ಕಾಲೇಜು ಅಟೆಂಡರ್ ಮೂಲಕ ಹುಡುಗರನ್ನು ಚೇಂಬರ್ ಗೆ ಕರೆಸಿ ನಿಸಾರ್ ಅಹಮದ್ ಮಾಡಿದ್ದು ಏನು ಗೊತ್ತ..?

 

ಬೆಂಗಳೂರು, ಜೂ.02, 2020 : (www.justkannada.in news ) : ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರಿಗೂ ಸಹ ಎಲ್ಲರಿಗೂ ಇರುವಂತೆ ಒಂದು ವೀಕ್ನೆಸ್ ಇತ್ತು. ಅದಕ್ಕಾಗಿ ಅವರು ತುಂಬಾನೆ ಹಾತೊರೆಯುತ್ತಿದ್ದರು. ಆದರೆ ಕುಟುಂಬದವರ ಸಹಕಾರಿಂದ ಆದಷ್ಟು ಬೇಗ ಈ ದೌರ್ಬಲ್ಯದಿಂದ ನಿಸಾರ್ ಹೊರ ಬಂದರು ಅನ್ನೋದು ವಿಶೇಷ.

ನಿಸಾರ್ ಅಹಮದ್ ಅವರಿಗೆ ಇದ್ದ ಆ ದೌರ್ಬಲ್ಯವೇನು..? ಅದರಿಂದ ಅವರೇಗೆ ಹೊರ ಬಂದರು ಅನ್ನುವ ಒಂದು ಇಂಟರೆಸ್ಟಿಂಗ್ ಸಂಗತಿಯನ್ನು ಪತ್ರಕರ್ತ ಎ.ಆರ್.ಮಣಿಕಾಂತ್, ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದು ಹೀಗಿದೆ….

ಸಾರ್, ನಿಮಗೆ ಯಾವುದೇ ಕೆಟ್ಟ ಚಟ ಇರಲಿಲ್ಲವಾ?’-ಅದೊಮ್ಮೆ ಹೀಗೊಂದು ಪ್ರಶ್ನೆ ಕೇಳಿದ್ದೆ. ಅವತ್ತು ನನ್ನ ಜೊತೆಗೆ ಗೆಳೆಯ ಸೀತಾರಾಮ ಮಯ್ಯ ಇದ್ದ.

prof. k s nissar ahmed- nityotsava-Kannada-poet-smoking-weakness

”ನಂಬುತ್ತಿಯೇನಪ್ಪಾ, ಒಂದು ಕಾಲದಲ್ಲಿ ನಾನು ಚೈನ್ ಸ್ಮೋಕರ್ ಆಗಿದೆ. ಒಂದರಹಿಂದೆ ಒಂದು ಸಿಗರೇಟ್ ಸೇದುತ್ತಾ ಇದ್ದೆ. ಎಷ್ಟು ಸೇದುತ್ತಿದ್ದೆ ಅಂತ ಲೆಕ್ಕ ಇಡ್ತಾ ಇರಲಿಲ್ಲ. ಪ್ರತಿ 15-20ನಿಮಿಷಕ್ಕೆ ಒಮ್ಮೆ ಸಿಗರೇಟ್ ಸೇದುವುದು ಅಭ್ಯಾಸ ಆಗಿಬಿಟ್ಟಿತ್ತು. ಯಾವುದೇ ಚಟ ಆಗಲಿ, ಕಲಿಯೋದು ಸುಲಭಾರೀ, ಅದನ್ನು ಬಿಡುವುದು ಕಷ್ಟ. ನನಗೂ ಹೀಗೇ ಆಯ್ತು. ಸಿಗರೇಟ್ ಬಿಡಬೇಕು ಅಂದುಕೊಂಡೆ. ಸ್ವಲ್ಪ ದಿನ ಬಿಟ್ಟೂಬಿಟ್ಟೆ. ಆದ್ರೆ ಮನಸ್ಸು ಆ ಸಿಗರೇಟ್ ಗಾಗಿ, ಅದರ ವಾಸನೆಗಾಗಿ ಹಾತೊರೆಯುತ್ತಿತ್ತು. ಸಿಗರೇಟ್ ನ ಹೊಗೆ ಕುಡಿದ್ರೆ ಸಾಕು ಅನ್ನಿಸಿಬಿಡ್ತಾ ಇತ್ತು. ಆಗ ನಾನೇನು ಮಾಡ್ತಿದ್ದೆ ಗೊತ್ತ? ಬಸ್ಸ್ಟಾಂಡ್ ಲಿ ಬೀಡಿ-ಸಿಗರೇಟ್ ಸೇದ್ತಾ ಇರ್ತಾರಲ್ಲ; ಅವರ ಪಕ್ಕ ಹೋಗಿ ನಿಲ್ತಾ ಇದ್ದೆ! ಅವರು ಹೋಗೆ ಬಿಟ್ಟಾಗ, ಜೋರಾಗಿ ಉಸಿರು ಎಳೆದುಕೊಳ್ತಾ ಇದ್ದೆ. ಹಾಗೆ ಮಾಡಿದ್ರೆ ಏನೋ ಸಮಾಧಾನ ಆಗ್ತಿತ್ತು. ಕೆಲವೊಮ್ಮೆ ಕ್ಲಾಸ್ ಮುಗಿಸಿ ಚೇಂಬರ್ ಗೆ ಬಂದ ತಕ್ಷಣ, ಸಿಗರೇಟ್ ಸೇದಬೇಕು ಅನ್ನಿಸ್ತಿತ್ತು. ಆ ಹೊಗೆಯನ್ನು ಕುಡಿಯಲಿಲ್ಲ ಅಂದ್ರೆ ವಿಪರೀತ ತಲೆನೋವು, ತಲೆಸುತ್ತು ಬಂದುಬಿಡ್ತಾ ಇತ್ತು. ವಿಪರೀತ ಚಡಪಡಿಕೆ ಆಗ್ತಾ ಇತ್ತು.

