ಪುನೀತ್ ನಿಧನದಿಂದಾಗಿ ಫಿಟ್ನೆಸ್ ಉತ್ಸಾಹಿಗಳಲ್ಲಿ ಹುಟ್ಟಿದೆ ಆತಂಕ.

ಬೆಂಗಳೂರು, ನವೆಂಬರ್,3,2021 (www.justkannada.in): ಪವರ್‌ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅವರ ಅಕಾಲಿಕ ನಿಧನ ಜನಮಾನಸದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅನೇಕರಲ್ಲಿ ಭಯವೂ ಹುಟ್ಟಿಸಿದಂತಿದೆ. ಬಹುತೇಕ ಎಲ್ಲಾ ಮನೆಗಳು, ಸ್ನೇಹಿತರ ಬಳಗ, ಜನಸೇರುವ ಎಲ್ಲಾ ಕಡೆಗಳಲ್ಲಿಯೂ ಪುನೀತ್ ಅವರ ಅನಿರೀಕ್ಷಿತ ಸಾವಿನ ಕುರಿತಂತೆಯೇ ಮಾತುಗಳು ಕೇಳಿ ಬರುತ್ತಿದೆ. ದೈನಂದಿನ ಕಸರತ್ತಿನ ವೇಳೆ ತೀವ್ರ ಹೃದಯಾಘಾತದಿಂದ ಪುನೀತ್ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಬಹುತೇಕ ಇಡೀ ರಾಜ್ಯವೇ ಆಘಾತಕ್ಕೀಡಾಗಿದ್ದು, ಇದ್ದಕ್ಕಿದ್ದಂತೆ ಅನೇಕರು, ಅದರಲ್ಲಿಯೂ 45 ವರ್ಷ ಹಾಗೂ ಅದಕ್ಕಿಂತ ಕೆಳಗಿನ ವಯಸ್ಸಿನವರು ಆಸ್ಪತ್ರೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ತೀವ್ರ ಮಟ್ಟದಲ್ಲಿ ಹೆಚ್ಚಾಗಿರುವ ಸುದ್ದಿ ಎರಡು ದಿನಗಳಿಂದ ಕೇಳಿ ಬರುತ್ತಿದೆ. ಈಗ ಜಿಮ್‌ ಗಳ ಸರದಿ.

ದೇಹದಾರ್ಢ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಜಿಮ್‌ ಗಳಿಗೆ ಹೋಗುವ ಯುವಜನರ ಸಂಖ್ಯೆ ಕಡಿಮೆ ಏನೂ ಇಲ್ಲ. ಆದರೆ ಪುನೀತ್ ಅವರ ಸಾವಿನ ನಂತರ ಜಿಮ್‌ ಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಜಿಮ್‌ ಗಳಿಗೆ ಹೋಗಿ ಕಸರತ್ತು ಮಾಡುವವರ ಸಂಖ್ಯೆ ಇದ್ದಕ್ಕಿದ್ದಂತೆ ಕಡಿಮೆ ಆಗಿದೆಯಂತೆ. ಜಿಮ್‌ ಗೆ ಹೋಗುವವರು ತಮ್ಮ ತರಬೇತುದಾರರನ್ನು ಅನೇಕ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರಂತೆ – ಕಸರತ್ತು ಮಾಡುವುದು ಸುರಕ್ಷಿತವೋ, ಅಲ್ಲವೋ? ತಾವು ಜಿಮ್‌ ನಲ್ಲಿ ಕಸರತ್ತು ಮಾಡುವುದನ್ನು ಮುಂದುವರೆಸುವುದೋ? ಬೇಡವೋ? ಹೀಗೆ ಎಲ್ಲರಲ್ಲೂ ಅನುಮಾನಗಳು ಹುಟ್ಟಿಕೊಂಡಿವೆಯಂತೆ.

