ಮಳೆ ಅನಾಹುತ: ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರದಿಂದ ನಿರ್ಲಕ್ಷ್ಯ –ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

kannada t-shirts

ಬೆಂಗಳೂರು,ಮೇ,19,2022(www.justkannada.in):  ನಗರದಲ್ಲಿ ಮಳೆಪೀಡಿತ ಪ್ರದೇಶಗಳಿಗೆ ನಾಳೆಯಿಂದ ಭೇಟಿ ನೀಡಿ ಜನರ ನೆರವಿಗೆ ಧಾವಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಅಲ್ಲದೆ, ಮಳೆಯಿಂದ ಸಂತ್ರಸ್ತರಾದ ಜನರ ನೆರವಿಗೆ ಧಾವಿಸಿ, ಅವರಿಗೆ ಅಗತ್ಯ ಸಹಾಯವನ್ನು ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಳೆ ಅನಾಹುತದ ಬಗ್ಗೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಏಳು ಜನ ಮಂತ್ರಿಗಳು ಇರುವ ಮಹಾನಗರ ಇದು. ನಿನ್ನೆಯಿಂದ ಏನಾದರೂ ಶಾಸಕರ, ಅಧಿಕಾರಿಗಳ ಸಭೆ ಕರೆದಿದ್ದಾರಾ? ಸಭೆ ನಡೆಸುವ ಕನಿಷ್ಠ ಸೌಜನ್ಯವೂ ಇಲ್ಲವೇ ಅವರಿಗೆ? ನಾಡಿನ‌ ಜನತೆಗೆ ಏನು ಸಂದೇಶ ಕೊಡುತ್ತಿದ್ದಿರಾ?. ಹೇಳುವವರು, ಕೇಳುವವರು ನಿಮಗೆ ಯಾರೂ ಇಲ್ಲ. ತಾತ್ಕಾಲಿಕ ಪರಿಹಾರವನ್ನಾದ್ರೂ ಕೊಡಲಿಲ್ಲ, ಸ್ಪಷ್ಟ ಸಂದೇಶವನ್ನಾದರು ಕೂಡ ಕೊಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವರು ಏನು ಮಾಡುತ್ತಿದ್ದಾರೆ?

ನಗರದ ಉಸ್ತುವಾರಿ ಸಚಿವರೂ ಮುಖ್ಯಮಂತ್ರಿಗಳೇ ಆಗಿದ್ದಾರೆ. ಬೆಂಗಳೂರು ಉಸ್ತುವಾರಿಗಾಗಿ ಇಬ್ಬರು ಸಚಿವರು ಪರಸ್ಪರ ಪೈಪೋಟಿಗಿಳಿದಿದ್ದೂ ನೋಡಿದ್ದೇವೆ ಎಂದು  ಹೆಚ್.ಡಿಕೆ ಲೇವಡಿ ಮಾಡಿದರು.

ಅಲ್ಲದೆ, ನಗರದಲ್ಲಿ ಏಳು ಜನ ಸಚಿವರು ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ. ಅವರ ಕ್ಷೇತ್ರಗಳಿಗೆ ತೆಗೆದುಕೊಂಡು ಹೋದ ಕೋಟ್ಯಂತರ ರೂಪಾಯಿ ಅನುದಾನ ಎಲ್ಲಿ ಹೋಯಿತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿಗಳು, ಆರ್ ಆರ್ ನಗರದ ಶಾಸಕರು, ಸಚಿವರು ಇಲ್ಲಿನ ಸಮಸ್ಯೆಯನ್ನು ಪರಿಹಾರ ಮಾಡುವುದು ಬಿಟ್ಟು ಚಿಕ್ಕಮಗಳೂರಿಗೆ ಹೋಗಿದ್ದರು. ಹೊಗಳುವುದಕ್ಕೆ ಸರ್ಟಿಫಿಕೇಟ್ ಕೊಡಲು ಹೋಗಿದ್ದರಾ ಇವರು? ಬೆಂಗಳೂರಿನಲ್ಲಿ ಸಿಎಂ ಒಂದಿಷ್ಟು ಕಡೆ ಹೋಗಿ ಕಾಟಚಾರಕ್ಕೆ ಸಂಚಾರ ಮಾಡುತ್ತಿದ್ದಾರೆ. ಅವರಿಗೆ ಮಳೆ ಅನಾಹುತ ಬಗೆಹರಿಸುವ ಮನಸ್ಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಬಜೆಟ್ ಅನುಷ್ಠಾನಕ್ಕೆ ಮಾಡಲು ಸಭೆ ಮಾಡಿದ್ದೀರಾ? ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಪಕ್ಷದ ದೇಣಿಗೆ ಸಂಗ್ರಹ ಮಾಡಲು, ಕಮಿಷನ್ ಹೊಡೆಯಲು ಈ ಸಭೆಗಳನ್ನು ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

