ಮಳೆ ಹಾನಿ: ‘ಬ್ರ್ಯಾಂಡ್ ಬೆಂಗಳೂರನ್ನು ಕಾಪಾಡು’ವಂತೆ ಸಿಎಂ ಬೊಮ್ಮಾಯಿಗೆ ಎಸ್.ಎಂ. ಕೃಷ್ಣ ಸಲಹೆ.

ಬೆಂಗಳೂರು, ಮೇ 20,2022 (www.justkannada.in): ಕೇಂದ್ರದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಅವರು, ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಉದ್ಭವಿಸುತ್ತಿರುವ ಹಲವು ಸಮಸ್ಯೆಗಳು ಇದೇ ರೀತಿ ಮುಂದುವರೆದರೆ ಹೂಡಿಕೆದಾರರು ರಾಜ್ಯದಿಂದ ದೂರ ಉಳಿಯುಬಹುದೆಂದು ಕಾಳಜಿ ವ್ಯಕ್ತಪಡಿಸಿ ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಯಾಯಿ ಅವರಿಗೆ ಸಲಹೆ ನೀಡಿದ್ದಾರೆ.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ಸರ್ಕಾರ ನಗರದ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಕೂಡಲೇ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

೧೯೯೯-೨೦೦೪ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಐಟಿ ಬೂಮ್‌ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. “ಬೆಂಗಳೂರು ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. ಆದರೆ ಮಳೆಯಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿ ಕಾಳಜಿಯನ್ನು ಉಂಟು ಮಾಡುತ್ತದೆ. ಈ ರೀತಿ ಮೂಲಭೂತಸೌಕರ್ಯ ವ್ಯವಸ್ಥೆಗಳಲ್ಲಿ ವ್ಯತ್ಯಾಸ ಉಂಟಾದರೆ ‘ಬ್ರ್ಯಾಂಡ್ ಬೆಂಗಳೂರು’ ಗುರುತಿನ ಮೇಲೆ ಪರಿಣಾಮ ಉಂಟಾಗಿ ಸಂಭವನೀಯ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ,” ಎಂದಿದ್ದಾರೆ.

ಭವಿಷ್ಯದ ದೃಷ್ಟಿಯೊಂದಿಗೆ ನಗರದ ಒಟ್ಟಾರೆ ಅಭಿವೃದ್ಧಿಗಾಗಿ ಸೂಕ್ತ ಬ್ಲೂಪ್ರಿಂಟ್ ಅನ್ನು ಸಿದ್ಧಪಡಿಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಬೆಂಗಳೂರು ಕಾರ್ಯಸೂಚಿ ಕಾರ್ಯಪಡೆ (ಬಿಎಟಿಎಫ್) ಅನ್ನು ಮರುರಚಿಸುವಂತೆ ಬೊಮ್ಮಾಯಿ ಅವರಿಗೆ ಎಸ್.ಎಂ. ಕೃಷ್ಣ ಸಲಹೆ ನೀಡಿದ್ದಾರೆ. ೧೯೯೯ರಲ್ಲಿ ಇನ್ಫೋಸಿಸ್‌ ನ ಸಹಸ್ಥಾಪಕ ನಂದನ್ ನಿಲೇಕಣಿ ಅವರ ಮುಂದಾಳತ್ವದಲ್ಲಿ ಬಿಎಟಿಎಫ್ ಅನ್ನು ರಚಿಸಲಾಗಿತ್ತು. ೨೦೧೪ರಲ್ಲಿ ಅದನ್ನು ವಿಸರ್ಜಿಸಲಾಯಿತು.

ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು, ಹಾಲಿ ರಾಜಕಾಲುವೆಗಳ ಪುನರ್ ರಚನೆ ಹಾಗೂ ನಗರದ ಪೌರಾಡಳಿತ ಮಿತಿಗಳ ಒಳಗೆ ಸೇರ್ಪಡೆಗೊಳಿಸಲಾಗಿರುವಂತಹ ಎಲ್ಲಾ ಬಡಾವಣೆಗಳಿಗೆ ಸೂಕ್ತ ಮೂಲಭೂತಸೌಕರ್ಯವನ್ನು ಒದಗಿಸಲು ತಜ್ಞ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವ ಸಲಹೆಯನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ.

