ಬೆಂಗಳೂರು ನಗರದಲ್ಲಿ ಪ್ರತಿಭಟನೆಗಾಗಿ ಒಂದು ಸ್ಥಳ.

kannada t-shirts

ಬೆಂಗಳೂರು, ಆಗಸ್ಟ್ 31, 2021 (www.justkannada.in): ಇನ್ನು ಮುಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಬಿಸಿಲು, ಮಳೆ, ಗಾಳಿಯಲ್ಲಿ ನಿಂತು ಪ್ರತಿಭಟನೆ ನಡೆಸಬೇಕಾಗಿಲ್ಲ. ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗುವುದಿಲ್ಲ. ಹೇಗೆ ಎಂದಿರಾ? ಬಿಬಿಎಂಪಿ, ಪ್ರತಿಭಟನೆ ನಡೆಸುವವರ ಅನುಕೂಲಕ್ಕಾಗಿ ಐತಿಹಾಸಿಕ ಫ್ರೀಡಂ ಪಾರ್ಕ್ ನಲ್ಲಿ ಎರಡು ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಬೃಹತ್ ಛಾವಣಿ, 43 ಶೌಚಾಲಯಗಳು ಹಾಗೂ ೧,೦೦೦ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.

ಇನ್ನೊಂದು ತಿಂಗಳಲ್ಲಿ ಪ್ರತಿಭಟನೆಗಳಿಗಾಗಿಯೇ ಮೀಸಲಿರುವ ಈ ಸ್ಥಳ ಆರಂಭವಾಗಲಿದೆ. ಈ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಛಾವಣಿ ಎಷ್ಟು ದೊಡ್ಡದಾಗಿದೆ ಎಂದರೆ ಸುಮಾರು ೫,೦೦೦ ಜನರಿಗೆ ಒಮ್ಮೆಗೆ ನೆರಳನ್ನು ಒದಗಿಸುತ್ತದೆ. ಪ್ರತಿಭಟನೆ ನಡೆಸುವವರಿಗೆ ಅದರಲ್ಲೂ ಮಹಿಳೆಯರು, ವಯಸ್ಸಾದವರಿಗೆ ರಸ್ತೆಗಳಲ್ಲಿ, ಬಯಲು ಪ್ರದೇಶದಲ್ಲಿ, ಮಳೆ, ಬಿಸಿಲಿನಲ್ಲಿ ನಿಂತು ಪ್ರತಿಭಟನೆ ನಡೆಸುವುದು ತಪ್ಪಲಿದೆ. ಕೆಲವು ಪ್ರತಿಭಟನೆಗಳು ವಾರಗಳು ಅಥವಾ ತಿಂಗಳುಗಳವರೆಗೂ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಿರ್ಮಾಣವಾಗುತ್ತಿರುವ ಛಾವಣಿ, ಹಾಗೂ ಶೌಚಾಲಯ ಸೌಲಭ್ಯಗಳು ಪ್ರತಿಭಟನೆಕಾರರಿಗೆ ದೊಡ್ಡ ಅನುಕೂಲವನ್ನು ಒದಗಿಸಲಿದೆ.

