ನಮ್ಮದು ಅಭಿವೃದ್ದಿಪರ ರಾಜಕೀಯ: ರಾಜ್ಯದ ಜನರ ಆಶೀರ್ವಾದ ಇರುವವರೆಗೂ ನನ್ನ ಮುಗಿಸಲು ಆಗಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ.

ಬಾಗಲಕೋಟೆ,ಫೆಬ್ರವರಿ,22,2023(www.justkannada.in): ಟಿಪ್ಪು ಮುಗಿಸಿದಂತೆ ಸಿದ್ಧರಾಮಯ್ಯರನ್ನ ಮುಗಿಸೋಣ ಎಂಬ ಸಚಿವ ಅಶ್ವಥ್ ನಾರಾಯಣ್  ಹೇಳಿಕೆ ಬಗ್ಗೆ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನಮ್ಮದು ದ್ವೇಷದ ಪರ ರಾಜಕೀಯ ಅಲ್ಲ. ನಮ್ಮದು ಅಭಿವೃದ್ದಿಪರ ರಾಜಕೀಯ. ಎಲ್ಲಿಯವರೆಗೆ ರಾಜ್ಯದ ಜನರ ಆಶೀರ್ವಾದ ನನ್ನ ಮೇಲಿರುತ್ತದೆ ಅಲ್ಲಿಯವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಹೇಳಿದ್ದಿಷ್ಟು.

ನಾನು ಮತ್ತು ಡಿ.ಕೆ ಶಿವಕುಮಾರ್‌ ಅವರು ಸಹಿ ಮಾಡಿರುವ ಗ್ಯಾರೆಂಟಿ ಕಾರ್ಡ್‌ ಅನ್ನು ಸಾಂಕೇತಿಕವಾಗಿ ಇಲ್ಲಿ ಕೆಲವು ಮಹಿಳೆಯರಿಗೆ ವಿತರಣೆ ಮಾಡಿದ್ದೇನೆ. ಇಂದು ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿರುವ ಬಡ ಜನರ ನೆರವಿಗೆ ಧಾವಿಸಬೇಕು ಎಂದು ಎರಡು ಭರವಸೆಗಳನ್ನು ನೀಡಿದ್ದೇವೆ, ಮೊದಲನೆಯದು ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ.2,000 ದಂತೆ ವರ್ಷಕ್ಕೆ ರೂ.24,000 ನೀಡುತ್ತೇವೆ. ಎರಡನೆಯದು ರಾಜ್ಯದ ಪ್ರತೀ ಮನೆಗೆ ತಿಂಗಳಿಗೆ ಉಚಿತವಾಗಿ 200 ಯುನಿಟ್‌ ವಿದ್ಯುತ್‌ ಅನ್ನು ನೀಡುತ್ತೇವೆ. ಇದಕ್ಕೆ ಬದ್ಧರಿದ್ದೇವೆ ಎಂಬುದಕ್ಕೆ ಗ್ಯಾರೆಂಟಿ ಕಾರ್ಡ್‌ ಅನ್ನು ಕೂಡ ನೀಡಿದ್ದೇವೆ. ಈ ಹಿಂದೆ ನಾವು ಮಾತು ಕೊಟ್ಟಂತೆ ಅನ್ನಭಾಗ್ಯ, ಕೃಷಿಭಾಗ್ಯ, ಮೈತ್ರಿ, ಮನಸ್ವಿನಿ, ಇಂದಿರಾ ಕ್ಯಾಂಟೀನ್‌, ಶಾದಿಭಾಗ್ಯ, ಮಾತೃಪೂರ್ಣ, ರೈತರ ಸಾಲ ಮನ್ನಾ, ಕ್ಷೀರಭಾಗ್ಯ, ಕ್ಷೀರಧಾರೆ ಯೋಜನೆಗಳನ್ನು ಜಾರಿ ಮಾಡಿದ್ದೆವು. ನೇಕಾರರಿಗೆ 1 ರೂ. 25 ಪೈಸೆಯಂತೆ ಪ್ರತೀ ಯುನಿಟ್‌ ವಿದ್ಯುತ್‌ ನೀಡಿದ್ದು, 50,000 ರೂ. ವರೆಗಿನ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಇಂದು ನೇಕಾರರು ನನಗೆ ಕೆಲವು ಮನವಿಗಳನ್ನು ನೀಡಿದ್ದಾರೆ, ಮುಂದೆ ನಾವು ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ನಾವು ಕೊಟ್ಟ ಮಾತಿಗೆ ತಪ್ಪಿದರೆ ಒಂದು ಕ್ಷಣ ಕೂಡ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಬಸವ ಜಯಂತಿಯ ದಿನ. ಬಸವಾದಿ ಶರಣರು ನುಡಿದಂತೆ ನಡೆದವರು, ಜನರಿಗೆ ಕೊಟ್ಟ ಮಾತಿಗೆ ಬದ್ಧನಾಗಿ ನಡೆದುಕೊಳ್ಳಬೇಕು ಎಂದು ಅದೇ ದಿನ ಪ್ರಮಾಣ ಮಾಡಿದ್ದೆ. ನಾಡಿನ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆ. ನಮ್ಮ ಪಕ್ಷದ ನಾಯಕರ ಜೊತೆ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ರಾಜ್ಯದ ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 10,000 ಕೋಟಿಯಂತೆ 5 ವರ್ಷದಲ್ಲಿ 50,000 ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೆ, ನಾವು ಅಧಿಕಾರಕ್ಕೆ ಬಂದ ನಂತರ 56,000 ಕೋಟಿ ಹಣವನ್ನು ಖರ್ಚು ಮಾಡಿದ್ದೆ. 2018ರಲ್ಲಿ ಬಿಜೆಪಿಯವರು ನೀರಾವರಿಗೆ 5 ವರ್ಷದಲ್ಲಿ ಒಂದುವರೆ ಲಕ್ಷ ಕೋಟಿ ಹಣ ಖರ್ಚು ಮಾಡುವುದಾಗಿ ಭರವಸೆ ನೀಡಿ, ಸುಮಾರು 45 ರಿಂದ 50 ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಬಿಜೆಪಿ ಪಕ್ಷ ತಮ್ಮ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿ ಅದರಲ್ಲಿ 50 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಇಂದು ಜನ ಯಾರು ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದಾರೆ ಎಂದು ತೀರ್ಮಾನ ಮಾಡಬೇಕು ಎಂದು ಸಿದ್ಧರಾಮಯ್ಯ ಹೇಳಿದರು.

