ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ಧುಪಡಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ.

ಮೈಸೂರು,ಮಾರ್ಚ್,27,2023(www.justkannada.in): ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ರದ್ಧುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್‍ ನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರುಗಳು ನಾನು ಗಾಂಧಿ, ಕ್ಷಮೆ ಕೇಳಲು ನಾವು ಸಾವರ್ಕರ್ ಅಲ್ಲ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್‍ ನಾಥ್ ಮಾತನಾಡಿ, ರಾಹುಲ್ ಗಾಂಧಿ ಈ ದೇಶದ ಹೆಮ್ಮೆಯ ನಾಯಕ. ಭಾರತ್ ಜೋಡೋ ಯಾತ್ರೆ ಸಹಿಸಿಕೊಳ್ಳಲಾಗದ ಬಿಜೆಪಿಯವರು ರಾಹುಲ್ ಗಾಂಧಿಯನ್ನು ಹಣೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಅದಾನಿಗೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ ಎಂಬುದನ್ನು ಬಹಿರಂಗಪಡಿಸಬೇಕು ಎಂಬ ರಾಹುಲ್ ಗಾಂಧಿ ಒತ್ತಾಯಕ್ಕೆ ಹೆದರಿ ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಿ ಸದಸ್ಯತ್ವವನ್ನು ರದ್ದುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಷ್ಪವಲ್ಲಿ, ಮೈಸೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ, ಕೆಪಿಸಿಸಿ ಮಹಿಳಾ ಪ್ರಧಾನಕಾರ್ಯದರ್ಶಿ, ರಾಧ, ಸುಶ್ಮಿತಾ, ಮಂಜಳಾ, ಜಯಲಕ್ಷ್ಮಿ ಪುತ್ರನ್, ಶೈಲಜಾ ಅಮರ್‍ ನಾಥ್,  ಲತಾರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Key words: Protest – Congress -women- unit – Mysore