ಈ ಬೆಳವಣಿಗೆಯಿಂದಾಗಿ ಈಗಾಗಲೇ ಹಲವು ಫಿಟ್ನೆಸ್ ಕೇಂದ್ರಗಳು ಮುನ್ನೆಚ್ಚರಿಕಾ ಕ್ರಮಗಳಾಗಿ ತರಬೇತಿಗೆ ಬರುವವರನ್ನು ತರಬೇತಿ ಆರಂಭಿಸುವುದಕ್ಕೆ ಮುಂದೆ ಆರೋಗ್ಯ ತಪಾಸಣೆ ಪಡೆದುಕೊಳ್ಳುವಂತೆ ತಿಳಿಸಲು ಆರಂಭಿಸಿದ್ದಾರೆ. ಬೆಂಗಳೂರು ನಗರದ ಕೆಲವು ಪ್ರತಿಷ್ಠಿತ ಜಿಮ್‌ ಗಳ ತರಬೇತುದಾರರು ತಿಳಿಸಿರುವಂತೆ ಪವರ್‌ಸ್ಟಾರ್ ಅವರ ಸಾವು ಫಿಟ್ನೆಸ್ ಕ್ಷೇತ್ರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲವಂತೆ. ಅಂದರೆ ಫಿಟ್ನೆಸ್ ತರಬೇತಿಗೆಂದು ಜಿಮ್‌ ಗಳಿಗೆ ಬರುವವರ ಸಂಖ್ಯೆ ಕಡಿಮೆ ಆಗಿಲ್ಲ ಎನ್ನುವುದು ಅವರ ಅಭಿಪ್ರಾಯ. ಆದರೆ ಜನರಲ್ಲಿ ಆತಂಕವನ್ನು ಸೃಷ್ಟಿಸಿರುವುದು ಮಾತ್ರ ಸತ್ಯ ಎನ್ನುತ್ತಾರೆ.

ಕನ್ನಡ ಚಲನಚಿತ್ರರಂಗದ ಅನೇಕ ನಟರಿಗೆ ತರಬೇತಿ ನೀಡಿರುವಂತಹ ಇಂದಿರಾನಗರದಲ್ಲಿರುವ ‘ಅಕಾಡೆಮಿ ಆಫ್ ಸ್ಟ್ರೆಂತ್’ ಎಂಬ ಹೆಸರಿನ ಫಿಟ್ನೆಸ್ ಕೇಂದ್ರದ ಮಾಲೀಕರಾದ ಮೊಹಮ್ಮದ್ ಸುಹೇಲ್ ಅವರ ಪ್ರಕಾರ, ಪುನೀತ್ ಅವರ ಸಾವಿನ ನಂತರ ಜನರಲ್ಲಿ ಆತಂಕ ಉಂಟಾಗಿರುವುದಂತೂ ಖಚಿತ. ಎಲ್ಲರಿಗೂ ಇದಕ್ಕೆ ಕಾರಣ ತಿಳಿದುಕೊಳ್ಳುವ ಕುತೂಹಲವಿದೆ. ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಪಡೆಯುವ ಕಾತುರವಿದೆ. ತಮ್ಮ ದೇಹವನ್ನು ಏಕ್‌ದಂ ಫಿಟ್ ಆಗಿಟ್ಟುಕೊಳ್ಳುವುದಲ್ಲ, ಬದಲಿಗೆ ಸೂಕ್ತವಾದ ಮಾರ್ಗ ಯಾವುದು ಎನ್ನುವುದು ಜನರಲ್ಲಿರುವ ಕುತೂಹಲವಾಗಿದೆ, ವಯಸ್ಸು, ಲಿಂಗ, ತರಬೇತಿಯ ಅನುಭವ, ನಿದ್ದೆ, ಪಥ್ಯ ಹಾಗೂ ಒತ್ತಡದಂತಹ ಅಂಶಗಳು ಇದರಲ್ಲಿ ಸೇರಿವೆ. ಜನರಿಗೆ ಈ ಕುರಿತಂತೆ ಅರಿವು ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ, ಎನ್ನುತ್ತಾರೆ ಸುಹೇಲ್.

