ಕೊಡಗು-ಮಲ್ನಾಡಲ್ಲಿ ಮತ್ತೆ ಮಳೆ: ನದಿಗಳಲ್ಲಿ ಹೆಚ್ಚಾದ ಹರಿವು, ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ

ಬೆಂಗಳೂರು:ಜುಲೈ-7: ಕೊಡಗು ಹಾಗೂ ಮಲೆನಾಡು ಪ್ರದೇಶದಲ್ಲಿ ಶನಿವಾರವೂ ಉತ್ತಮ ಮಳೆಯಾಗಿದ್ದು, ಸೇತುವೆ ಜಲಾವೃತ, ರಸ್ತೆ ಬಿರುಕು, ಗುಡಿಸಲು ಕುಸಿತ ಮುಂತಾದವು ಸಂಭವಿಸಿವೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಸರಾಸರಿ 58.17 ಮಿ.ಮೀ. ಮಳೆಯಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮುಂತಾದೆಡೆ ಉತ್ತಮ ಮಳೆಯಾಗಿದೆ. 2,859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದ ಒಳಹರಿವು ಮತ್ತು ನೀರಿನ ಮಟ್ಟ ಶನಿವಾರ ತುಸು ಏರಿದ್ದು, 2810.62 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 2851.50 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು 725 ಕ್ಯೂಸೆಕ್ ಇದ್ದು, ನದಿಗೆ 30, ನಾಲೆಗೆ 20 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಕೆಆರ್​ಎಸ್​ನಲ್ಲಿ ಶನಿವಾರ 81.10 ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವು 3385 ಹಾಗೂ ಹೊರಹರಿವು 345 ಕ್ಯೂಸೆಕ್ ಇತ್ತು. ಮಡಿಕೇರಿಯ ಬಿರುನಾಣಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 5.20 ಇಂಚು (130 ಮಿ.ಮೀ) ಮಳೆಯಾಗಿದೆ. ಈ ವ್ಯಾಪ್ತಿಯ ಲಕ್ಷ್ಮಣತೀರ್ಥ ಮತ್ತು ಕಕ್ಕಟ್ಟ್​ಪೊಳೆ ನದಿಯ ನೀರಿನ ಹರಿವು ಮಟ್ಟ ಹೆಚ್ಚಾಗಿದೆ. ಶನಿವಾರ ಶಿವಮೊಗ್ಗ ಜಿಲ್ಲೆಯ ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬದಲ್ಲಿ ಉತ್ತಮ ಮಳೆಯಾಗಿದ್ದು, ತುಂಗಾ-ಮಾಲತಿ ನದಿ ಸೇರಿ ಎಲ್ಲ ಹೊಳೆಗಳೂ ತುಂಬಿ ಹರಿಯುತ್ತಿವೆ. ಹುಂಚದಕಟ್ಟೆಯಲ್ಲಿ 93.2, ಮೇಗರವಳ್ಳಿಯಲ್ಲಿ 88 ಮಿ.ಮೀ. ಮಳೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 23,191 ಕ್ಯೂಸೆಕ್ ಒಳಹರಿವಿದ್ದು ಒಂದು ದಿನದಲ್ಲಿ 2 ಅಡಿ ನೀರು ಏರಿದೆ. ಭದ್ರಾ ಡ್ಯಾಂಗೆ 5116, ತುಂಗಾ ಜಲಾಶಯಕ್ಕೆ 16,239 ಕ್ಯೂಸೆಕ್ ಒಳಹರಿವಿದ್ದು ಸುಮಾರು ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗುತ್ತಿದೆ.

