ಕ್ರೀಯಾಯೋಜನೆಗೆ ಅನುಮೋದನೆ ಸಿಕ್ಕಿದ್ದು, ಎರಡು ತಿಂಗಳೊಳಗಾಗಿ ಟೆಂಡರ್ ಆಹ್ವಾನಿಸಲಾಗುವುದು. ಟೆಂಡರ್ ಪ್ರಕ್ರಿಯೆ ಮುಗಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಿ, 2023ಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಮೂರು ಸ್ಥಳಗಳಿಂದ ಯೋಜನೆಗೆ ಅಗತ್ಯವಿರುವ ನೀರನ್ನು ತರಲಾಗುತ್ತಿದೆ. ಶ್ರೀರಂಗಪಟ್ಟಣದ ವೆಸ್ಲಿ ಸೇತುವೆ, ಮಂಡ್ಯದ ಕೊಪ್ಪಲು ಹಾಗೂ ಮಳವಳ್ಳಿಯಲ್ಲಿ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ ನೀರನ್ನು ತರಲಾಗುವುದು.

 

`ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಅಜೆಂಡಾ’. ಸಚಿವ ನಾರಾಯಣಗೌಡ ಸಂತಸ

ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವುದೇ ನಮ್ಮ ಸರ್ಕಾರ ಹಾಗೂ ಪಕ್ಷದ ಅಜೆಂಡಾ. ಕಾವೇರಿ ತಟದಲ್ಲಿರುವ ಮಂಡ್ಯ ಜಿಲ್ಲೆಯ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಈ ಕೊರತೆಯನ್ನು ನೀಗಿಸಿ, ಪ್ರತಿ ಮನೆಗೂ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದು, ಅಂದು ನೀಡಿದ್ದ ಭರವಸೆ ಈಗ ಈಡೇರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೂ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೂ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್. ಈಶ್ವರಪ್ಪನವರಿಗೂ ಹಾಗೂ ಎಲ್ಲ ಸಂಪುಟ ಸಹುದ್ಯೋಗಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಗೆ ಇನ್ನಷ್ಟು ಯೋಜನೆಯನ್ನು ತರುವುದು ನನ್ನ ಗುರಿ. ಆ ದಿಶೆಯಲ್ಲಿ ನಿರಂತರ ಪ್ರಯತ್ನ ಮಾಡುತ್ತೇನೆ. ಪ್ರಸ್ತುತ ಶಾಶ್ವತ ಕುಡಿಯುವ ನೀರಿನ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದಕ್ಕೆ ಅತೀವ ಸಂತಸವಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

key words:  remaining -4 taluk- villages -Mandya district- permanent drinking water- project -minister- Narayana Gowda