ರಿಯಾಲಿಟಿ ಚೆಕ್ : ‘ಮಂಗಳೂರಿನ ಬೀಚ್‌ನಲ್ಲಿ ಕಂಡು ಬಂದ ಮತ್ಸ್ಯಕನ್ಯೆ’ ವೈರಲ್ ವೀಡಿಯೊ ಹಿಂದಿನ ನಿಜವಾದ ಕತೆ.

ಮಂಗಳೂರು, ಅಕ್ಟೋಬರ್ 22, 2021 (www.justkannada.in): ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಒಂದು ಬೀಚ್‌ ನಲ್ಲಿ ರಾತ್ರಿ ವೇಳೆ ಮತ್ಸ್ಯಕನ್ಯೆ ಕಂಡು ಬಂದಿರುವುದಾಗಿಯೂ, ಕೆಲವು ಯುವಕರು ಅದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವುದಾಗಿಯೂ ಗೋಚರಿಸುವ ಒಂದು ವೀಡಿಯೊ ವೈರಲ್ ಆಗಿದೆ. ಬಹುಶಃ ನೀವೆಲ್ಲರೂ ಅದನ್ನು ನೋಡಿರಬಹುದು.

ಮಂಗಳೂರಿನ ಬೀಚ್ ಒಂದರಲ್ಲಿ ರಾತ್ರಿ ವೇಳೆ ಅರ್ಧ ಮೀನು ಅರ್ಧ ಮಹಿಳೆಯಂತೆ ಕಾಣುತ್ತಿರುವಂತಹ ಒಂದು ಆಕೃತಿಯ ವೀಡಿಯೊ ವಾಟ್ಸ್ಆ್ಯಪ್ ಸೇರಿದಂತೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ವೀಡಿಯೊದಲ್ಲಿ ಹಗ್ಗಗಳು, ಬಲೆ ಹಾಗೂ ತ್ಯಾಜ್ಯದಿಂದ ಸುತ್ತುವರೆದಿರುವ ಓರ್ವ ‘ಮತ್ಸ್ಯಕನ್ಯೆ’ ಇದ್ದು, ಮರಳಿನ ಮೇಲೆ ವಿಚಿತ್ರವಾದ ಧ್ವನಿಯಲ್ಲಿ ಕಿರುಚುತ್ತಿದ್ದು, ಕೆಲವು ಯುವಕರು ಆ ಮತ್ಸ್ಯಕನ್ಯೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.

‘ಇಂಡಿಯಾ ಟುಡೆ’ದ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ (ಎಎಫ್‌ಡಬ್ಯುಎ) ಈ ಸುದ್ದಿಯ ಹಿಂದಿನ ನಿಜಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದು, ವಾಸ್ತವದಲ್ಲಿ ವೈರಲ್ ಆಗಿರುವ ಈ ವೀಡಿಯೊ ಕ್ಲಿಪ್ಪಿಂಗ್ ಶ್ರೀಲಂಕಾದಲ್ಲಿ ಸಮುದ್ರ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಂಬಂಧ ಚಿತ್ರೀಕರಿಸಿರುವ ಒಂದು ವೀಡಿಯೊ ಎಂದು ಪತ್ತೆ ಹಚ್ಚಿದೆ.