“ವೃತ್ತಿಪರ ಕ್ರೀಡಾಪಟುಗಳಲ್ಲದವರಿಗೆ, ಅವರ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದಂತಹ ತೀವ್ರತರವಾದ ವ್ಯಾಯಾಮಗಳ ಅಗತ್ಯವೇನೂ ಇರುವುದಿಲ್ಲ. ಆದರೆ ಚೇತರಿಕೆ ಅಂದರೆ ಏನು, ಅವರಿಗೆ ಯಾವ ರೀತಿಯ ವರ್ಕ್ ಔಟ್‌ ಗಳ ಅಗತ್ಯವಿದೆ ಎನ್ನುವುದನ್ನು ತಿಳಿದುಕೊಳ್ಳದೆ ಎಲ್ಲರೂ ಗಂಭೀರ ಸ್ವರೂಪದ ವ್ಯಾಯಾಮವನ್ನು ಕೈಗೊಳ್ಳುವುದು ಅಪೇಕ್ಷಣೀಯವಲ್ಲ,” ಎನ್ನುವುದು ಅವರ ಅಭಿಪ್ರಾಯವಾಗಿದೆ.

ದೇಹದಾರ್ಢ್ಯ ಪಟು ಹಾಗೂ ‘ಹಲ್ಕ್ ಫಿಟ್ನೆಸ್’ನ ಮಾಲೀಕರಾದ ಮಿ. ಏಷ್ಯಾ ಸಯ್ಯದ್ ಸಿದ್ದಿಕ್ ಅವರು, “ನಾವು ನಮ್ಮಲ್ಲಿಗೆ ತರಬೇತಿಗೆ ಬರುವವರೊಂದಿಗೆ ಪ್ರತ್ಯೇಕವಾಗಿ, ವೈಯಕ್ತಿಕವಾಗಿ ಸಮಾಲೋಚಿಸುತ್ತಿದ್ದೇವೆ, ಅವರು ಯಾವುದಾದರೂ ರೀತಿಯ ಒತ್ತಡವನ್ನು ಎದುರಿಸುತ್ತಿರವರೇ ಅಥವಾ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಮತ್ಯಾವುದಾದರೂ ರೀತಿಯ ಅನಾರೋಗ್ಯವಿದೆಯೇ ಎಂದು ವಿಚಾರಿಸಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಪ್ರತಿಯೊಬ್ಬರ ಮಾಹಿತಿಯನ್ನೂ ಸಂಗ್ರಹಿಸಿ, ಯಾವುದೇ ಸಮಸ್ಯೆ ಇಲ್ಲ ಎನ್ನುವವರಿಗೆ ಯಾವ ರೀತಿಯ ವ್ಯಾಯಾಮವನ್ನು ಮುಂದುವರೆಸಬಹುದು ಎಂದು ಸಲಹೆ ನೀಡುತ್ತಿದ್ದೇವೆ.

ವರ್ಕ್ ಔಟ್ ಸೆಷನ್‌ಗಳನ್ನು 45 ನಿಮಿಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ವಿಸ್ತರಣೆ ಮಾಡುವಂತಹ ಕ್ರಮಗಳನ್ನು ನಿಲ್ಲಿಸುವುದೂ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹಲವು ಆಸ್ಪತ್ರೆಗಳು ಆಸಕ್ತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ಆಯೋಜಿಸುತ್ತಿದ್ದೇವೆ. ಇದು ನಮ್ಮ ಗ್ರಾಹಕರ ‘ಆರೋಗ್ಯಕ್ಕೆ’ ಬಹಳ ಮುಖ್ಯ, ಎಂದರು.

ಈ ಕುರಿತು ಮಾತನಾಡಿದ ಮತ್ತೊಂದು ಜಿಮ್‌ ನ ತರಬೇತುದಾರರು, “ಪುನೀತ್ ರಾಜ್‌ ಕುಮಾರ್ ಅವರಂತಹ ಅತ್ಯುತ್ತಮ ದೇಹದಾರ್ಢ್ಯ ಹೊಂದಿರುವ ವ್ಯಕ್ತಿಯೇ ಅನಿರೀಕ್ಷಿತವಾಗಿ ಸಾವನ್ನಪ್ಪಿದರು ಅಂದ ಮೇಲೆ, ಫಿಟ್ನೆಸ್‌ ಗೆ ಪ್ರಾಮುಖ್ಯತೆ ಎಲ್ಲಿದೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಜನರಲ್ಲಿ ಆತಂಕವಿದೆ. ಅನೇಕರು ಜಿಮ್‌ ಗಳನ್ನು ಆರೋಪಿಸುತ್ತಿದ್ದಾರೆ. ಆದರೆ ಯಾವುದೇ ಕೆಲಸವನ್ನಾದರೂ ಸರಿಯಾದ ರೀತಿಯಲ್ಲಿ ಮಾಡಿದರೆ ಯಾವುದೇ ಹಾನಿ ಉಂಟಾಗುವುದಿಲ್ಲ,” ಎಂದರು.