“ಮೈಸೂರು, ತುಮಕೂರು, ದಾವಣಗೆರೆ ಹಾಗೂ ಹುಬ್ಬಳ್ಳಿಯಂತಹ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಬಹುದು. ನಾನು ಅಧಿಕಾರದಲ್ಲಿದ್ದಾಗ ಮೈಸೂರು-ಬೆಂಗಳೂರು ಹೆದ್ದಾರಿ ಯೋಜನೆಯ ಕುರಿತು ಚರ್ಚಿಸಲಾಗಿತ್ತು. ಆದರೆ, ಅದು ಈಗ ೧೦-ಪಥಗಳ ಹೆದ್ದಾರಿಯಾಗಿ ಉನ್ನತೀಕರಣಗೊಳ್ಳುತ್ತಿದೆ. ಇದರಿಂದ ಮೈಸೂರು, ಬೆಂಗಳೂರಿಗೆ ಪರ್ಯಾಯ ನಗರವಾಗಿ ರೂಪುಗೊಳ್ಳಬಹುದು,” ಎಂದಿದ್ದಾರೆ.

ಶಾಸಕರು, ಎಂಪಿಗಳು ಹಾಗೂ ಇತರೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಾಂತ್ಯವಾರು ಸಮಸ್ಯೆಗಳನ್ನು ಗುರುತಿಸಿ, ಖಾಯಂ ಪರಿಹಾರಗಳನ್ನು ಒದಗಿಸಲು ಹಣವನ್ನು ಒದಗಿಸುವಂತೆ ಬೊಮ್ಮಾಯಿ ಅವರಿಗೆ ಎಸ್.ಎಂ.ಕೃಷ್ಣ ಅವರು ಸಲಹೆ ನೀಡಿದ್ದಾರೆ.

ನಗರದಲ್ಲಿ ಭಾರಿ ಮಳೆಯ ನಂತರ ನಗರ ವೀಕ್ಷಣೆಯನ್ನು ಕೈಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಸ್.ಎಂ.ಕೃಷ್ಣ ಅವರ ಸಲಹೆಗಳನ್ನು ಸಕಾರಾತ್ಮಕವಾದ ರೀತಿಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. “ನಮಗೆ ಅವರ ಕಾಳಜಿ ಅರ್ಥವಾಗುತ್ತದೆ, ಅವರ ಅಧಿಕಾರಾವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗಿವೆ. ಆದರೆ ಈಗ ಬೆಂಗಳೂರು ಮಹಾನಗರ ಆಗಿನಂತಿಲ್ಲ. ಇಲ್ಲಿನ ಜನಸಂಖ್ಯೆ ಹೆಚ್ಚಾಗಿದ್ದು, ಸವಾಲುಗಳೂ ಸಹ ಹೆಚ್ಚಾಗಿದೆ. ನಗರದ ವ್ಯಾಪ್ತಿಯೂ ಸಹ ತುಂಬಾ ಬೆಳೆದಿದೆ. ಇದರಿಂದಾಗಿ ಸಮಸ್ಯೆಗಳೂ ಸಹ ಹೆಚ್ಚಾಗಿವೆ,” ಎಂದರು.

ಪ್ರಧಾನ ಮಂತ್ರಿಗಳ ಸಹಾಯ ಕೋರಿದ ಮೋಹನ್‌ ದಾಸ್ ಪೈ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಉದ್ಯಮಿ ಟಿ.ವಿ. ಮೋಹನ್‌ ದಾಸ್ ಪೈ ಅವರು ತಮ್ಮ ಒಂದು ಟ್ವೀಟ್‌ ನಲ್ಲಿ ಬೆಂಗಳೂರಿನ ಆಡಳಿತ ವ್ಯವಹಾರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಾಯ ಕೋರಿದ್ದಾರೆ. ಒಂದು ಚಿತ್ರವನ್ನು ಲಗತ್ತಿಸಿ, “ಮಳೆ ನೀರಿನ ಹರಿವಿಗಾಗಿ ಮುರಿದಿರುವ ಚರಂಡಿ ವ್ಯವಸ್ಥೆ,” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಮುಂದುವರೆದು, “ಇದು ಭ್ರಷ್ಟ ಬಿಬಿಎಂಪಿಯಿಂದ ನಡೆಯುತ್ತಿರುವ ನಮ್ಮ ಸುಂದರವಾದ ಬೆಂಗಳೂರು… ಸೂಕ್ತ ಸುಧಾರಣೆಗಳ ಅಗತ್ಯವಿದೆ,” ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Rain-damage-CM Bommai-Brand Bangalore- SM Krishna