ಎಡಬ್ಲ್ಯುಎಫ್‌ಎ ತಪಾಸಣೆ

ಎಡಬ್ಲ್ಯುಎಫ್‌ಎ ಈ ವೀಡಿಯೊವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿತು. ಆ ವೀಡಿಯೊದಲ್ಲಿ ಯುವಕರು ಮಾತನಾಡುತ್ತಿರುವ ಭಾಷೆ ಕನ್ನಡವಲ್ಲದೆ ಸಿಂಹಳಿ ಭಾಷೆ ಎನ್ನುವುದನ್ನು ಪತ್ತೆ ಹಚ್ಚಿದೆ. ನಂತರ ಆ ವೀಡಿಯೊವನ್ನು ಮಂಗಳೂರಿನ ಕೆಲವು ಸ್ಥಳೀಯ ಪತ್ರಕರ್ತರಿಗೆ ಕಳುಹಿಸಲಾಯಿತು. ಅವರು ಆ ವೀಡಿಯೊ ಗಮನಿಸಿ ತಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಅಂತಹ ಯಾವುದೇ ಸುದ್ದಿ ವರದಿಯಾಗಿಲ್ಲ ಎಂದೂ ಮತ್ತು ಆ ವೀಡಿಯೊದಲ್ಲಿರುವ ಭಾಷೆ ಮಂಗಳೂರಿನ ಭಾಷೆಯೊಂದಿಗೆ ತಾಳೆ ಆಗುವುದಿಲ್ಲ ಎಂದೂ ತಿಳಿಸಿದರು.

ತಪಾಸಣೆಯನ್ನು ಮುಂದುವರೆಸಿದಾಗ, ಶ್ರೀಲಂಕಾ ಅಲ್ಲದೆ ಬೇರೆ ಸ್ಥಳದ ಮೂಲದ ‘ಟ್ರಿಪ್ ಪಿಸ್ಸೊ’ ಎಂಬ ಒಂದು ಯೂಟ್ಯೂಬ್ ಚಾನೆಲ್, ದಿನಾಂಕ ೭, ೨೦೨೧ರಂದು ಈ ವೀಡಿಯೊವನ್ನು ಯೂಟ್ಯೂಬ್ ಜಾಲತಾಣದಲ್ಲಿ ಅಪ್‌ ಲೋಡ್ ಮಾಡಿರುವುದಾಗಿ ತಿಳಿಯಿತು. ಜೊತೆಗೆ ವೈರಲ್ ಆಗಿರುವ ವೀಡಿಯೋದ ಮುಂದುವರೆದ ಭಾಗವೂ ಅದರಲ್ಲಿದೆ. ಆ ವೀಡಿಯೊದ ಕ್ಯಾಪ್ಷನ್‌ನಲ್ಲಿ ‘ಶ್ರೀಲಂಕಾದಲ್ಲಿ ಸೆರೆಹಿಡಿಯಲಾದ ಮತ್ಸ್ಯಕನ್ಯೆ’ (“Real Mermaid caught in Sri Lanka”) ಎಂದು ನಮೂದಿಸಲಾಗಿದೆ. ವೀಡಿಯೊದ ಶೀರ್ಷಿಕೆ ‘ಮತ್ಸ್ಯಕನ್ಯೆಯ ಚೀರಾಟ’ (‘Scream of the Mermaid’) ಎಂದಿದೆ.

ಆ ವೀಡಿಯೊದ ಮೂಲ ಆವೃತ್ತಿಯಲ್ಲಿ ೫:೫೯ ಸೆಕೆಂಡುಗಳಾದ ನಂತರ, ಆ ಮತ್ಸ್ಯಕನ್ಯೆ ಕ್ಯಾಮೆರಾಗೆ ಮಣ್ಣನ್ನು ಎರಚುತ್ತಿರುವುದು ಕಂಡು ಬರುತ್ತದೆ. ಆದರೆ ಮೂಲ ವೀಡಿಯೊದಲ್ಲಿ ಈ ಸನ್ನಿವೇಶದ ನಂತರ ಸಮುದ್ರದ ಸಂರಕ್ಷಣೆ ಹಾಗೂ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿಯುವುದರಿಂದ ಸಂಭವಿಸುವ ಅಪಾಯಗಳ ಕುರಿತಾದ ಸಂದೇಶಗಳು ಮೂಡಿ ಬರುತ್ತವೆ. ಆ ಸಂದೇಶ ಈ ರೀತಿ ಇದೆ: “ನೀವು ತೆಗೆದುಕೊಳ್ಳುವ ಪ್ರತಿಯೊಂದು ಉಸಿರೂ ಸಹ ಸಮುದ್ರದಿಂದ ಬರುತ್ತಿದೆ. ಇಂದು ಇಡೀ ಜಗತ್ತಿನ ಹುಟ್ಟಿಗೆ ಕಾರಣವಾದ ತಾಯಿಯ ದಿನ. ಹೌದು, ಇಂದು ಜೂನ್ ೮, ‘ವಿಶ್ವ ಸಾಗರಗಳ ದಿನ’. ನಾವೆಲ್ಲರೂ ನಮಗೆ ಆಮ್ಲಜನಕವನ್ನು ನೀಡುತ್ತಿರುವ ಸಮುದ್ರಗಳನ್ನು ಸಂರಕ್ಷಿಸೋಣ. ಸಮುದ್ರ ಮಾಲಿನ್ಯದ ವಿರುದ್ಧ ಹೋರಾಡೋಣ,” ಎಂಬ ಸಂದೇಶ ಪರದೆಯ ಮೇಲೆ ಮೂಡಿ ಬರುತ್ತದೆ.

