ಎಫ್‌ ಕೆಸಿಸಿಐ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪುತ್ಥಳಿ ಆನಾವರಣ.

ಬೆಂಗಳೂರು,ಸೆಪ್ಟಂಬರ್,20,2021(www.justkannada.in): ಎಫ್‌ಕೆಸಿಸಿಐ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪುತ್ಥಳಿ ಆನಾವರಣಗೊಳಿಸಲಾಯಿತು.

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌  ಅವರ ಪುತ್ಥಳಿ ಆನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ ಸುಂದರ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯನ್ನು ಬೆಂಗಳೂರಿನಲ್ಲಿ ಮೈಸೂರಿನ ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಡಳಿತದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಅಮೃತ ಹಸ್ತದಿಂದ ದಿನಾಂಕ: ೦೮.೦೫.೧೯೧೬ರಲ್ಲಿ ಸ್ಥಾಪಿತಲಾಯಿತು. ಈ ಸಂಸ್ಥೆಯ ಆವರಣದಲ್ಲಿ ಅವರ ಪುತ್ಥಳಿ ಸ್ಥಾಪಿಸಿ ಅವರನ್ನು ಸ್ಮರಿಸುವುದು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಅವರ ಸಾಧನೆಯನ್ನು ಬಣ್ಣಿಸಿದ ಪೆರಿಕಲ್ ಎಂ ಸುಂದರ್, ಇಂತಹ ರಾಜರು ಮಾತ್ರವೇ ಚರಿತ್ರೆಯಲ್ಲಿ ಅಜರಾಮರರು. ಹೀಗೊಬ್ಬ ಅರಸರು ಕಳೆದ ಶತಮಾನದಲ್ಲಿ ನಮ್ಮ ನಾಡಿನಲ್ಲಿದ್ದರು ಎಂಬ ಹೆಮ್ಮೆ ನಮ್ಮದು. ನಾವು ಯಾವುದನ್ನು ಶ್ರೇಷ್ಠ ಅರಮನೆ, ಪ್ರೇಕ್ಷಣೀಯ, ಮನೋಲ್ಲಾಸಕರವೆಂದು ಕೊಂಡಾಡುತ್ತಿದ್ದೇವೆಯೋ ಅವೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭ, ಇಲ್ಲವೇ ಫೋಷಣೆ ಪಡೆದು ಔನ್ನತ್ಯಗೊಂಡಂತಹವು ಎಂಬುದು ನಾಲ್ವಡಿಯವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಸಮರ್ಥರನ್ನು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂಥಹ ಸಮರ್ಥ ಆಡಳಿತಗಾರರನ್ನು ನಮ್ಮ ನಾಡು ನಿರಂತರವಾಗಿ ಸ್ಮರಿಸುತ್ತಿದೆ ಎಂದು ವಿವರಿಸಿದರು.

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ನೆನೆಪಿಸಿ ಅವರ ಪುತ್ಥಳಿಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯವರು ತಮ್ಮ ಆವರಣದಲ್ಲಿ ಆನಾವರಣ ಮಾಡಿರುವುದರಿಂದ  ಮೈಸೂರು ಅರಮನೆಯವರ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ದೂರದೃಷ್ಟಿಯನ್ನು ಇಟ್ಟುಕೊಂಡು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯನ್ನು ಸ್ಥಾಪಿಸಿದರು. ಅದು ಇಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಾಗಿ ಬೆಳೆದಿದ್ದು, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನೀತಿ ನಿಯಮಗಳು ರಚಿಸುವಲ್ಲಿ ಸರ್ಕಾರಕ್ಕೆ  ಸೂಕ್ತ ಸಲಹೆ ಸೂಚನೆಗಳನ್ನು ನೀಡುವಲ್ಲಿ ತನ್ನ ಅಪಾರ ಕೊಡುಗೆಯನ್ನು ನೀಡುವ ಮಟ್ಟಿಗೆ ಬೆಳೆದು ನಿಂತಿರುವ ಈ ಸಂಸ್ಥೆಯನ್ನು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿರುವುದಕ್ಕೆ, ಅವರಿಗೆ ಗೌರವ ಸಲ್ಲಿಸಲು ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮದಲ್ಲಿ  ನಾನು ಭಾಗಿಯಾಗಿರುವುದಕ್ಕೆ ನನ್ನ ಸೌಭಾಗ್ಯ ಎಂದರು. .

ಎಫ್‌ಕೆಸಿಸಿಐನ ಚಟುವಟಿಕೆಗಳಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಸಿಎ ಡಾ. ಐ.ಎಸ್ ಪ್ರಸಾದ್, ಚುನಾಯಿತ ಅಧ್ಯಕ್ಷರು,  ಗೋಪಾಲ್ ರೆಡ್ಡಿ, ಚುನಾಯಿತ ಹಿರಿಯ ಉಪಾಧ್ಯಕ್ಷರು, ಟಿ. ವಾಸನ್, ಕಾರ್ಯಕ್ರಮದ ಸಂಯೋಜಕರು, ವೇದಿಕೆಯಲ್ಲಿ ಉಪಸ್ಥಿತಿರಿದ್ದರು.

Key words: Rajarshi- Nalwadi Krishnaraja Wodeyar –statue-FKCCI