ಕೆಐಇಡಿಬಿ: ಭೂವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಆದ್ಯತೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,2,2023(www.justkannada.in):  ಭಾರೀ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ವ್ಯಾಪ್ತಿಯ ಕೆಐಎಡಿಬಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತ ಇತ್ಯರ್ಥಪಡಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ಈ ಸಂಬಂಧ ಅಧಿಕಾರಿಗಳು ಇನ್ನು ಒಂದು ವಾರದಲ್ಲಿ ತಮಗೆ ಸರಿಯಾದ ಅಂಕಿಅಂಶ ಮತ್ತಿತರ ವಿವರಗಳನ್ನು ಒದಗಿಸಬೇಕು ಎಂದು ಇಲಾಖೆಯ ಸಚಿವ ಎಂ.ಬಿ ಪಾಟೀಲ್‌ ತಿಳಿಸಿದ್ದಾರೆ.

ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಾಧಿಕಾರ, ನಿಗಮ ಮತ್ತು ಮಂಡಲಿಗಳ ಅಧಿಕಾರಿಗಳೊಂದಿಗೆ ಸುದೀರ್ಘ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಎಂ.ಬಿ ಪಾಟೀಲ್ ಅವರು ಈ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಎಷ್ಟು ಕೈಗಾರಿಕಾ ನಿವೇಶನಗಳನ್ನು ಹೇಗೆ? ಯಾರಿಗೆ ಹಂಚಲಾಗಿದೆ ಮತ್ತು ಅವು ಯಾವ ಸ್ಥಿತಿಗತಿಯಲ್ಲಿವೆ ಎನ್ನುವ ವರದಿ ಸಿದ್ಧವಾಗಬೇಕು. ಇದರ ಆಧಾರದ ಮೇಲೆ ಕ್ಷಿಪ್ರ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕೇವಲ ಟಿಡಿಎಸ್‌ ಮೂಲಕವೇ ವರ್ಷಕ್ಕೆ 1.20 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಒಟ್ಟಿನಲ್ಲಿ ಪಾರದರ್ಶಕ ರೀತಿಯಲ್ಲಿ ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಒತ್ತು ಕೊಡಲಾಗುವುದು. ಇದನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.

“ಭೂಸ್ವಾಧೀನಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಕಾನೂನು ವಿಭಾಗದ ಅಧಿಕಾರಿಗಳು ಸರಿಯಾಗಿ ಪ್ರತಿನಿಧಿಸದೆ, ಪ್ರತಿವಾದಿಗಳ ಜತೆ ಶಾಮೀಲಾಗುತ್ತಿರುವ ವರದಿಗಳಿವೆ. ನೂತನ ಸರಕಾರ ಇದನ್ನು ಎಳ್ಳಷ್ಟೂ ಸಹಿಸುವುದಿಲ್ಲ. ನಾನು ನೋಡಲು ಮೃದು ಸ್ವಭಾವದ ವ್ಯಕ್ತಿಯಾಗಿದ್ದೇನೆ. ಆದರೆ ರಾಜ್ಯದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ. ಕೇವಲ ಲಾಬಿ ಮಾಡಿಕೊಂಡು ಓಡಾಡುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸುವುದು ನಿಶ್ಚಿತ ಎಂದು ಸಚಿವ ಎಂ.ಬಿ ಪಾಟೀಲ್ ಖಡಕ್ಕಾಗಿ ಎಚ್ಚರಿಸಿದರು.

ಹೈದರಾಬಾದ್‌, ಚೆನ್ನೈ, ಪುಣೆ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಉದ್ಯಮಸ್ನೇಹಿ ವಾತಾವರಣವಿದೆ. ರಾಜ್ಯದ ಅಧಿಕಾರಿಗಳು ಅಲ್ಲಿಗೆ ತೆರಳಿ, ಅಲ್ಲಿರುವ ಸೌಲಭ್ಯಗಳು ಇತ್ಯಾದಿಗಳನ್ನು ತಿಳಿದುಕೊಂಡು ಬರಬೇಕು. ರಾಜ್ಯದಲ್ಲಿ ಏಕಗವಾಕ್ಷಿ ಪದ್ಧತಿಯ ಜಾಗದಲ್ಲಿ ಬಹುಗವಾಕ್ಷಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದಕ್ಕೆ ವಿದಾಯ ಹೇಳಿ, ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಈ ಮೂಲಕ ಬಂಡವಾಳವನ್ನು ಆಕರ್ಷಿಸಿ, ‘ಈಸ್ ಆಫ್‌ ಡೂಯಿಂಗ್ ಬಿಜಿನೆಸ್‌’ ಪರಿಸರವನ್ನು ಸೃಷ್ಟಿಸಬೇಕು. ಇದರಲ್ಲಿ ಕಿಂಚಿತ್ತೂ ರಾಜಿಗೆ ಅವಕಾಶವನ್ನು ಕೊಡುವುದಿಲ್ಲ ಎಂದು ಅವರು ನುಡಿದರು.

ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್‌ ಘಟಕದಲ್ಲಿ ತಯಾರಾಗುತ್ತಿರುವ ವಿದ್ಯುತ್ ಪರಿವರ್ತಕಗಳಿಗೆ ಒಳ್ಳೆಯ ಬೇಡಿಕೆ ಇದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಾಗೆಯೇ ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿ ಈಗಾಗಲೇ 10 ಸಾವಿರ ಚದರಡಿ ವಿಸ್ತೀರ್ಣವನ್ನು ವ್ಯಾಪಾರ ಉತ್ತೇಜನಾ ಕೇಂದ್ರಕ್ಕೆ ಮೀಸಲಿಟ್ಟಿದೆ. ಇದರ ಜತೆಗೆ ಇನ್ನೂ10 ಸಾವಿರ ಚದರಡಿ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್ ಸ್ಥಾಪಿಸುವ ಆಲೋಚನೆಯಿದ್ದು, ಈ ಸಂಬಂಧ ಸದ್ಯದಲ್ಲೇ ಸಭೆ ಕರೆಯಲಾಗುವುದು ಎಂದು ಪಾಟೀಲ್‌ ತಿಳಿಸಿದರು.

ಆವಿಷ್ಕಾರ, ಕೌಶಲ್ಯ, ಕೈಗಾರಿಕೆ ಮತ್ತು ಶಿಕ್ಷಣ ಇಲಾಖೆಗಳು ಜತೆಗೂಡಿ ಕೆಲಸ ಮಾಡುವಂತಾಗಲು ಸಮಿತಿ ರಚಿಸಲಾಗುವುದು. ಜತೆಗೆ, ಉದ್ಯಮಗಳ ಬೆಳವಣಿಗೆಯ ದೃಷ್ಟಿಯಿಂದ ಐಐಟಿಗಳಿಗೆ ಆದ್ಯತೆ ಕೊಡಲಾಗುವುದು. ಬೆಂಗಳೂರಿನಲ್ಲಿ ಭೂಮಿಯ ಬೆಲೆ ದುಬಾರಿಯಾಗಿರುವುದರಿಂದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡಬೇಕು. ಒಟ್ಟಿನಲ್ಲಿ ರಾಜ್ಯವು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.

ಸಭೆಯಲ್ಲಿ ಕೆಐಎಡಿಬಿ, ಕರ್ನಾಟಕ ಉದ್ಯೋಗ ಮಿತ್ರ, ವಿಶ್ವೇಶ್ವರಯ್ಯ ಟ್ರೇಡ್‌ ಪ್ರೊಮೋಷನ್‌ ಸೆಂಟರ್, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌), ಮೈಸೂರು ಸೇಲ್ಸ್‌ ಇಂಟರ್‍‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಲ್‌) ಮುಂತಾದ ಉದ್ದಿಮೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರ‌ ಹಿರಿಯ ಅಧಿಕಾರಿಗಳು ಇದ್ದರು.

Key words: Priority – clear- pending- land acquisition- cases – KIADB- Minister- MB Patil

ENGLISH SUMMARY..

Priority would be to clear pending land acquisition cases in KIADB: Minister MB Patil

Bengaluru: Minister for large and medium industries MB Patil said on Thursday that his preference would be to resolve pending land acquisition cases in KIADB and instructed the concerned officials to provide details of such cases within a week.

He was speaking in a detailed review meeting with officials of authorities, boards and corporations which function under his ministry.

He also asked officials to submit a report regarding the allotment of industrial plots in the last 5 years and their current status.

Saying that the government’s focus would be on the growth of industries he asked officials to work accordingly.

Minister stated that there are reports alleging that officials of the legal cell of KIADB not representing the cases with commitment and warned that the government would not tolerate such an attitude.

Minister Patil said that the government was considering setting up an additional convention centre of 10,000 sq. ft. for the Trade Promotion Centre at Whitefield in addition to the existing 10,000 sq. ft.

He suggested officials to give importance to the development of industries in tier 2 and 3 tier cities

Officials of KIADB, Karnataka Udyoga Mitra, Visvesvaraya Trade Promotion Centre, KSDL, MSIL, and other enterprises were present.

S Selvakumar, Principal Secretary, Department of Industries, Gunjan Krishna, Commissioner, Department of Commerce and Industries and other senior officials attended the meeting.