ಮಳೆಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಜಿಲ್ಲೆಗಳು: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ರಾಯಚೂರು, ಆಗಸ್ಟ್ 05, 2019 (www.justkannada.in): ಭಾರೀ ಮಳೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.

ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಮೂಲಕ ಸಿಎಂ ವೈಮಾನಿಕ ಸಮೀಕ್ಷೆ ಆರಂಭಿಸಿದ್ದಾರೆ.

ಈ ನಡುವೆ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರಾಯಚೂರು ಜಿಲ್ಲೆಯಲ್ಲಿ ಲಿಂಗಸೂರು ಶ್ರೀಹಳ್ಳಿ ಸೇತುವೆ ಹಾಗೂ ದೇವನಹಳ್ಳಿಯಲ್ಲಿ ಸೇತುವೆಯೊಂದು ಮುಳುಗಡೆಯಾಗಿದೆ. ಇಲ್ಲೆಲ್ಲಿ ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಿಂಗಸೂರು ತಾಲೂಕಿನ ಓಂಕಾರಗಡ್ಡಿ, ಮಾದರಗಡ್ಡಿ, ಕರಕಲಗಡ್ಡಿ ಗ್ರಾಮಗಳು ಜಲಾವೃತವಾಗಿವೆ. 14 ಕುಟುಂಬಗಳ 104 ಮಂದಿ ಸಿಲುಕಿಕೊಂಡಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ನದಿ ಪಾತ್ರದಲ್ಲಿರುವ 51 ಗ್ರಾಮಗಳಿಗೆ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.