ಭಾರತೀಯ ಪೊಲೀಸ್ ಪ್ರತಿಷ್ಠಾನ ನೀಡಿದ ರ್ಯಾಂಕಿಂಗ್ ನಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ 14ನೇ ಸ್ಥಾನ.

ಬೆಂಗಳೂರು, ನವೆಂಬರ್ 22, 2021 (www.justkannada.in): ಭಾರತೀಯ ಪೊಲೀಸ್ ಪ್ರತಿಷ್ಠಾನದ ಇತ್ತೀಚಿನ ರ್ಯಾಂಕಿಂಗ್‌ ಗಳ ಪ್ರಕಾರ ಕರ್ನಾಟಕದ ಪೊಲೀಸರು 14ನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ 14ನೇ ಶ್ರೇಯಾಂಕವನ್ನು ನೀಡಲಾಗಿದ್ದು, ಇದು ಭಾರತೀಯ ಪೊಲೀಸ್ ಪ್ರತಿಷ್ಠಾನ (ಐಪಿಎಫ್) ೨೦೨೧ನೇ ಸಾಲಿಗೆ ನೀಡಿರುವಂತಹ ದಕ್ಷಿಣ ಭಾರತದ ಇತರೆ ಎಲ್ಲಾ ರಾಜ್ಯಗಳ ಹೋಲಿಕೆಯಲ್ಲಿ ಕಡೆಯ ಶ್ರೇಯಾಂಕವಾಗಿದೆ. ಉನ್ನತ ಶ್ರೇಯಾಂಕಗಳು ನೆರೆಯ ರಾಜ್ಯಗಳ ಪಾಲಾಗಿದೆ – ಆಂಧ್ರ ಪ್ರದೇಶ (೧), ತೆಲಂಗಾಣ (೨), ಕೇರಳ (೪), ಪುದುಚರ್ರಿನ (೧೦), ತಮಿಳುನಾಡು (೧೩).

ಎಲ್ಲಾ ರಾಜ್ಯಗಳ ಪೊಲೀಸ್ ದಳಗಳ ಶ್ರೇಯಾಂಕವನ್ನು ವಿವಿಧ ಮಾನದಂಡಗಳನ್ನು ಅಳೆದು ಅದರ ಆಧಾರದ ಮೇಲೆ ನೀಡಲಾಗಿದೆ. ವೈಯಕ್ತಿಕ ಮಾನದಂಡಗಳ ಪೈಕಿ, ಕರ್ನಾಟಕ ಪೊಲೀಸರು ಸೂಕ್ಷ್ಮತೆಯ (ಸಂವೇದನಾಶೀಲತೆ) ಅಂಶದಲ್ಲಿ 11ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಐಪಿಎಫ್‌ ನ ವರದಿಯ ಪ್ರಕಾರ ಪೊಲೀಸರ್ ಸೂಕ್ಷ್ಮತೆ (police sensitivity) ಪ್ರಧಾನ ಮಂತ್ರಿಗಳ ” ಪೊಲೀಸಿಂಗ್ ಉಪಕ್ರಮದ ಮೊದಲ ಅಂಶವಾಗಿದೆ. ತೊಂದರೆಯಲ್ಲಿರುವಂತಹ ನಾಗರಿಕರ ವಿರುದ್ಧ ಸೂಕ್ಷ್ಮತೆ, ಸಹಾನುಭೂತಿ ಹಾಗೂ ಕನಿಕರದ ವರ್ತನೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೂ ಇರಬೇಕಾಗಿರುವಂತಹ ಬಹಳ ನಿರ್ಣಾಯಕವಾದ ಅಂಶವಾಗಿದೆ. ಪೊಲೀಸರ ಸೂಕ್ಷ್ಮತೆ ಅಥವಾ ಸಂವೇದನಾಶೀಲತೆ ಪೊಲೀಸರ ಪರಿಣಾಮಕಾರಿತ್ವ, ನ್ಯಾಯಸಮ್ಮತೆ ಹಾಗೂ ವಿಶ್ವಾಸ ಸೇರದಿಂತೆ ಅನೇಕ ಅಂಶಗಳನ್ನು ಆಧರಿಸಿದೆ.

ಕಟ್ಟುನಿಟ್ಟು ಹಾಗೂ ಉತ್ತಮ

ಕಟ್ಟುನಿಟ್ಟು ಹಾಗೂ ಉತ್ತಮತೆಯ ಅಂಶಗಳಲ್ಲಿ ರಾಜ್ಯಕ್ಕೆ 16ನೇ ಶ್ರೇಯಾಂಕ ದೊರೆತಿದೆ. ಐಪಿಎಫ್ ವರದಿಯ ಪ್ರಕಾರ ಈ ಮಾನದಂಡವನ್ನು ಅಳೆಯಲು, ಪೊಲೀಸರಲ್ಲಿರುವ ಕಟ್ಟುನಿಟ್ಟಾದ ಹಾಗೂ ವಿನಯತೆಯುಳ್ಳ ವರ್ತನೆಯ ಅಂಶಗಳಿಗೆ ಸಂಬAಧಿಸಿದಂತೆ ನಾಗರಿಕರ ಗ್ರಹಿಕೆಯನ್ನು ಪ್ರಶ್ನಿಸಲಾಗಿತ್ತು.

