ರೈಲಿನಲ್ಲಿ ಮಹಿಳೆಯರಿಂದ ಚಿನ್ನಾಭರಣ ಕದಿಯುತ್ತಿದ್ದ ಕಳ್ಳತ ಬಂಧನ

ಮೈಸೂರು, ಮೇ 08, 2019 (www.justkannada.in): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ನಗದು ಮತ್ತು ಚಿನ್ನಾಭರಣವನ್ನು ದೋಚುತ್ತಿದ್ದ ದರೋಡೆಕೋರನನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಮಲಾನಗರ ನಿವಾಸಿ ಗಂಗಾಧರ ಎಂಬಾತನನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದು, ಈತನಿಂದ 1.2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4,270 ನಗದನ್ನು ವಶಪಡಿಸಿಕೊಂಡಿದ್ದಾರೆ. ಮೇ 5ರಂದು ರತ್ನಮ್ಮ ಅವರು ಮೈಸೂರಿನಿಂದ ಬೆಂಗಳೂರಿಗೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿ ಗಂಗಾಧರ ವ್ಯಾನಿಟಿ ಬ್ಯಾಗ್‌ನ್ನು ರತ್ನಮ್ಮ ಅವರಿಂದ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಮಹಿಳೆಯು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಕಳ್ಳನ ಪತ್ತೆಗೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್.ಗುಳೇದ ವಿಶೇಷ ತಂಡವೊಂದನ್ನು ರಚಿಸಿದ್ದರು. ಮಂಗಳವಾರ ಬೆಳಗ್ಗೆ ಕಾವೇರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರೋಪಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ನಡೆಸಿರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.