800 ಕೋಟಿ ರೂ. ಏನಾಯಿತು?

ಹೊರಮಾವು ಪ್ರದೇಶಕ್ಕೆ ಮಂತ್ರಿ ಹೋಗಿ ಫೆಬ್ರವರಿಗೆ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಕೆ ಆರ್ ಪುರ ಕ್ಷೇತ್ರಕ್ಕೆ ಕೊಟ್ಟ 800 ಕೋಟಿ ರೂ. ಹಣ ಏನಾಯಿತು? ಕೋಟ್ಯಂತರ ರೂಪಾಯಿ ಅನುದಾನ ತೆಗೆದುಕೊಂಡು ಹೋಗಿ ಏನು ಮಾಡಿದಿರಿ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ರಾಜಕಾಲುವೆ ಕಥೆ ಏನಾಯಿತು? ನಗರ ಪ್ರದಕ್ಷಿಣೆ ಹಾಕಿ ಕೇವಲ ಫೋಟೋಗೆ ಸೀಮಿತವಾಗಬಾರದು. ಹಿರಿಯ ಅಧಿಕಾರಿಗಳ ಸಭೆ ಕರೆಯಿರಿ. ಬೆಂಗಳೂರು ಕಮಿಷನರ್ ಅವರನ್ನು ಕರೆದು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.

ಮೈತ್ರಿ ಸರ್ಕಾರ ಇದ್ದಾಗ ನಾನು ಕೆರೆ ಅಭಿವೃದ್ಧಿಗಾಗಿ ಸಭೆ ಮಾಡಿದ್ದೆ. ಸದನ ಸಮಿತಿ ಮಾಡಿ ಅದರ ಸದಸ್ಯ ಆಗಿದ್ದೆ. ಆದರೆ ಇದ್ಯಾವುದೋ ಸರಿ ಆಗಲ್ಲ ಅಂತ ಬಿಟ್ಟುಬಿಟ್ಟೆ ಎಂದ ಅವರು,  ಪದ್ಮನಾಭನಗರದಲ್ಲಿ ಎಷ್ಟು ಕೆರೆ ನುಂಗಿ ಹಾಕಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಕಿಡಿ ಕಾರಿದರು.

ಪುಟ್ಟೇನಹಳ್ಳಿಕೆರೆ 53 ಎಕರೆ ಕೆರೆ ಇತ್ತು. ಅದನ್ನು ಹೊಡೆದು ಹಾಕಿ ಜೆಪಿ ನಗರ ಡಾಲರ್ಸ್ ಕಾಲೋನಿ‌ ಅಂತ ಮಾಡಿದರು. ಅಲ್ಲಿ ಮಂತ್ರಿಗಳು, ಐಎಎಸ್ ಅಧಿಕಾರಿಗಳ ಮನೆಗಳಿವೆ. ಕೆರೆಗಳನ್ನು ನುಂಗಿ ಹಾಕಿದ ಮೇಲೆ ಈಗ ಮೇಕೆದಾಟು ಅಂತ ಹೇಳ್ತಾರೆ. ಆ ಕೆರೆಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ  ಹೀಗ್ಯಾಕೆ ಆಗುತ್ತಿತ್ತು. ಕೆಂಪಾಬುದಿ ಕೆರೆ ಏನಾಗಿದೆ ಈಗ? ಬರೀ ಕೊಳಚೆ ನೀರು ತುಂಬಿಸಲಾಗಿದೆ ಎಂದು ಅವರು ಕಿಡಿಕಾರಿದರು.

ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. 2006-07ರಲ್ಲಿ ಬಂದಂತಂಹ ಮಳೆ ದಾಖಲೆ ಮಳೆ ಆಗ್ತಾ ಇದೆ. ಈ ಮಳೆಯಲ್ಲೂ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು ಕುಮಾರಸ್ವಾಮಿ.

ನಮ್ಮ ಪಕ್ಷದ ಬೆಂಗಳೂರು ಮುಖಂಡರ ಸಭೆ ಕರೆದಿದ್ದೇನೆ.

ದೊಡ್ಡ ದೊಡ್ಡ ಮುಖಂಡರು ಇಲ್ಲದೇ ಇದ್ದರೂ ಮಾನವೀಯತೆಯನ್ನು ಉಳಿಸಿಕೊಂಡ ಮುಖಂಡರು ಇದ್ದಾರೆ. ನಮ್ಮ ಪಕ್ಷದಲ್ಲಿ. ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ಒಂದಲ್ಲ ಒಂದು ರೀತಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ.  ಮೈತ್ರಿ ಸರ್ಕಾರದಲ್ಲಿ ಕೊಟ್ಟ ಅನುದಾನದಲ್ಲಿ ಒಂದಿಷ್ಟು ಡೈವರ್ಟ್ ಮಾಡುವ ಕೆಲಸ ಮಾಡಿದ್ದರು. ಕ್ಷೇತ್ರದ ಜನರಿಗೆ ಕೊಡುವ ಪ್ರಾಮಾಣಿಕತೆ ಇಲ್ಲದೇ ಹೋಯ್ತು ಈ ಸರ್ಕಾರಕ್ಕೆ. ಕೋರ್ಟ್ ನಿಂದ ಆದೇಶ ತರಬೇಕಾಯ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನನಗೆ ಆತುರ ಇಲ್ಲ, ಡ್ಯಾಮೇಜ್ ಆಗಿದೆ ಮುಂದೆ ಸರಿ ಮಾಡುವುದು ಹೇಗೆ ಅನ್ನೋದು ನೋಡಬೇಕು. ಎರಡು ವರ್ಷದಿಂದ ಪಾಲಿಕೆ ಚುನಾವಣೆ ನಡೆಸಿಲ್ಲ ಎಂದ ಹೆಚ್ ಡಿಕೆ, ನಾನು ಅಧಿಕಾರದಲ್ಲಿ ಇದ್ದೆ. ಆದರೆ ಅಧಿಕಾರ ಮಾಡಿದ್ದು ಯಾರೋ. ಬೆಂಗಳೂರು ಬಗ್ಗೆ ನಾನು ಸಭೆ ಮಾಡುವ ಹಾಗಿರಲಿಲ್ಲ. ಮಾಡಿದರೆ ನೀವ್ಯಾರು ಮಾಡೋಕೆ ಅಂದ್ರು. ಇಲ್ಲಿನ ಎಂಪಿಗಳು ಏನ್ ಮಾಡ್ತಾ ಇದ್ದಾರೆ. ಇಲ್ಲಿನ ಸಮಸ್ಯೆ ಬಿಟ್ಟು ಅಲ್ಲೆಲ್ಲೋ ಹೋಗಿ ಮಾತಾಡ್ತಾರೆ ಎಂದು ಹೇಳಿದರು.