ದೊರೆಯುವಿಕೆ

ಈ ವರ್ಗದಡಿ ರಾಜ್ಯಕ್ಕೆ ೧೫ನೇ ಶ್ರೇಯಾಂಕ ಲಭಿಸಿದೆ. ಈ ವರದಿಯು ನಾಗರಿಕರಿಗೆ ಪೊಲೀಸರ ದೊರೆಯುವಿಕೆ, ನ್ಯಾಯ ದೊರೆಯುವಿಕೆಯ ಕಡೆಗೆ ಒಂದು ಹೆಜ್ಜೆಯಾಗಿದೆ.

ವರದಿಯ ಪ್ರಕಾರ, “ದೂರುಗಳನ್ನು ದಾಖಲಿಸಲೇ ಇರಲಿ ಅಥವಾ ಸೇವೆಗಳನ್ನು ಪಡೆದುಕೊಳ್ಳಲು ಆಗಲಿ, ನಾಗರಿಕರು ಯಾವುದೇ ಅಡಚಣೆ ಇಲ್ಲದೆ ಪೊಲೀಸರು ಹಾಗೂ ಪೊಲೀಸ್ ಠಾಣೆಯನ್ನು ಮುಕ್ತವಾಗಿ ತಲುಪುವಂತಿರಬೇಕು. ಪೊಲೀಸರು ಸುಲಭವಾಗಿ ದೊರೆಯುವಂತಿರುವುದು, ನಾಗರಿಕರಲ್ಲಿ ಪೊಲೀಸರ ಕುರಿತು ವಿಶ್ವಾಸವನ್ನು ಹುಟ್ಟಿಸುವಂತಹ ಒಂದು ಪ್ರಮುಖವಾದ ಅಂಶ. ನಾಗರಿಕರಿಗೆ ಪೊಲೀಸರಲ್ಲಿ ವಿಶ್ವಾಸವೇ ಇಲ್ಲದಿದ್ದರೆ ಅವರು ಪೊಲೀಸರ ಬಳಿಗೆ ಹೋಗಲು ಹಾಗೂ ಅಪರಾಧದ ಕುರಿತು ಪ್ರಕರಣವನ್ನು ದಾಖಲಿಸಲು ಬಯಸುವುದಿಲ್ಲ. ಈ ಪ್ರಕಾರವಾಗಿ ನಾಗರಿಕರಿಗೆ ನ್ಯಾಯದ ದೊರೆಯುವಿಕೆಯೇ ಸೀಮಿತಗೊಂಡಂತಾಗುತ್ತದೆ. ವಾಸ್ತವದಲ್ಲಿ ನಮ್ಮ ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿ ಆಗಬೇಕಿದೆ. ಆದರೆ ಈಗಲೂ ಸಹ ಬಹುಪಾಲು ಸಾಮಾನ್ಯ ಜನರು ವಿವಿಧ ಕಾರಣಗಳು ಹಾಗೂ ಹಂತಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಲು ಭಯಪಡುತ್ತಾರೆ. ಇದು ಬಹಳ ಗಂಭೀರವಾದ ವ್ಯವಸ್ಥೆಯ ವಿಷಯವಾಗಿದ್ದು, ನ್ಯಾಯ ದೊರಕಿಸಿಕೊಡುವ ವಿಧಾನಕ್ಕೆ ತಡೆಯೊಡ್ಡುತ್ತದೆ.

ಪ್ರತಿಕ್ರಿಯಿಸುವಿಕೆ

ಪ್ರತಿಕ್ರಿಯಿಸುವಿಕೆಯ ವರ್ಗದಲ್ಲಿ ರಾಜ್ಯದ ಪೊಲೀಸರಿಗೆ ೧೭ನೇ ಶ್ರೇಯಾಂಕ ನೀಡಲಾಗಿದೆ. ಜನರು ಪೊಲೀಸ್ ಠಾಣೆಗೆ ದೂರುಗಳನ್ನು ನೀಡಲು, ಕಾಳಜಿಗಳು ಹಾಗೂ ಸಮಸ್ಯೆಗಳ ಬಗ್ಗೆ ತಿಳಿಸಲು ಕರೆ ಮಾಡಿದಾಗ ಕರೆಗೆ ಸ್ಪಂಧಿಸುವುದನ್ನು ಈ ವರ್ಗದಡಿ ಅಂದಾಜಿಸಲಾಯಿತು.