ಇಂದು ರೈತರು ನನ್ನನ್ನು ಭೇಟಿ ಮಾಡಿ ನಂದವಾಡಿ ಏತನೀರಾವರಿ ಯೋಜನೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದ ಯೋಜನೆಯನ್ನು ಮಾಡಿಕೊಟ್ಟಿದ್ದೇವೆ, ಮುಂದೆ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಹಂತದ ಯೋಜನೆಯನ್ನು ಕೂಡ ಮಾಡಿಕೊಡುತ್ತೇವೆ, ಈ ಬಗ್ಗೆ ಇಲ್ಲಿನ ರೈತರು ಯಾವುದೇ ಚಿಂತೆ ಮಾಡುವುದು ಬೇಡ. ವಿಜಯಪುರದಲ್ಲಿ ಬೃಹತ್ ಸಮಾವೇಶ ಮಾಡಿ, ನಾವು ಅಧಿಕಾರಕ್ಕೆ ಬಂದ ನಂತರದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿನ ಎಲ್ಲಾ ಸಂತ್ರಸ್ಥರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಕೂಡ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಹಿಂದೆ ವಿಜಯಾನಂದ ಕಾಶಪ್ಪನವರು ಶಾಸಕರಾಗಿದ್ದಾಗ ಮಂತ್ರಿ ಪದವಿಗಾಗಿ ಲಾಭಿ ಮಾಡಿಲ್ಲ, ಅದರ ಬದಲು ಹುನಗುಂದ ಕ್ಷೇತ್ರಕ್ಕೆ ನಾನು ಕೇಳುವ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ಕೊಡಿ ಸಾಕು ಎಂದಿದ್ದರು. ಅವರು ಕೇಳಿದ್ದ ಪ್ರತೀ ಬೇಡಿಕೆಗಳನ್ನು ಈಡೇರಿಸಿದ್ದೆ, ನಮ್ಮ ಸರ್ಕಾರ ಇದ್ದಾಗ ಸುಮಾರು 4,500 ಕೋಟಿ ಅನುದಾನವನ್ನು ಹುನಗುಂದಕ್ಕೆ ನೀಡಿದ್ದೆ. ಅಕ್ಷರಧಾಮ ಸ್ಥಾಪನೆಗೆ ಅನುಮೋದನೆ ನೀಡಿ, ಹಣ ಬಿಡುಗಡೆ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ, ಆದರೆ ಇಂದು ಕೆಲಸ ನಿಂತಿದೆ. ಬಸವಣ್ಣನ ಹೆಸರು ಹೇಳುವವರು ಬಸವಣ್ಣನ ಮಾತಿನಂತೆ ನಡೆಯುತ್ತಿಲ್ಲ, ಅಂಥವರಿಗೆ ಮತ ಹಾಕುತ್ತೀರ?