ಕೆಲವು ಆಸ್ಪತ್ರೆಗಳು ಜಿಮ್ ತರಬೇತುದಾರರಿಗೆಂದೇ ಕಾರ್ಡಿಯೊಪಲ್ಮನರಿ ರಿಸಸೈಟೇಷನ್ (ಸಿಪಿಆರ್) ಅನ್ನು ಆರಂಭಸಿವೆ: “ಫಿಟ್ನೆಸ್ ತರಬೇತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಂತಹ ಶೇ.೧೦-೨೦ರಷ್ಟು ಜನರು ಹೃದಯದ ತಪಾಸಣೆಗೆ ಬರಲಾರಂಭಿಸಿದ್ದಾರೆ. ಕೆಲವರಂತೂ ತಾವು ವರ್ಕ್ ಔಟ್ ಮಾಡುವುದೇ ಇಲ್ಲ ಎನ್ನುತ್ತಿದ್ದಾರೆ. ವ್ಯಾಯಾಮ ಮಾಡಲು ಅವರಲ್ಲಿ ಹೆದರಿಕೆ ಉಂಟಾಗಿದೆ. ಆದರೆ ಹೃದಯಕ್ಕೆ ಸಂಬಂಧಪಟ್ಟಂತೆ ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ, ಅದಕ್ಕೆ ಹೆದರಬೇಕಾಗಿಲ್ಲ. ಬಹುಮುಖ್ಯವಾಗಿ ಅನೇಕ ಜಿಮ್‌ ಗಳಲ್ಲಿ ದೇಹದ ಅಂದಾಜಿಸುವಿಕೆಗೆ ಹಲವು ಮೌಖಿಕ ಪ್ರಶ್ನಾವಳಿಗಳಿರುತ್ತವೆ. ಅದನ್ನು ಮತ್ತಷ್ಟು ರಚನಾತ್ಮಕಗೊಳಿಸಲು ಇದು ಸಕಾಲ. ಜಿಮ್‌ ಗಳು ತರಬೇತಿ ಪಡೆಯಲು ಬರುವವರಿಗೆ ಆಗಾಗ ಹೃದಯದ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸುವುದು ಒಳ್ಳೆಯದು.”

“ದೀಪಾವಳಿ ಹಬ್ಬದ ನಂತರ ನಾವು ಜಿಮ್‌ ಗಳಲ್ಲಿ ತರಬೇತಿ ನೀಡುವವರು ಹಾಗೂ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಗಳ ಭದ್ರತಾ ಸಿಬ್ಬಂದಿಗಳಿಗೆ ಸಿಪಿಆರ್ ತರಬೇತಿಯನ್ನು ನೀಡಲು ಯೋಜಿಸಿದ್ದೇವೆ. ಒಂದು ವೇಳೆ ಹೃದಯಾಘಾತವಾಗುವ ಅಪಾಯವಿದ್ದರೆ, ರೋಗಿಯನ್ನು ಆಸ್ಪತ್ರೆಗೆ ಕರೆತರುವವರೆಗೂ ಸಿಪಿಆರ್ ನೆರವಾಗುತ್ತದೆ,” ಎನ್ನುವುದು ವೈಟ್‌ಫೀಲ್ಡ್ ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕನ್ಸ್ಲ್ಟೆಂಟ್ ಇಂಟೆರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ನವೀನ್ ಚಂದ್ರ ಅವರ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Punith raj kumar- death – anxiety- among- fitness- enthusiasts.