ಪೊಲೀಸರು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ, ನಾಗರಿಕರಿಂದ ದೂರುಗಳನ್ನು ಪಡೆಯುವುದು, ಸಂತ್ರಸ್ತರನ್ನು ಆಲಿಸುವುದು, ಅನುಮಾನಿತರು, ಸಾಕ್ಷಿಗಳು, ರಾಜಕಾರಣಿಗಳು, ಸಮುದಾಯದ ನಾಯಕರು ಅಥವಾ ಸಾಮಾನ್ಯ ನಾಗರಿಕರಿಗೆ ಪ್ರತಿಕ್ರಿಯಿಸಬೇಕಾಗುತ್ತದೆ.

ಈ ರೀತಿ ಪ್ರತಿಸ್ಪಂದನೆ ಸಾರ್ವಜನಿಕರ ವಿಶ್ವಾಸಗಳಿಸುವ ಒಂದು ಪ್ರಮುಖವಾದ ಅಂಶವಾಗಿರುತ್ತದೆ. ಉದಾಹರಣೆಗೆ, ಯಾರಾದರೂ ನಾಗರಿಕರು ತಮಗೆ ತೊಂದರೆ ಎದುರಾದಾಗ ಪೊಲೀಸರಿಗೆ ಕರೆ ಮಾಡಿದರೆ, ಹತ್ತಿರದ ಪೊಲೀಸ್ ಪ್ಯಾಟ್ರೊಲ್ ವಾಹನ ತತ್ ಕ್ಷಣ ನೆರವಿಗೆ ಧಾವಿಸಿದರೆ ನಾಗರಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ. ನಾಗರಿಕರು ತೊಂದರೆಯಲ್ಲಿರುವಾಗ ಅವರ ಅಗತ್ಯಗಳಿಗೆ ತಕ್ಕಂತೆ ಪೊಲೀಸರು ತಮ್ಮ ಸೇವೆಗಳನ್ನು ಸರಿಹೊಂದಿಸುವುದು ನಾಗರಿಕರ ವಿಶ್ವಾಸ ಗಳಿಸುವಲ್ಲಿ ಒಂದು ಪ್ರಮುಖವಾದ ಅಂಶ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೆರವಾಗುವ ಹಾಗೂ ಜನಸ್ನೇಹಿಯೂ ಆಗಿರುವ ಕರ್ನಾಟಕದ ಪೊಲೀಸರು ನೆರವನ್ನು ಒದಗಿಸುವುದು ಹಾಗೂ ಸ್ನೇಹಪರವಾಗಿ ಪ್ರತಿಕ್ರಿಯಿಸುವ ವಿಷಯದಲ್ಲಿ ೧೫ನೇ ಶ್ರೇಯಾಂಕವನ್ನು ಗಳಿಸಿದ್ದಾರೆ. ವರದಿಯಲ್ಲಿ ತಿಳಿಸಿರುವಂತೆ, ತಮ್ಮ ಕರ್ತವ್ಯಗಳ ಕಡೆ ನಿರ್ಲಕ್ಷ್ಯವನ್ನು ತೋರಿಸುವಂತಹ ಹಾಗೂ ಜವಾಬ್ದಾರಿಯುತವಾಗಿ ಇಲ್ಲದಿರುವಂತಹ ಅಧಿಕಾರಿಗಳ ಹೋಲಿಕೆಯಲ್ಲಿ ನಾಗರಿಕರು ತಮ್ಮ ಅಹವಾಲುಗಳಿಗೆ ಕೂಡಲೇ ಸ್ಪಂದಿಸುವ, ಕಟ್ಟುನಿಟ್ಟಾಗಿರುವ ಅಧಿಕಾರಿಗಳನ್ನು ಮೆಚ್ಚುತ್ತಾರಂತೆ.

ಒಂದು ಸ್ನೇಹಪರವಾದ ಹಾಗೂ ನೆರವಾಗುವಂತಹ ದೃಷ್ಟಿಕೋನವನ್ನು ನಿರೀಕ್ಷಿಸುತ್ತಾರೆ. ತೊಂದರೆಯಲ್ಲಿರುವ ನಾಗರಿಕರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ತಮಗೆ ಅಗತ್ಯವಿರುವಂತಹ ನೆರವು ಲಭಿಸಿದಾಗ ಜನರ ಮನಸ್ಸಿನಲ್ಲಿ ಬಹಳ ದೀರ್ಘ ಕಾಲದವರೆಗೂ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ ಉಳಿಯುತ್ತದೆ ಎನ್ನುತ್ತೆ ವರದಿ.