ಒಂದು ವಾರ ನಗರ ಪ್ರದಕ್ಷಿಣೆ

ನಾನು ತೋರಿಕೆಗಾಗಿ ಪ್ರದಕ್ಷಣೆ ಮಾಡಲ್ಲ. ತಡವಾದರೂ ಒಂದು ವಾರ ನಾನು ನಗರ ಪ್ರದಕ್ಷಿಣೆ ಮಾಡುತ್ತೇನೆ. ನಗರದ ಬಹುತೇಕ ಕ್ಷೇತ್ರಗಳಿಗೆ ನಾನು  ಹೋಗುತ್ತೇನೆ. ಜೊತೆಗೆ ಒಂದಿಷ್ಟು ಭಾಗಗಳಿಗೆ ಮುಖಂಡರು ಹೋಗುತ್ತಾರೆ. ನೀರು ನುಗ್ಗಿರುವ ಮನೆಗಳಿಗೆ ಪಕ್ಷದ ವತಿಯಿಂದ ತಕ್ಷಣ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ನಾನು ಸಮಸ್ಯೆ ಆದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಒಂದು ಗಂಟೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಬಡ ಕುಟುಂಬಗಳಿಗೆ ನೆರವು ನೀಡುತ್ತೇನೆ. ಯಾವ್ಯಾವ ಬಡಾವಣೆಯಲ್ಲಿ ಏನೇನು ಅನಾಹುತ ಆಗಿದೆ ಅನ್ನೋದರ ಲಿಸ್ಟ್ ಮಾಡಲು ಹೇಳಿದ್ದೇನೆ ಎಂದರು.

ಬಿಜೆಪಿ ಸರ್ಕಾರದ ಮೇಲೆ ಯಾವ ಭರವಸೆ ಉಳಿದಿಲ್ಲ. ಕಾಂಗ್ರೆಸ್, ಬಿಜೆಪಿ ಮೇಯರ್ ಗಳೇ ಇದ್ದಿದ್ದು. ಉತ್ತಮ‌ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಆಸೆ ಆಮಿಷಕ್ಕೆ ಬಲಿಯಾಗದೇ ಶಾಶ್ವತ ಪರಿಹಾರ ನೀಡುವವರಿಗೆ ಮತ ಹಾಕಿ. ಆದಾಯ ತೆರಿಗೆ ಕಟ್ಟುವವರು  ನೀವೇ ( ಜನ) ಎಂದು ಸಲಹೆ ನೀಡಿದರು.

ದೇವೇಗೌಡರ ಬ್ರ್ಯಾಂಡ್ ಬೆಂಗಳೂರು ಹೈಜಾಕ್:

ಮಾಜಿ ಸಿಎಂ ಎಸ್.ಎಂ.ಕೃಷ್ಣ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಬ್ರ್ಯಾಂಡ್ ಬೆಂಗಳೂರು ದೇವೇಗೌಡರ ಕಾಲದಲ್ಲಿ ಇತ್ತು. ಹೈಜಾಕ್ ಮಾಡಿದ್ದು ಇವರು. ಅದು ದೇವೇಗೌಡರು ಮಾಡಿದ್ದು, ಸೂಟು ಬೂಟು ಹಾಕಿಕೊಂಡರೆ ಬ್ರ್ಯಾಂಡ್ ಬೆಂಗಳೂರು ಆಗಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಆಗುತ್ತದೆ. ಕೆರೆ ಕಟ್ಟೆ ನುಂಗಿ‌ ಹಾಕಿದ್ದು ಯಾರು? ಕೆರೆ ಕಟ್ಟೆ ಉಳಿಸಬೇಕು, ಒತ್ತುವರಿ ಮಾಡಬಾರದೆಂದು ಲಕ್ಷ್ಮಣ್ ರಾವ್ ನೇತೃತ್ವದಲ್ಲಿ ಕಮಿಟಿ ಮಾಡಿದರು. ಆದರೆ, ಅವರು ಕೊಟ್ಟ ವರದಿ ಕಸದ ಬುಟ್ಟಿಗೆ ಹೋಯಿತು. ಕೆರೆ ಮುಚ್ಚಿ ಹಾಕಿ‌ ಮನೆ ಕಟ್ಟಿದರು. ಕೆರೆಗೆ ಹೋಗುವ ನೀರು ಮನೆಗಳಿಗೆ ನುಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಡಿಎ ಒಂದು ದರಿದ್ರ, ಮನುಷ್ಯತ್ವ ಇದೆಯೇ ಅವರಿಗೆ.  ಅದರ ನೋವು ಕಾಮನ್ ಮ್ಯಾನ್ ಅನುಭವಿಸುತ್ತಿದ್ದಾನೆ ಎಂದು ಕಿಡಿಕಾರಿದ ಕುಮಾರಸ್ವಾಮಿ ಅವರು, ರಾಜ್ಯಸಭೆಗೆ ಬಿಜೆಪಿಯಿಂದ ಅರ್ಜಿ ಹಾಕಿದ ವ್ಯಕ್ತಿಯೊಬ್ಬರ ಮನೆಗೆ ನೀರು ನುಗ್ಗಿದೆ. ಅಧಿಕಾರಿಗಳನ್ನು ಬೈತಾ ಇದ್ದಾರೆ, ಏನು ಪ್ರಯೋಜನ. ಮೊನ್ನೆ ಶಾಸಕರೊಬ್ಬರು ಅಧಿಕಾರಿಗೆ ಏನೇನು ಬೈದ್ರು ಅಂತ ನೋಡಿದರಲ್ಲವೇ ಎಂದರು.