ಸಾಗರ ತಾಲೂಕು ಇಕ್ಕೇರಿ ದೇವಸ್ಥಾನದ ಮೇಲೆ ದೊಡ್ಡ ಮರ ಉರುಳಿ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ಶನಿವಾರ ಜಿಲ್ಲಾಡಳಿತ ರಜೆ ನೀಡಿತ್ತು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಬಣಕಲ್​ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಿಳೆಯ ಕಾಲು ಮುರಿತ

ಕುಶಾಲನಗರದ ಬಸವನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಮರದ ಕೊಂಬೆಯೊಂದು ಗುಡಿಸಲ ಮೇಲೆ ಬಿದ್ದು ಯಶೋದಮ್ಮ(55) ಅವರ ಕಾಲು ಮುರಿದಿದೆ. ಶುಕ್ರವಾರ ರಾತ್ರಿ ಮಳೆಗೆ ಗುಡಿಸಿಲಿನ ಒಂದು ಭಾಗ ಹೆಚ್ಚು ಸೋರುತ್ತಿದ್ದರಿಂದ ಅಡುಗೆ ಮನೆಯಲ್ಲಿ ಮಲಗಿದ್ದರು. ಆಗ ಮರದ ಕೊಂಬೆ ಬಿದ್ದು ಕಾಲು ಮುರಿದಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಡಿಸಲು ನೆಲಸಮವಾಗಿದೆ.

ರಸ್ತೆಯಲ್ಲಿ ಬಿರುಕು

ಮಡಿಕೇರಿಯ ಸಂಪಿಗೆ ಕಟ್ಟೆ ಸಮೀಪ ಅಬ್ಬಿಫಾಲ್ಸ್​ಗೆ ತೆರಳುವ ಮಾರ್ಗದಲ್ಲಿ ರಸ್ತೆ ಬಿರುಕು ಬಿಟ್ಟು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಇತ್ತೀಚೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗೆ ಮರಳು ತುಂಬಿದ ಚೀಲಗಳಿಂದ ತಡೆಗೋಡೆ ನಿರ್ವಿುಸಲಾಗಿತ್ತು. ಆದರೆ, ಶನಿವಾರ ರಸ್ತೆ ಬಿರುಕು ಬಿಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರಕ್ಕೆ ಅನುಕೂಲ ಮಾಡಿರುವ ಪೊಲೀಸ್ ಇಲಾಖೆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಳೆದ ವರ್ಷ ಮಳೆಗೆ ಐದಾರು ಬಾರಿ ರಸ್ತೆ ಮೇಲೇರಿದ್ದ ನೀರು ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿ ಜಲಾವೃತಕ್ಕೆ ಸನಿಹವಾಗುತ್ತಿದೆ. ಎರಡು ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗುವ ಮುನ್ಸೂಚನೆ ಗೋಚರಿಸಿದೆ.

3 ಸೇತುವೆ ಜಲಾವೃತ

ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಹಲವೆಡೆ ಮಳೆ ಅಬ್ಬರಿಸಿದೆ. ಬೆಳಗಾವಿ, ಖಾನಾಪುರ, ಅಥಣಿ, ಚಿಕ್ಕೋಡಿ, ಹುಕ್ಕೇರಿ ಸೇರಿ ವಿವಿಧ ತಾಲೂಕುಗಳಲ್ಲಿ ಬೆಳಗ್ಗೆಯಿಂದ ಮಳೆಯಾಗಿದ್ದು, ಖಾನಾಪುರದ ನಂದಗಡ ಗ್ರಾಮದ ಸರ್ಕಾರಿ ಶಾಲಾ ಗೋಡೆ ಕುಸಿದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ಮೈದುಂಬಿ ಹರಿಯುತ್ತಿವೆ. ಕೃಷ್ಣಾ ನದಿ ನೀರಿನ ಒಳಹರಿವು 22,720 ಸಾವಿರ ಕ್ಯೂಸೆಕ್ ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ನದಿಗಳ ಒಳಹರಿವು ಹೆಚ್ಚಿದ್ದು, 8 ಕೆಳಹಂತದ ಸೇತುವೆಗಳ ಪೈಕಿ ಶನಿವಾರ 3 ಸೇತುವೆಗಳು ಜಲಾವೃತವಾಗಿವೆ. ಕಾರದಗಾ-ಭೋಜ, ಭೋಜವಾಡಿ -ಕುನ್ನೂರ, ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಕೃಪೆ:ವಿಜಯವಾಣಿ

ಕೊಡಗು-ಮಲ್ನಾಡಲ್ಲಿ ಮತ್ತೆ ಮಳೆ: ನದಿಗಳಲ್ಲಿ ಹೆಚ್ಚಾದ ಹರಿವು, ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ
rain-heavy-rain-kodugu-madikeri-flood-rain-water-mansoon-rain