ಸರ್ಕಾರದ ಅನುಮೋದನೆ ಪಡೆಯದೇ ಬೋಧಕೇತರ ಸಿಬ್ಬಂದಿಗಳ ನೇಮಕ: ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಗಳೂರು ವಿವಿಗೆ ನಿರ್ದೇಶನ.

ಬೆಂಗಳೂರು,ಫೆಬ್ರವರಿ,6,2023(www.justkannada.in): ಸರ್ಕಾರದ ಅನುಮೋದನೆ ಪಡೆಯದೇ ವಿಶ್ವವಿದ್ಯಾಲಯದ ಹಂತದಲ್ಲಿಯೇ ಬೋದಕೇತರ ಸಿಬ್ಬಂದಿಗಳ ನೇಮಕಾತಿ ಮಾಡಿಕೊಂಡಿರುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸಿ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವರಿಗೆ ಶಿಕ್ಷಣ ಇಲಾಖೆ  ನಿರ್ದೇಶನ ನೀಡಿದೆ.

ಈ ಕುರಿತು ಮಂಗಳೂರು ವಿವಿ ಕುಲಸಚಿವರಿಗೆ ಪತ್ರ ಬರೆದು ನಿರ್ದೇಶಿಸಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ(ಶಿಕ್ಷಣ ಇಲಾಖೆ), ಮಂಗಳೂರು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ/ಹೊರಗುತ್ತಿಗೆ ನೆಲೆಯಲ್ಲಿ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಂಡಿರುವ ಕ್ರಮಕ್ಕೆ ಘಟನೋತ್ತರ ಮಂಜೂರಾತಿ ಕೋರಿ ಸರ್ಕಾರಕ್ಕೆ, ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಲಾಯಿತು. ಅದರಂತೆ, ಈ ಕೆಳಕಂಡ ಅಂಶಗಳ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಜೂರಾದ 547 ಬೋಧಕೇತರ ಹುದ್ದೆಗಳಲ್ಲಿ ಖಾಲಿ ಇರುವ 321 ಹುದ್ದೆಗಳ ಎದುರಾಗಿ ಸರ್ಕಾರದ ಅನುಮೋದನೆ ಪಡೆಯದೇ ವಿಶ್ವವಿದ್ಯಾಲಯದ ಹಂತದಲ್ಲಿಯೇ ಭರ್ತಿಮಾಡಿಕೊಂಡಿರುವ 399 ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಘಟನೋತ್ತರ ಸಹಮತಿ ನೀಡಲು ಸಾಧ್ಯವಿರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ.

ಸರ್ಕಾರದ ಅನುಮೋದನೆ ಪಡೆಯದೇ ವಿಶ್ವವಿದ್ಯಾಲಯದ ಹಂತದಲ್ಲಿಯೇ ಈ ನೇಮಕಾತಿ ಮಾಡಿಕೊಂಡಿರುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸಿ ಕೂಡಲೇ ಸರ್ಕಾರಕ, ವರದಿ ಸಲ್ಲಿಸಬೇಕು. ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 213 ಯುಎನ್‌ಇ 2020, ದಿನಾಂಕ:04-08-2020, ಸರ್ಕಾರದ ಪತ್ರ ಸಂಖ್ಯೆ: ಇಡಿ 145 ಯುಎನ್ಇ 2021, ದಿನಾಂಕ:04-08-2021 ಮತ್ತು ಸರ್ಕಾರದ ಪತ್ರ ಸಂಖ್ಯೆ: ಇಡಿ 145 ಯುಎನ್‌ಇ 2021, ದಿನಾಂಕ:02-09 2021ರನ್ವಯ ಕ್ರಮ ಕೈಗೊಳ್ಳುವ ವಿಶ್ವ ವಿದ್ಯಾಲಯದ ಅಧಿಕಾರಿ / ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ(ಉನ್ನತ ಶಿಕ್ಷಣ ಇಲಾಖೆ) ನಂದಕುಮಾರ್ ಸೂಚಿಸಿದ್ದಾರೆ.

Key words: Recruitment -non-teaching -staff – Mangaluru University – take action