ಮಲಪ್ರಭಾ ಮತ್ತು ಕೃಷ್ಣಾ ನದಿ ಜೋಡಿಸುವ ಸೇತುವೆ ನಿರ್ಮಾಣ ಆಗಲು ಕಾಶಪ್ಪನವರ ಶ್ರಮ ಮತ್ತು ನಮ್ಮ ಸಹಕಾರ ಕಾರಣ, ನಾವು ನಿರ್ಮಿಸಿದ್ದ ಸೇತುವೆಯನ್ನು ಉದ್ಘಾಟನೆ ಕೂಡ ಮಾಡಲು ಈ ಸರ್ಕಾರದಿಂದ ಆಗಿಲ್ಲ. ಬಿಜೆಪಿಯವರು ಎಂದರೆ ಮಾನಗೆಟ್ಟವರು, ಲಜ್ಜೆಗೆಟ್ಟವರು ಎಂದರ್ಥ. ಇದೇ ಕಾರಣಕ್ಕೆ ನಿನ್ನೆ ಸದನದಲ್ಲಿ “ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಜನರನ್ನು ಪ್ರಚೋದಿಸಿ ಓಟು ಪಡೆಯುವ ಕೆಲಸ ಮಾಡಬೇಡಿ, ಧರ್ಮ, ಜಾತಿಗಳು ಜನರಿಗೆ ಪ್ರಸ್ತುತ ವಿಚಾರಗಳಲ್ಲ, ಜನರಿಗೆ ಬೇಕಿರುವುದು ತಮ್ಮ ಬೆಳೆಗೆ ಸರಿಯಾದ ಬೆಲೆ, ಕುಡಿಯಲು ನೀರು, ಹೊಟ್ಟೆತುಂಬ ಊಟ, ಯುವಕರಿಗೆ ಉದ್ಯೋಗ, ವಾಸ ಮಾಡಲು ಸೂರು ಬೇಕು. ಹೀಗೆ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಿ” ಎಂದು ಹೇಳಿದ್ದೆ. ಇದನ್ನು ಮಾತಾಡುವುದು ಬಿಟ್ಟು ಸಿದ್ದರಾಮಯ್ಯನನ್ನ ಮುಗಿಸಿ ಎನ್ನುತ್ತಾರೆ. ರಾಜ್ಯದ ಜನರ ಆಸ್ತಿ, ಪ್ರಾಣ ರಕ್ಷಣೆ ಮಾಡಬೇಕಾದ ಮಂತ್ರಿಯೊಬ್ಬ ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದು ನನ್ನ ಹತ್ಯೆಗೆ ಜನರನ್ನು ಪ್ರಚೋದಿಸುತ್ತಾರೆ ಎಂದರೆ ಅಂಥವರು ಮಂತ್ರಿಯಾಗಿರಬೇಕ? ನನ್ನನ್ನು ಮುಗಿಸುವುದಕ್ಕೆ ನಿಮ್ಮೆಲ್ಲರ ಒಪ್ಪಿಗೆ ಇದೆಯಾ? ನೀವು ನನ್ನನ್ನು ಹೊಡೆದಾಕುವುದಾದರೆ ನಾನು ಸಿದ್ಧನಿದ್ದೇನೆ, ಆದರೆ ರಾಜ್ಯದ ಬಡವರು, ದಲಿತರು, ರೈತರು, ಅಲ್ಪಸಂಖ್ಯಾತ ಜನರಿಗೆ ನ್ಯಾಯ ಕೊಡಿಸಲು ನಾನು ಮಾಡುತ್ತಿರುವ ಹೋರಾಟಗಳಿಂದ ಪ್ರಾಣ ಹೋದರೂ ಹಿಂದೆ ಸರಿಯಲ್ಲ ಎಂದು ನಿನ್ನೆ ಸದನದಲ್ಲಿ ಹೇಳಿದ್ದೇನೆ.

