ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆ; ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಸಿದ್ಧತೆ ಪರಿಶೀಲನೆ

ಮೈಸೂರು, ಜೂನ್ 18, 2022(www.justkannada.in): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 21ರಂದು ಮೈಸೂರಿನ ಅರಮನೆ ಆವರಣದಲ್ಲಿ ಭಾಗವಹಿಸಲಿರುವ ವಿಶ್ವ ಯೋಗ ದಿನ ಕಾರ್ಯಕ್ರಮದ ಸಿದ್ಧತಾ ಕಾರ್ಯಗಳನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರಿಶೀಲನೆ ನಡೆಸಿದರು.

ಯೋಗ ಕಾರ್ಯಕ್ರಮ ನಡೆಯುವ ಅರಮನೆ ಆವರಣ, ಕೇಂದ್ರ ಆಯುಷ್ ಇಲಾಖೆಯ ವಸ್ತುಪ್ರದರ್ಶನ ನಡೆಯುವ ದಸರಾ ವಸ್ತು ಪ್ರದರ್ಶನ ಮೈದಾನ, ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸುವ ಮಹಾರಾಜ ಕಾಲೇಜು ಮೈದಾನ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವರು ವೇದಿಕೆ ಸಿದ್ಧತಾ ಕಾರ್ಯಗಳನ್ನು ವೀಕ್ಷಿಸಿದರು.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಯಾವುದೇ ಲೋಪವಾಗದಂತೆ, ಎಸ್ ಜಿಪಿ ಅವರ ನಿರ್ದೇಶನದ ಅನುಸಾರ ಸಿದ್ಧತೆ ಕಾರ್ಯಗಳು ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ  ಎಸ್.ಟಿ ಸೋಮಶೇಖರ್, ಜೂನ್ 19ರಂದು  ಅಂತಿಮ ಹಂತದ ಯೋಗ ತಾಲೀಮು ನಡೆಸಲಾಗುತ್ತದೆ. ಯೋಗಪಟುಗಳು ಬೆಳಗ್ಗೆ 5.30ಕ್ಕೆ ಅರಮನೆ ಆವರಣ ಪ್ರವೇಶಿಸಬೇಕು. ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಹೇಳಿದರು.

ಮಳೆ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ ಹತ್ತು, ಹದಿನೈದು ವರ್ಷದ ಇತಿಹಾಸ ಗಮನಿಸಿದರೆ ಬೆಳಗ್ಗಿನ ವೇಳೆ ಮಳೆ ಬಂದ ನಿದರ್ಶನ ಇಲ್ಲ. ಎಸ್ ಜಿಪಿ ನಿರ್ದೇಶನದ ಅನುಸಾರ ಎಲ್ಲಾ ಸಿದ್ಧತೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಮಂತ್ರಿಗಳು ಕೇಂದ್ರ ಪುರಸ್ಕೃತ ಯೋಜನೆಗಳ‌ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 20 ಜನ ಫಲಾನುಭವಿಗಳನ್ನು ಗುರುತಿಸಲಾಗಿದ್ದು ಪ್ರಧಾನಿಗಳು ಯಾರೊಂದಿಗೆ ಬೇಕಾದರೂ ಸಂವಾದ ನಡೆಸಬಹುದು ಎಂದು ಹೇಳಿದರು.

ನಂತರ ಅರಮನೆ ಆಡಳಿತ ಮಂಡಳಿಯಲ್ಲಿ ಯೋಗ ಕಾರ್ಯಕ್ರಮಗಳ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು.  15 ಸಾವಿರ ಮಂದಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ನಾಲ್ಕು ಗೇಟ್ ಗಳ ಅರಮನೆ ಆವರಣ ಪ್ರವೇಶಿಸಬಹುದಾಗಿದೆ. ಕ್ಯೂ ಆರ್ ಕೋಡ್ ಹೊಂದಿರುವ ವಾಹನಗಳನ್ನು ಸ್ಕ್ಯಾನಿಂಗ್ ಮಾಡಿದ ನಂತರವಷ್ಟೇ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಗಣ್ಯರಿಗೆ ಪ್ರತ್ಯೇಕ ಪ್ರವೇಶ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ವಿವರಿಸಿದರು.

Key words: PM Modi-Mysore-Preparation – Minister -ST Somashekhar