ಪಕ್ಷದಿಂದ ದೂರ ಉಳಿದವರ ಮನವೊಲಿಕೆ

ನಿನ್ನೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೆವು. ನೆಲಮಂಗಲದಲ್ಲಿ ನಡೆದ ಜಲಧಾರೆ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಪಕ್ಷದ ಒಂದಿಷ್ಟು ಜನ ದೂರ ಉಳಿದಿದ್ದಾರೆ. ಜೆಡಿಎಸ್ ಗೆ ಭವಿಷ್ಯ ಇಲ್ಲವೆಂದು ಈ ಎರಡು ರಾಷ್ಟ್ರೀಯ ಪಕ್ಷದಿಂದ ಹಬ್ಬಿಸುತ್ತಿದ್ದರು. ಜೆಡಿಎಸ್ ನಿಂದ ದೂರ ಉಳಿದವರನ್ನು ಮನವೊಲಿಸಲು ಸಲಹೆ ಬಂದಿದೆ.  ಇದಕ್ಕೆ ವೇದಿಕೆ ಸೃಷ್ಟಿ ಮಾಡುವ ಬಗ್ಗೆ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಆಗುವ ಕುರಿತು ಚರ್ಚೆ ಆಗಿದೆ ಎಂದು ಹೇಳಿದರು. ಇನ್ನು ವಿಧಾನಪರಿಷತ್ ಗೆ ಒಬ್ಬರು ಆಯ್ಕೆ ಆಗಬೇಕು. ಅದರ ತೀರ್ಮಾನ ದೇವೇಗೌಡರು ತೆಗೆದುಕೊಳ್ಳುತ್ತಾರೆ. ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಗೆ ಎರಡು ಪಕ್ಷಗಳಿಗೆ ಯಾವುದೇ ಸಂಖ್ಯಾಬಲ ಇಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಒಂದು ಸ್ಥಾನ ಇದೆ. ಇದರ ಬಗ್ಗೆಯೂ ದೇವೇಗೌಡರ ತೀರ್ಮಾನ ಅಂತಿಮವಾಗಿರುತ್ತದೆ ಎಂದರು.

SSLC ಮಕ್ಕಳಿಗೆ ಅಭಿನಂದನೆ

ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಿದೆ. ಹುಡುಗಿಯರೇ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. ಎಲ್ಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅನುತೀರ್ಣರಾದ ಮಕ್ಕಳು ಯೋಚನೆ ಮಾಡೋದು ಬೇಡ. ಮುಂದೆ ಪರೀಕ್ಷೆ ಬರುತ್ತವೆ. ಹಾಗಾಗಿ ಯೋಚನೆ ಬೇಡ ಧೈರ್ಯವಾಗಿ ಎದುರಿಸಿ ಎಂದು ಧೈರ್ಯ ತುಂಬಿದ ಹೆಚ್ ಡಿಕೆ, ನಾನು ಕೂಡ ಅರ್ಡಿನರಿ ದರ್ಜೆಯಲ್ಲಿ ಪಾಸ್ ಆದವನು. ಹಾಗಾಗಿ ತಪ್ಪು ನಿರ್ಧಾರ ಮಾಡಬೇಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ದಾಸರಹಳ್ಳಿ ಶಾಸಕ ಮಂಜುನಾಥ್, ಮಾಜಿ ಶಾಸಕ ಟಿ ಎ ಶರವಣ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: rain – Neglect – government -weather department-HD Kumaraswamy

 

website developers in mysore