ಆಗ ನಾನೇನು ಮಾಡ್ತಿದ್ದೆ ಗೊತ್ತಾ? ಚೇಂಬರ್ ನಿಂದ ಹೊರಗೆ ಬಂದು, ಗೇಟ್ ಹತ್ರ ಸಿಗರೇಟ್ ಸೇದುತ್ತಾ ನಿಂತಿರುವ ಸ್ಟೂಡೆಂಟ್ಸ್ ನ ಗಮನಿಸ್ತಾ ಇದ್ದೆ. ನಂತರ, ಅಟೆಂಡರ್ ಮೂಲಕ ಆ ಹುಡುಗರನ್ನು ಚೇಂಬರ್ ಗೆ ಕರೆಸಿ, ‘ಈಗ ನನ್ನ ಎದುರು ನೀವು ಸಿಗರೇಟ್ ಸೇದಬೇಕು’ ಅನ್ನುತ್ತಿದ್ದೆ. ಪಾಪ, ಆ ಹುಡುಗರು ಭಯದಿಂದ, ಸಾರ್, ತಪ್ಪಾಯ್ತು ಸರ್, ನಾಳೆಯಿಂದ ಸೇದಲ್ಲ ಸಾರ್ ಅಂತಿದ್ರು. ನಾನು- ‘ಇಲ್ಲಾರೀ, ನಿಮ್ಮ ವಿರುದ್ಧ ಏನೂ ಆಕ್ಷನ್ ತಗೋಳಲ್ಲ ನಾನು. ಈಗ ಸಿಗರೇಟ್ ಸೇದಿ’ ಅನ್ನುತ್ತಿದ್ದೆ. ಆ ಹುಡುಗರು, ವಿಧಿ ಇಲ್ಲದೆ ಸೇದುತ್ತಿದ್ದರು. ನಾನು ಸಂತೋಷದಿಂದ ಆ ಹೊಗೆಯನ್ನು ಸೇವಿಸಿ ರಿಲ್ಯಾಕ್ಸ್ ಆಗುತ್ತಿದ್ದೆ.

ಹೀಗೇ ಬಿಟ್ಟರೆ ಏನಾದರೂ ಅನಾಹುತ ಆಗಬಹುದು ಅನ್ನಿಸಿದಾಗ, ನಮ್ಮ ಮನೆಮಂದಿ ಒಂದು ಉಪಾಯ ಮಾಡಿದರು. ಅದೊಂದು ರಾತ್ರಿ ಇದ್ದಕ್ಕಿದ್ದಂತೆ ಬಳ್ಳಾರಿಗೆ ಕರೆದೊಯ್ದು ಅಲ್ಲಿ ನಾಟಿ ಔಷಧಿ ಕೊಡಿಸಿದರು. ನನಗೆ ಚಿಕಿತ್ಸೆ ನೀಡಿದವರು – ನೋಡಿ ಸಾರ್, ನೀವೇನಾದ್ರೂ ಮತ್ತೊಮ್ಮೆ ಸಿಗರೇಟ್ ಸೇದಿದರೆ, ಬಾಯಲ್ಲಿ ರಕ್ತ ಬರುತ್ತೆ. ಆಮೇಲೆ ಸತ್ತುಹೋಗ್ತೀರ ಅಷ್ಟೇ…’ ಅಂದರು.

ಅವತ್ತಿಂದ ನಾನು ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ…

 

ooo

key words : prof. k s nissar ahmed- nityotsava-Kannada-poet-smoking-weakness