ಈ ಕುರಿತು ಮಾತನಾಡಿದ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಎಂ. ಲೋಕೇಶ್ ಅವರು, “ಈಗಾಗಲೇ ನಾವು ಅಲ್ಲಿ ಬೇಸ್‌ ಮೆಂಟ್‌ನಲ್ಲಿ ಮೂರು-ಹಂತದ ವಾಹನ ನಿಲುಗಡೆ ಸೌಲಭ್ಯದ ನಿರ್ಮಾಣವನ್ನು ಪೂರ್ಣಗೊಳಿಸಿದ್ದೇವೆ. ಆ ಸ್ಥಳದಲ್ಲಿ ಒಂದೇ ಬಾರಿಗೆ ೫೫೦ ಕಾರುಗಳು ಮತ್ತು ೪೫೦ ದ್ವಿಚಕ್ರವಾಹನಗಳನ್ನು ನಿಲ್ಲಿಸಬಹುದು. ಜೊತೆಗೆ ಬೇಸ್‌ಮೆಂಟ್‌ನಲ್ಲಿ ೧೨ ಶೌಚಾಲಯಗಳು ಹಾಗೂ ವಿಶೇಷಚೇನತರಿಗೆ ಒಂದು ಪ್ರತ್ಯೇಕ ಶೌಚಾಲಯವೂ ಒಳಗೊಂಡಂತೆ 31 ಶೌಚಾಲಯಗಳನ್ನು ನೆಲಮಹಡಿಯಲ್ಲಿ ನಿರ್ಮಿಸುತ್ತಿದ್ದೇವೆ. ಛಾವಣಿ ನಿರ್ಮಾಣ ಕಾಮಗಾರಿ ಪ್ರಸ್ತುತ ಜಾರಿಯಲ್ಲಿದ್ದು, ಸೌರವಿದ್ಯುತ್ ಪ್ಯಾನೆಲ್‌ ಗಳನ್ನು ಅಳವಡಿಸಲಾಗುತ್ತದೆ. “ಸೌರ ವಿದ್ಯುತ್ ಪ್ಯಾನೆಲ್‌ಗಳನ್ನು ಅಳವಡಿಸುತ್ತಿರುವ ಕಾರಣದಿಂದಾಗಿ ಈ ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಯೋಚಿಸಬೇಕಾಗಿಲ್ಲ. ಛಾವಣಿ ನಿರ್ಮಾಣ ಕಾರ್ಯ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣವಾಗಲಿದೆ,” ಎಂದು ವಿವರಿಸಿದರು.

ಸೌರ ವಿದ್ಯುತ್ ಪ್ಯಾನೆಲ್‌ ಗಳ ಅಳವಡಿಕೆ ಕೆಲಸ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಇಲ್ಲಿ ಪ್ರತಿಭಟನೆ ನಡೆಸುವವರಿಗೆ ಬಿಬಿಎಂಪಿ ಯಾವುದೇ ರೀತಿಯ ಶುಲ್ಕಗಳನ್ನು ವಿಧಿಸುವುದಿಲ್ಲ. ರಾಜಕೀಯ ಸಮಾರಂಭಗಳೂ ಒಳಗೊಂಡಂತೆ ಈ ಸ್ಥಳದಲ್ಲಿ ಇನ್ನಿತರೆ ಸಮಾರಂಭಗಳನ್ನು ನಡೆಸಲು ಸ್ಥಳಾವಕಾಶ ಒದಗಿಸಲು ಬಿಬಿಎಂಪಿ ಆಲೋಚಿಸುತ್ತಿದೆಯಂತೆ.

೨೦೧೫ರಲ್ಲಿ ಈ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಘೋಷಿಸಲಾಯಿತು. ಬಿಬಿಎಂಪಿ ಈ ಯೋಜನೆಗಾಗಿ ರೂ.೮೦ ಕೋಟಿ ವೆಚ್ಚ ಮಾಡುತ್ತಿದೆ. ಇದನ್ನು ೨೦೧೭ರಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಯೋಜಿಸಲಾಗಿತ್ತು. ಆದರೆ ಹಲವು ನಿರ್ಮಾಣ ಸವಾಲುಗಳಿಂದಾಗಿ ಡೆಡ್‌ ಲೈನ್‌ಗಳೊಂದಿಗೆ ಮುಂದೂಡಲಾಯಿತು. ಅಂದಾಜು ೨.೫೫ ಲಕ್ಷ ಚದರಡಿ ನಿರ್ಮಾಣ ಪ್ರದೇಶ ವ್ಯಾಪ್ತಿಯಿರುವ ಈ ಯೋಜನೆಯ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಕೆಎಂವಿ ಪ್ರಾಜೆಕ್ಟ್ ಪ್ರೈ. ಲಿ.ಗೆ ವಹಿಸಲಾಗಿತ್ತು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words:  Place – Protest – Bangalore- Construction

website developers in mysore