ಮುಂದುವರೆದು ಈ ವೀಡಿಯೊ ೬:೩೫ ಸೆಕೆಂಡುಗಳಾದ ನಂತರ ಫ್ರೇಂ ಪುನಃ ಬೀಚ್ ಕಡೆಗೆ ಹೊರಳುತ್ತದೆ. ಆದರೆ ಅಲ್ಲಿ ಮತ್ಸ್ಯಕನ್ಯೆ ‘ ಮಾಯವಾಗಿದ್ದಾಳೆ. ವೈರಲ್ ಆಗಿರುವ ಚಿಕ್ಕ ಆವೃತ್ತಿಯ ವೀಡಿಯೋದಲ್ಲಿ ಮತ್ಸ್ಯಕನ್ಯೆ ಮೈ ಮೇಲಿದ್ದಂತಹ ತ್ಯಾಜ್ಯ ಹಾಗೂ ಹಗ್ಗಗಳನ್ನು ತೆಗೆಯುತ್ತಿರುವ ವ್ಯಕ್ತಿ, ಒಬ್ಬನೇ ಸಮುದ್ರದ ದಂಡೆಯ ಕಡೆ ನಡೆದುಕೊಂಡು ಹೋಗುತ್ತಿದ್ದಾನೆ.

ವೀಡಿಯೊದ ಸಂದೇಶಗಳ ವಿಭಾಗದಲ್ಲಿ ವೀಡಿಯೊದ ಪರಿಕಲ್ಪನೆ ‘ಟ್ರಿಪ್ ಪಿಸ್ಸೊ’ದ ಸಹಸ್ಥಾಪಕ ‘ಉದಯ ಹೆವಗಾಮ’, ಎಂಬ ಅಕ್ಷರಗಳು ಗೋಚರಿಸುತ್ತದೆ.