ಮಹಾತ್ಮ ಗಾಂಧಿ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಗೋಡ್ಸೆ ಮೂಲಕ ಕೊಲೆ ಮಾಡಿಸಿದರು, ಬಿಜೆಪಿಯವರು ಹೇಡಿಗಳು, ನೀವು ಬೌದ್ಧಿಕವಾಗಿ ದಿವಾಳಿಯಾಗಿದ್ದೀರಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ, ಸಿದ್ದರಾಮಯ್ಯನನ್ನು ಮುಗಿಸುವುದು ಮುಖ್ಯವಲ್ಲ, ಒಬ್ಬ ಸಿದ್ದರಾಮಯ್ಯ ಹೋದರೆ ಸಾವಿರಾರು ಸಿದ್ದರಾಮಯ್ಯ ಹುಟ್ಟಿ ಬರುತ್ತಾರೆ. ನಾನು ರೈತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಜನರ ಪರವಾಗಿ ಹೋರಾಟ ಮಾಡುತ್ತಿದ್ದೇನೆ, ಇದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಂಗಳೂರಿನಲ್ಲಿ ಮಾತನಾಡುವಾಗ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಚರ್ಚೆಯಾಗಬೇಕಿರುವುದು ಅಬ್ಬಕ್ಕ ವರ್ಸಸ್‌ ಟಿಪ್ಪು ಸುಲ್ತಾನ್‌ ಎಂದಿದ್ದಾರೆ. ಇದು ನಿಮ್ಮ ಜೀವನಕ್ಕೆ ಪ್ರಸ್ತುತವೇ ಎಂದು ಜನರೇ ಯೋಚನೆ ಮಾಡಬೇಕಲ್ವ? ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ರಸ್ತೆ, ಚರಂಡಿ ಹೀಗೆ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂದಿದ್ದಾರೆ. ಇದರಿಂದ ಯುವಜನರಿಗೆ ಉದ್ಯೋಗ ಸಿಗುತ್ತಾ, ಬಡವರ ಹೊಟ್ಟೆ ತುಂಬುತ್ತಾ? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಇಂಥಾ ದ್ವೇಷ ರಾಜಕೀಯದ ಬದಲಾಗಿ ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ನಾವು ಮುಂದೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಬರೀ ಶ್ರೀಮಂತರು ಊಟ ಮಾಡಿದ್ರೆ ಸಾಕ? ಬಡವ ಹೊಟ್ಟೆ ತುಂಬ ಊಟ ಮಾಡುವುದು ಬೇಡ್ವಾ? ಇದಕ್ಕೂ ನಾವು ಗ್ಯಾರೆಂಟಿ ಕಾರ್ಡ್‌ ಅನ್ನು ಕೊಡುತ್ತೇವೆ ಎಂದರು.

ಮೋದಿ ಅವರು ಹೇಳಿದ್ದ ಅಚ್ಚೇದಿನ್‌ ಬಂತಾ? ನ ಖಾವೂಂಗ, ನ ಖಾನೇದುಂಗ ಎಂದಿದ್ದರು, ರಾಜ್ಯದಲ್ಲಿ 40% ಕಮಿಷನ್‌ ನಡೆಯುತ್ತಿರುವುದು ಗೊತ್ತಿದ್ದರೂ ಸುಮ್ಮನಿರುವುದು ಯಾಕೆ? ಕೆಂಪಣ್ಣನವರು ಬರೆದ ಪತ್ರಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಮೋದಿಜಿ?  ಎಂದು ಸಿದ್ಧರಾಮಯ್ಯ ಗುಡುಗಿದರು.

ಹಿರೇಮಠ ಅವರು ನನ್ನ ಹೆಸರು ಹೇಳಿಕೊಂಡು ಇಲ್ಲಿ ಮತ ಕೇಳುತ್ತಿದ್ದಾರಂತೆ, ನೀವು ಅಂಥವರಿಗೆ ಉಗಿದು ಕಳಿಸಿ, ನನ್ನ ಹೆಸರು ಹೇಳುವ ಯೋಗ್ಯತೆ ಅವರಿಗೆ ಇದೆಯಾ ಎಂದು ಕೇಳಿ. ಅವರ ಮನೆಯ ಮದುವೆ ಕಾರ್ಯಕ್ಕೆ ಹೋಗಿದ್ದೆ ಅಷ್ಟೆ, ಮದುವೆ, ಸಾವಿನ ಕಾರ್ಯಗಳಿಗೆ ಹೋಗುವುದೇ ಬೇರೆ ರಾಜಕೀಯವೇ ಬೇರೆ. ನಾನು ನೂರಕ್ಕೆ ನೂರು ವಿಜಯಾನಂದ ಕಾಶಪ್ಪನವರ್‌ ಅವರ ಪರ. ಕಾಶಪ್ಪನವರ್‌ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ. ಕಾಶಪ್ಪನವರ್‌ ಗೆ ನೀಡುವ ಪ್ರತಿ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ, ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: prajadwani yatre-Bagalakote-former CM-Siddaramaiah