ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರ ಮಾತು ಏನಾಯ್ತು..? ವಿ ಆರ್ ಸುದರ್ಶನ್ ಟೀಕೆ.

kannada t-shirts

ಮೈಸೂರು,ಸೆಪ್ಟಂಬರ್,21,2021(www.justkannada.in):  ಮೈಸೂರು ಬಹಳ ದೊಡ್ಡ ಪರಂಪರೆ ಇರುವ ನಗರ. ಕರ್ನಾಟಕ ಹೆಗ್ಗಳಿಗೆ ಕೂಡ. ಆದರೆ ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಾತು ಏನಾಯಿತು? ಎಂದು ವಿಧಾನ ಪರಿಷತ್ ನ ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ವಿಧಾನ ಪರಿಷತ್ ನ ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನರ್ಮ್ ಯೋಜಯಡಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರು. ಆದರೆ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೈಸೂರನ್ನು ಕಡೆಗಣಿಸಲಾಗಿದೆ. ಮೋದಿಯವರು ಚುನಾವಣಾ ಪೂರ್ವದಲ್ಲಿ ಪ್ರಚಾರಕ್ಕಾಗಿ ಬಂದಿದ್ದಾಗ ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆ ಹುಸಿಯಾಗಿದೆ. ಈ ಬಗ್ಗೆ  ಇಲ್ಲಿನ ಜನಪ್ರತಿನಿಧಿಗಳು ಮೋದಿಯವರ ಗಮನಕ್ಕೆ ತರಬೇಕು. ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಮೋದಿಯವರಿಗೆ ನೆನಪಿಸಬೇಕು ಎಂದು ಟಾಂಗ್ ನೀಡಿದರು.

ಬಿಜೆಪಿ ಯವರು ಬರೀ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ, ಬಿಜೆಪಿ‌ ಮುಖಂಡರು‌ ಮೈಸೂರನ್ನು ಮರೆತು ಹೋದಂತೆ ಕಾಣುತ್ತಿದೆ.  ಅವರ ಪಕ್ಷದ ಮುಖಂಡರಿಗೂ ಮನವರಿಕೆ ಮಾಡಕೊಡಬೇಕಿದೆ.  ಆಶ್ವಾಸನೆ ಕೊಟ್ಟು ಮರೆತು ಹೋದರೆ ನಿಮ್ಮ ಆಶ್ವಾಸನೆ ನಂಬುವುದು ಹೇಗೆ ಎಂದು ಪ್ರಶ್ನೆ ಮಾಡಬೇಕಿದೆ ಎಂದರು.

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಲಾಗುತ್ತದೆ. ಬೂತ್ ಮಟ್ಟದಲ್ಲಿ ಬೂತ್ ಸದಸ್ಯರು ಅಧ್ಯಕ್ಷರನ್ನು ನೇಮಕ‌ಮಾಡುವ ಕೆಲಸ ಮಾಡಲಾಗುತ್ತಿದೆ. ಚುನಾವಣೆ ಏಂಜೆಂಟ್ ಗಳನ್ನು ಮಾಡಿ ಅವರಿಗೆ ತರಬೇತಿ ನೀಡಲಾಗುವುದು. ಮೈಸೂರು ಮತ್ತು ಚಾಮರಾಜ ಜಿಲ್ಲೆ ಸೇರಿದಂತೆ ಆಯಾಯ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಿಗೆ ಉಸ್ತುವಾರಿ ನೀಡಲಾಗಿದೆ. ಕರ್ನಾಟಕದಲ್ಲಿ ಜನ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ನಿರೀಕ್ಷೆ ಇದೆ. ಇದಕ್ಕೆ ಪಕ್ಷ ರಾಜ್ಯದಾದ್ಯಂತ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಿದೆ‌. ಸಿದ್ದರಾಮಯ್ಯನವರಿಂದ ಸದನದ ಒಳಗೆ ಮತ್ತು ಹೊರಗೆ ಸಾಮೂಹಿಕವಾಗಿ ಪಕ್ಷವನ್ನು ಸದೃಡಗೊಳಿಸುವ ಕೆಲಸ ಆಗುತ್ತಿದೆ. ಡಿ ಕೆ ಶಿವಕುಮಾರ್ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕವಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ ಎಂದು ವಿ ಆರ್ ಸುದರ್ಶನ್ ಹೇಳಿದರು.

Key words: Prime Minister- Narendra Modi-mysore-paris -VR Sudarshan

website developers in mysore