ನಂತರ ಎಎಫ್‌ಡಬ್ಲ್ಯುಎ ‘ಟ್ರಿಪ್ ಪಿಸ್ಸೊ’ದ ಮುಖ್ಯ ಮಾರ್ಕೆಟಿಂಗ್ ವ್ಯವಸ್ಥಾಪಕ ಹಶನ್ ಮದುಶ್ಕಾ ಅವರನ್ನು ಸಂಪರ್ಕಿಸಿತು. ಅವರು, “ನಾವು ಸಾಮಾನ್ಯವಾಗಿ ನಮ್ಮ ಯೂಟ್ಯೂಬ್ ಚಾನೆಲ್‌ ನಲ್ಲಿ ವಿಶ್ವದ ಖ್ಯಾತಿ ಹೊಂದಿರಿಲ್ಲದಂತಹ ಅದ್ಭುತಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತೇವೆ. ಈ ವರ್ಷ ‘ವಿಶ್ವ ಸಾಗರಗಳ ದಿನ’ದಂದು ನಾವು ಏನಾದರೂ ವಿಶೇಷವಾಗಿರುವುದನ್ನು ಮಾಡಬೇಕು ಎಂದುಕೊಂಡಿದ್ದೆವು. ಆಗ ಶ್ರೀಲಂಕಾದ ಕರವಾಳಿ ಪ್ರದೇಶದಲ್ಲಿ ರಾಸಾಯನಿಕಗಳನ್ನು ಹೊತ್ತೊಯ್ಯುತ್ತಿದ್ದಂತಹ ಎಕ್ಸ್-ಪ್ರೆಸ್ ಪರ್ಲ್ ಎಂಬ ಸರಕು ಸಾಗಣೆ ಮಾಡುವ ಹಡಗು ಬೆಂಕಿಗೆ ಆಹುತಿಯಾಗಿ ಅದರಿಂದ ಸಮುದ್ರಕ್ಕೆ ಉಂಟಾಗುತ್ತಿದ್ದಂತಹ ಬೃಹತ್ ಪರಿಸರ ವಿನಾಶದ ಬಗ್ಗೆ ಮಾಹಿತಿ ಲಭಿಸಿತು. ಆ ಘಟನೆ ನಮಗೆ ಜನರಲ್ಲಿ ಸಮುದ್ರಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರೇರೇಪಣೆ ನೀಡಿತು. ಆಗ ಹುಟ್ಟಿಕೊಂಡಿದ್ದೆ ಈ ಮತ್ಸ್ಯಕನ್ಯೆಯ ಪರಿಕಲ್ಪನೆ,” ಎಂದು ವಿವರಿಸಿದರು.

ಜೊತೆಗೆ ಎಎಫ್‌ಡಬ್ಲ್ಯುಎ ‘ಟ್ರಿಪ್ ಪಿಸ್ಸೊ’ದ ಫೇಸ್‌ಬುಕ್ ಪುಟದಲ್ಲಿ ಆ ಚುಟುಕು ಚಿತ್ರದ ಹಿಂದಿರುವ ಸೀನ್‌ ಗಳ ವೀಡಿಯೋವನ್ನೂ ಸಹ ಸಂಗ್ರಹಿಸಿದೆ.

ಉದಯ ಅವರು ಜೂನ್ ೮ರಂದೇ ತಮ್ಮ ಫೇಸ್‌ ಬುಕ್ ಪುಟದಲ್ಲಿ ಈ ವೀಡಿಯೊದ ಸಾರಾಂಶವನ್ನೂ ಸಹ ಪ್ರಕಟಿಸಿದ್ದಾರೆ. ಆ ಪೋಸ್ಟ್ ನಲ್ಲಿ ಉದಯ ಅವರು ವಿವರಿಸಿರುವಂತೆ, ಈ ವೀಡಿಯೊ ಫಿಲಂ ಅನ್ನು ಸಮುದ್ರಗಳ ಸಂಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ‘ವಿಶ್ವ ಸಾಗರಗಳ ದಿನ’ಕ್ಕಾಗಿ ನಿರ್ಮಿಸಲಾಗಿರುವುದಾಗಿ ತಿಳಿಸುತ್ತದೆ.

ಇದರಿಂದಾಗಿ ಈ ವೈರಲ್ ವೀಡಿಯೊ ಶ್ರೀಲಂಕಾದಲ್ಲಿ ನಿಸರ್ಗ ಸಂರಕ್ಷಣೆಯ ಕುರಿತು ಅರಿವನ್ನು ಮೂಡಿಸಲು ನಿರ್ಮಿಸಿರುವ ಫಿಲಂ ಎಂದೂ, ಮಂಗಳೂರು ಬೀಚ್‌ ನಲ್ಲಿ ಪತ್ತೆ ಹಚ್ಚಲಾದ ಮತ್ಸ್ಯಕನ್ಯೆ ವೀಡಿಯೊ ಅಲ್ಲ ಎಂದು ಸ್ಪಷ್ಟವಾಗುತ್ತದೆ.

ಸುದ್ದಿ ಮೂಲ: ಇಂಡಿಯಾ ಟುಡೆ

Key words: real story -behind – mermaid- viral video -found – beach – Mangalore