ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ.

ದೊಡ್ಡಬಳ್ಳಾಪುರ,ಸೆಪ್ಟಂಬರ್,10,2022(www.justkannada.in):  ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ  ಕೆಲಸ ನೀಡುವುದಾಗಿ  ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಸಮಾವೇಶಕ್ಕೆ  ದಾಖಲೆಯ ಸಂಖ್ಯೆಯಲ್ಲಿ ಸೇರಿದ್ದಕ್ಕೆ ನಿಮಗೆ ಅಭಿನಂದನೆ. ಇಲ್ಲಿಂದ ಇಡೀ ರಾಜ್ಯಕ್ಕೆ ಕೇಳಿಸುವಂತೆ ಸಂದೇಶ ನೀಡಿದ್ದೇವೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಸಂದೇಶ ರವಾನೆ ಆಗಿದೆ. ನೀವು ಇಟ್ಟಿರುವ ವಿಶ್ವಾಸಕ್ಕೆ ನಾವು ದ್ರೋಹ ಮಾಡಲ್ಲ ಎಂದು ಸಿಎಂ ಬೊಮ್ಮಾಯಿ ನುಡಿದರು.

2019ರಲ್ಲೇ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್​ ನ ಹುನ್ನಾರದಿಂದ ಅದು ಕೈತಪ್ಪಿತ್ತು. ಕಾಂಗ್ರೆಸ್​ನಿಂದ ಬಂದ ಎಲ್ಲ ಶಾಸಕರೂ ವೀರರು.  17 ಮಂದಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರು ಅವರೆಲ್ಲಾ ಪಕ್ಷಕ್ಕೆ ಬಂದು ಬಿಎಸ್ ವೈಗೆ ಬಲ ಕೊಟ್ಟರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಿದ್ಧರಾಮಯ್ಯ ಅನ್ನಭಾಗ್ಯ ಕೊಟ್ಟೆ ಅಂತಾರೆ. ಆದರೆ ಚೀಲದಲ್ಲಿದ್ದ ಅಕ್ಕಿ ಮೋದಿ ಅವರದ್ದು, ಚೀಲ ಮಾತ್ರ ನಿಮ್ಮದು.  ಅನ್ನಭಾಗ್ಯದಲ್ಲಿ ಅವ್ಯವಹಾರ ಆಯ್ತು. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ದಂಧೆ ಮಾಡಿದ್ರಿ. ಲ್ಯಾಪ್​ಟಾಪ್​ ಕೊಡುವುದರಲ್ಲಿ ಹಗರಣ ಮಾಡಿದ್ರಿ.  ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ  ಗುಡುಗಿದರು.

ನಾನು ಕಾಂಗ್ರೆಸ್​​ ಪಕ್ಷಕ್ಕೆ ಹೇಳಲು ಬಯಸುತ್ತೇನೆ. ನಿಮ್ಮ ಕನಸು ಕೇವಲ ಕನಸು ಕನಸಾಗಿಯೇ ಉಳಿಯುತ್ತೆ. ನಾವು ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸುತ್ತೇವೆ. ಜನಶಕ್ತಿ ಮುಂದೆ ಯಾರು ಕೂಡ ದೊಡ್ಡವರಲ್ಲ. ಇಲ್ಲಿಂದ ನಾನು ನನ್ನ ಶಕ್ತಿಯನ್ನ ಇಮ್ಮಡಿಗೊಳಿಸಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Praveen Nettaru-family -job – CM’s office- Basavaraj Bommai