ಬಡ ಕರಾಟೆ ಪಟುವಿಗೆ ಶ್ರೀಲಂಕಾ ತೆರಳಲು ವೇತನದ ಹಣ ನೀಡಿದ ಅಧಿಕಾರಿ….

ರಾಮನಗರ, ಡಿ.22,2019(www.justkannada.in):  ಆರ್ಥಿಕ‌ ಸಂಕಷ್ಟದಲ್ಲಿದ್ದ ಕರಾಟೆಪಟುವಿಗೆ ಶ್ರೀಲಂಕಾದಲ್ಲಿ  ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲು  ವೇತನದ ಹಣ ನೀಡುವ ಮೂಲಕ ಜಿಲ್ಲಾ ವಾರ್ತಾಧಿಕಾರಿ ಎಸ್.ಶಂಕರಪ್ಪ ಅವರು ಮಾನವೀಯತೆ ಮೆರೆದಿದ್ದಾರೆ.

ಚನ್ನಪಟ್ಟಣ ಬಳಿಯ ಕೊಂಡಾಪುರ ಗ್ರಾಮದ ಕಡುಬಡವರಾಗಿರುವ ಸಿದ್ದರಾಮೇಗೌಡರವರ ಪುತ್ರಿ ಪೂರ್ಣಿಮಾ ಅನೇಕ ವರ್ಷಗಳಿಂದ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಶ್ರೀಲಂಕಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ಗೆ ತೆರಳಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಇವರು ಮಾಧ್ಯಮದ ಮುಖಾಂತರ ತಮ್ಮ ಸಮಸ್ಯೆಯನ್ನು  ತಿಳಿಸಿದ್ದರು.

ಇದಕ್ಕೆ  ಸ್ಪಂದಿಸಿದ ಜಿಲ್ಲಾ ವಾರ್ತಾಧಿಕಾರಿ ಶಂಕರಪ್ಪರವರು ತಮ್ಮ ಕಛೇರಿಗೆ ಪೂರ್ಣಿಮಾ ಕುಟುಂಬವನ್ನು ಖುದ್ದು ಕರೆಯಿಸಿಕೊಂಡು ತಮ್ಮ ವೇತನದ ಭಾಗವಾಗಿ  5 ಸಾವಿರ ರೂಗಳನ್ನು ವೈಯಕ್ತಿಕವಾಗಿ ನೀಡಿ ಆಕೆಯ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ. ವಾರ್ತಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ  ಕ್ರೀಡಾಸಕ್ತರೋರ್ವರು ಕೂಡ ವೈಯಕ್ತಿಕವಾಗಿ 10 ಸಾವಿರ ರೂಗಳನ್ನು ನೀಡಿದ್ದು, ಪೂರ್ಣಿಮಾ ಕುಟುಂಬ ಜಿಲ್ಲಾ ವಾರ್ತಾಧಿಕಾರಿ ಶಂಕರಪ್ಪ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದ  ಪೂರ್ಣಿಮಾರವರ ಪ್ರತಿಭೆ ಹಾಗೂ ಆರ್ಥಿಕ ಪರಿಸ್ಥಿತಿ ವರದಿಗೆ ಸ್ಪಂದಿಸಿರುವ ಶಂಕರಪ್ಪರವರು ವೈಯಕ್ತಿಕವಾಗಿ ಸಹಾಯ ಮಾಡಿರುವುದಲ್ಲದೆ ಕ್ರೀಡಾ ಮತ್ತು ಯುವಜನಸೇವಾ  ಇಲಾಖೆಯ ವತಿಯಿಂದಲೂ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ.

ಒಟ್ಟಾರೆ ಜಿಲ್ಲಾ ವಾರ್ತಾಧಿಕಾರಿಯಾಗಿರುವ  ಶಂಕರಪ್ಪರವರು ಉತ್ತಮ ಅಧಿಕಾರಿಯಾಗಿದ್ದಷ್ಟೇ ಅಲ್ಲದೆ ಮಾನವೀಯ ಮೌಲ್ಯವುಳ್ಳ ಅಧಿಕಾರಿಯಾಗಿದ್ದು, ಜಿಲ್ಲೆಯ ಜಾನಪದ ಕಲಾವಿದರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವ ಇವರು ನಮ್ಮ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ಅಧಿಕಾರಿಯಾಗಿ 8 ತಿಂಗಳ ಹಿಂದೆಯಷ್ಟೇ ಆಗಮಿಸಿರುವ ಶಂಕರಪ್ಪ ಅವರು ಹಲವು ವಿನೂತನ ಜನಪರ ಕಾರ್ಯಕ್ರಮಗಳನ್ನು ಅಯೋಜಿಸಿ  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು  ಆರಂಭಿಸಿರುವ ಗ್ರಾಮ ಸೇವೆ ಕಾರ್ಯಕ್ರಮ ಇಡೀ ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರ ಅದೇಶ ಹೊರಡಿಸಿದೆ.

ಕರಾಟೆ ಪಟು ಪೂರ್ಣಿಮಾ ಅವರಿಗೆ ಸಹಾಯ ಮಾಡಲು ಇಚ್ಚಿಸುವರು ಅವರ ದೂರವಾಣಿ 9353653410 ಸಂಪರ್ಕಿಸಬಹುದು.

Key words: ramanagar-  officer – salary  – poor -karate – Sri Lanka