ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ: ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ.

ಮೈಸೂರು,ಆಗಸ್ಟ್,10,2021(www.justkannada.in): ಕಬ್ಬಿಗೆ ವೈಜ್ಞಾನಿಕ ದರ ನಿಗಧಿ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು‌ ಒತ್ತಾಯಿಸಿ ಮೈಸೂರಿನಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮೈಸೂರಿನ ಊಟಿ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೆ ಎಸ್ ಎಸ್ ಕಾಲೇಜು ಬಳಿ ರಸ್ತೆ ಮಧ್ಯೆ ಕುಳಿತು‌ ರೈತರು ಧರಣಿ ನಡೆಸಿದರು.

ರೈತರ ಪ್ರತಿಭಟನೆಯ ಪರಿಣಾಮ ಮೈಸೂರು ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆಯಿತು. ಇದರಿಂದಾಗಿ ಜೆ ಎಸ್ ಎಸ್ ಕಾಲೇಜು ಬಳಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತು. ಇದೇ ವೇಳೆ ಆಗಮಿಸಿದ ಎರಡು ಆಂಬ್ಯುಲೆನ್ಸ್ ಗಳು ತೆರಳಲು ಪ್ರತಿಭಟನಾಕಾರರು ಅವಕಾಶ ಮಾಡಿಕೊಟ್ಟರು.

ಈ ನಡುವೆ ಪ್ರತಿಭಟನೆ ಕೈ ಬಿಡುವಂತೆ ಪೊಲೀಸರು ರೈತರನ್ನ ಮನವೊಲಿಸಿದರು. ಪ್ರತಿಭಟನೆಯಿಂದಾಗಿ ಮೈಸೂರು ನಂಜನಗೂಡು ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.

Key words:  Protest – farmers – Mysore-Road block -movement