ತಂತ್ರಜ್ಞಾನ ಅಳವಡಿಕೆ

ಈ ವರ್ಗದಡಿ ರಾಜ್ಯದ ಪೊಲೀಸರಿಗೆ ದೇಶದಲ್ಲೇ ನಾಲ್ಕನೇ ಶ್ರೇಯಾಂಕ ಲಭಿಸಿದೆ. ವರದಿಯಲ್ಲಿ ತಿಳಿಸಿರುವಂತೆ ಅನೇಕ ರಾಜ್ಯಗಳ ಪೊಲೀಸ್ ಇಲಾಖೆಗಳು ಪೊಲೀಸಿಂಗ್, ಅಪರಾಧ ನಿಯಂತ್ರಣ, ತಪಾಸಣೆ, ಜನರ ಗುಂಪಿನ ನಿಯಂತ್ರಣ, ವಾಹನ ಸಂಚಾರ ನಿರ್ವಹಣೆ, ಭದ್ರತೆ ನಿರ್ವಹಣೆ ಹಾಗೂ ಬುದ್ದಿವಂತಿಕೆ ಸಂಗ್ರಹ ಹಾಗೂ ಸಂಸ್ಕರಣೆ ಸೇರಿದಂತೆ ಪ್ರತಿಯೊಂದು ಅಂಶಕ್ಕೂ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ಬಹಳ ಪ್ರಶಂಸಾರ್ಹ.

ಆಡಳಿತದಲ್ಲಿ ಅನುಕೂಲ, ಮಾನವ ಸಂಪನ್ಮೂಲ ನಿರ್ವಹಣೆ, ಪೊಲೀಸ್ ಸಂವಹನೆ, ಜನರೊಂದಿಗೆ ಪರಸ್ಪರ ಸಂವಾದಗಳು ಹಾಗೂ ಹೊಸ ಹೊಸ ತರಬೇತಿ ಮಾದರಿಗಳನ್ನು ಪರಿಚಯಿಸುವಂತಹ ವಿಷಯಗಳಲ್ಲಿ ತಂತ್ರಜ್ಞಾನ ಪೊಲೀಸ್ ಇಲಾಖೆಗೆ ಬಹಳ ನೆರವಾಗುತ್ತಿದೆ. ದೇಶದ ಅನೇಕ ಪೊಲೀಸ್ ಇಲಾಖೆಗಳು ಹಾಗೂ ವ್ಯಕ್ತಿಗತ ಅಧಿಕಾರಿಗಳು ಪೊಲೀಸರ ಪ್ರತಿಕ್ರಿಯಿಸುವ ಗತಿ, ಪೊಲೀಸ್ ಸೇವೆ ತಲುಪಿಸುವಿಕೆಯಲ್ಲಿ ಹೊಸ ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸುವುದು, ಕೇವಲ ಸೇವೆಗಳ ಗುಣಮಟ್ಟ ಹಾಗೂ ಕ್ಷಮತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ನಾಗರಿಕರಿಗೆ ಪೊಲೀಸರ ದೊರೆಯುವಿಕೆಯನ್ನು ಸುಧಾರಿಸುವುದು ಮತ್ತು ಆ ಮೂಲಕ ಪೊಲೀಸ್ ಪ್ರತಿಕ್ರಿಯಾತ್ಮಕತೆಯ ಒಟ್ಟಾರೆ ಗುಣಮಟ್ಟವನ್ನು ವೃದ್ಧಿಸುವಲ್ಲಿ ನವೀನ ಪರಿಹಾರಗಳನ್ನು ಪರಿಚಯಿಸುತ್ತಿದ್ದಾರೆ.

ಪ್ರಶಂಸೆ

ಕಳಪೆ ಶ್ರೇಯಾಂಕಗಳ ಹೊರತಾಗಿಯೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ, ಜನರೊಂದಿಗೆ ಪರಸ್ಪರ ಸಂವಾದ ನಡೆಸುವಂತಹ ಜನಾಗ್ರಹ ಕಾರ್ಯಕ್ರಮದಂತಹ ಕಾರ್ಯಕ್ರಮಗಳು ಜನರ ಪ್ರಶಂಸೆಯನ್ನು ಗಳಿಸಿದೆ.

ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವಂತೆ, ಇತರೆ ರಾಜ್ಯಗಳ ಪೊಲೀಸ್ ಇಲಾಖೆಗಳ ಹೋಲಿಕೆಯಲ್ಲಿ, ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡುವ ಸಿಬ್ಬಂದಿಗಳ ಕೊರತೆಯಿಂದಾಗಿ ಕಡಿಮೆ ಶ್ರೇಯಾಂಕ ದೊರೆತಿದೆಯಂತೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Ranked- 14th – State Police Department – ranking – Indian Police Foundation.