ರಂಗಾಯಣ ನಿರ್ದೇಶಕ  ಅಡ್ಡಂಡ ಕಾರ್ಯಪ್ಪ ವಿರುದ್ಧ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ, ಮುತ್ತಿಗೆಗೆ ಯತ್ನ.

ಮೈಸೂರು,ಮಾರ್ಚ್,24,2023(www.justkannada.in): ನಿರ್ಮಲಾನಂದನಾಥ ಸ್ವಾಮೀಜಿ ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಎಲ್ಲಾ ಸಮುದಾಯಕ್ಕೆ ಅಲ್ಲ  ಎಂದು ನಿರ್ಮಾಲಾನಂದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದ  ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಒಕ್ಕಲಿಗ ಸಮುದಾಯದ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗ ಸಮುದಾಯದ ಮುಖಂಡರು ರಂಗಾಯಣ ಕಚೇರಿಗೆ  ಮುತ್ತಿಗೆ ಯತ್ನಿಸಿ ಅಡ್ಡಂಡ ಕಾರ್ಯಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮೈಸೂರಿನ ಕಲಾಮಂದಿರದ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಿದ್ದು  ಪೊಲೀಸರು, ಪ್ರತಿಭಟನಾಕಾರರ ‌ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಡ್ಡಂಡ ಕಾರ್ಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ  ಮುತ್ತಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸರು ಪ್ರತಿಭಟನಾಕಾರರನ್ನ ಬಂಧಿಸಿದರು. ಬಂಧನಕ್ಕೆ ಪ್ರತಿಭಟನಾಕಾರರ ವಿರೋಧ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು.

ಶ್ರೀಗಳ ಬಗ್ಗೆ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ

ನಿರ್ಮಲಾನಂದನಾಥ ಶ್ರೀಗಳ  ಬಗ್ಗೆ ತಾವು ನೀಡಿದ್ಧ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ, ನಿರ್ಮಲಾನಂದ ಶ್ರಿಗಳು ಈ ನಾಡಿನ ಸಂತ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ನಾನು ಹೇಳಿರುವ ಹೇಳಿಕೆಯನ್ನ ಮಾಧ್ಯಮಗಳು ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ. ನಾನು ನಿರ್ಮಲಾನಂದ ಶ್ರೀಗಳ ಕ್ಷಮೆಯಾಚಿಸುತ್ತೇನೆ. ನಿರ್ಮಲಾನಂದ ಶ್ರೀಗಳು ನಮ್ಮ ಸಂತರು. ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿಲ್ಲ. ಆ ಹೇಳಿಕೆಯನ್ನ ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ನಾನು ಅವರ ಭಕ್ತ ಕೋಟಿಗಳಿಗೆ ಕ್ಷಮೆ ಕೇಳಲ್ಲ. ನಾನು ನಿರ್ಮಲಾನಂದ ಶ್ರೀಗಳಿಗೆ ಮಾತ್ರ ಕ್ಷಮೆಯಾಚಿಸುವೆ ಎಂದರು.

ನನಗೆ ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ. ನಾನು ಎಂದೂ ಒಕ್ಕಲಿಗರ ವಿರೋಧಿಯಲ್ಲ. ನಾನು ನಿರ್ಮಲಾನಂದ ಶ್ರೀಗಳ ಪರಮ ಭಕ್ತ. ರಾಜಕೀಯವಾಗಿ ಈ ವಿಚಾರ ಎಳೆದಿರುವುದು ಸರಿಯಲ್ಲ. ಇಲ್ಲಿ ಬಂದು ಪ್ರತಿಭಟನೆ ಮಾಡುವವರಿಗೆ ಕ್ಷಮೆ ಕೇಳುವುದಿಲ್ಲ. ಶ್ರೀಗಳಿಗೆ ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ಅವರಿಗೆ  ಕ್ಷಮೆಕೇಳುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು.

Key words: Protest-Okkaliga community –against- Rangayana director -Addanda Kariappa.