ಸಂಗೀತ ವಿವಿ, ಕಲಬುರಗಿ ವಿವಿ. ಕುಲಪತಿ ಸ್ಥಾನಕ್ಕೆ ಡಾ.ಎ.ರಂಗಸ್ವಾಮಿ ಹೆಸರು ಮರುಪರಿಶೀಲಿಸಿ: ಹೈಕೋರ್ಟ್ ಆದೇಶ

ಬೆಂಗಳೂರು: ಮೈಸೂರಿನ ಮುಕ್ತ ವಿವಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ.ರಂಗಸ್ವಾಮಿ ಹೆಸರನ್ನು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ. ಮತ್ತು ಕಲಬುರಗಿ ವಿವಿ ಗಳ ಕುಲಪತಿ ಸ್ಥಾನಕ್ಕೆ ಮರುಪರಿಶೀಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ಈ ಸಂಬಂಧ ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯಪೀಠ ಈ ತೀರ್ಪು ಪ್ರಕಟಿಸಿದೆ. ಎರಡೂ ವಿವಿಗಳ ಉಪಕುಲಪತಿಗಳ ಆಯ್ಕೆಗೆ ನೇಮಿಸಲಾಗಿದ್ದ ಶೋಧನಾ ಸಮಿತಿಗಳು, ಹಿಂದೆ ಕೆಎಸ್ ಒಯುನ ರಿಜಿಸ್ಟ್ರಾರ್ ಆಗಿದ್ದ ಲಿಂಗರಾಜಗಾಂಧಿ, ರಂಗಸ್ವಾಮಿ ವಿರುದ್ಧ ಶಿಸ್ತು ಸಮಿತಿ ವಿಚಾರಣೆ ಬಾಕಿ ಇದೆ, ಅದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ನೀಡಿರುವ ಮಾಹಿತಿಯಿಂದ ಪ್ರಭಾವಿತವಾಗದೆ ಸ್ವತಂತ್ರವಾಗಿ ಮರುಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಶೈಕ್ಷಣಿಕ ವಲಯದಲ್ಲಿ ಅಪಾರ ಅನುಭವ ಹೊಂದಿರುವ ರಂಗಸ್ವಾಮಿ, ಹಿಂದೆ ಗಂಗೂಬಾಯಿ ಹಾನಗಲ್ ವಿ.ವಿಯಲ್ಲಿ ರಿಜಿಸ್ಟ್ರಾರ್ ಆಗಿದ್ದರು, ಹಲವರಿಗೆ ಎಂಫಿಲ್ ಮತ್ತು ಪಿಎಚ್ ಡಿಗೆ ಮಾರ್ಗದರ್ಶನ ನೀಡಿದ್ದ ಅವರು, ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿ.ವಿ. ಮತ್ತು ಕಲಬುರಗಿ ವಿವಿ ಗಳ ಕುಲಪತಿ ಹುದ್ದೆಗೆ ಸರಕಾರ ಶೋಧನಾ ಸಮಿತಿಗಳನ್ನು ರಚನೆ ಮಾಡಿದ್ದಾಗ ಕುಲಪತಿ ಹುದ್ದೆಗೆ ಅರ್ಜಿ ಹಾಕಿದ್ದರು. ಸುಳ್ಳು ಹಾಗೂ ದುರುದ್ದೇಶಪೂರ್ವಕವಾಗಿ ತಾವು ಉಪಕುಲಪತಿಗಳಾಗುವುದನ್ನು ತಡೆಯಲು ಕುತಂತ್ರ ಹೂಡಲಾಗಿದೆ ಎಂದು ರಂಗಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದರು.