ಪತ್ರಕರ್ತರು ಮತ್ತು ಶ್ರೀಸಾಮಾನ್ಯರ ಫೋನ್ ಕದ್ದಾಲಿಕೆಯಾಗಿದ್ರೆ ಅದನ್ನೂ ತನಿಖೆ ವ್ಯಾಪ್ತಿಗೆ ತನ್ನಿ- ಸಿಎಂಗೆ ಪತ್ರ ಬರೆದು ಆಗ್ರಹಿಸಿದ ಹೆಚ್.ಕೆ ಪಾಟೀಲ್…

ಬೆಂಗಳೂರು,ಆ,21,2019(www.justkannada.in): ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಪತ್ರಕರ್ತರು ಮತ್ತು ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅದನ್ನೂ ಸಹ ತನಿಖೆಯ ವ್ಯಾಪ್ತಿಗೆ ತರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಎಡಿಯೂರಪ್ಪನವರಿಗೆ ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್  ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ  ಮಾಜಿ ಸಚಿವ ಹೆಚ್.ಕೆ ಪಾಟೀಲ್,  ಪತ್ರಕರ್ತರು, ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ, ಅವರ ಖಾಸಗಿತನಕ್ಕೆ ಧಕ್ಕೆಯಾಗಿದ್ದರೆ ಅದಕ್ಕೆ ಗೌರವವಿಲ್ಲವೇ ಎಂದು  ಪ್ರಶ್ನಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಎಲ್ಲಾ ಸತ್ಯಗಳು ಹೊರಬರಬೇಕು. ನೀತಿಗೆಟ್ಟ ಅಕ್ರಮಗಳು, ಲಂಚ ಕೊಡಕೊಳ್ಳುವ ವ್ಯವಹಾರಗಳು, ರಾಜ್ಯದ್ರೋಹದ ಕೆಲಸಗಳು, ಕಾನೂನು ಬಾಹಿರ ಕೆಲಸಗಳು ಈ ಕದ್ದಾಲಿಕೆಯಿಂದ ಲಭ್ಯವಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಬಹಿರಂಗಗೊಂಡ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ಮತ್ತು ಅದರ ಭಾಗಿಯಾದ ಮತ್ತು ಅಂಥ ಅಪರಾಧಿಕ ಪ್ರಕರಣಗಳಿಗೆ ನೆರವು ನೀಡಿದ ವ್ಯಕ್ತಿಗಳ ವಿರುದ್ದ ಕಾನೂನು ಪ್ರಕಾರ ಕ್ರಮಗಳಾಗಬೇಕು.

ರಾಜ್ಯದಲ್ಲಿ ಕದ್ದಾಲಿಕೆ ನಡೆಯಿತೋ ಇಲ್ಲವೋ ಎಂಬುದನ್ನು ತಿಳಿಯಲು ಮಾತ್ರ ಆಸಕ್ತಿಯಲ್ಲ. ಕದ್ದಾಲಿಕೆ ಮಾಡಿದವರ ತಪ್ಪು ಮಾತ್ರ ಎತ್ತಿ ತೋರುವುದು ಸರ್ಕಾರದ ಉದ್ದೇಶವಾಗಬಾರದು. ಕದ್ದಾಲಿಕೆಯಿಂದ ಬಹಿರಂಗಗೊಂಡ ಮಾಹಿತಿಯ ಗಂಭೀರತೆಯ ಆಧಾರದ ಮೇಲೆ ಅದೂ ಸಹ ತನಿಖೆಯ ವ್ಯಾಪ್ತಿಗೆ ಒಳಪಡಬೇಕು.

ದೂರವಾಣಿ ಕದ್ದಾಲಿಕೆಯಂತಹ ಆರೋಪಗಳು ಬಹು ಗಂಭೀರವಾದ ದೂರಗಾಮಿ ಪರಿಣಾಮಗಳನ್ನುಂಟು ಮಾಡುವುದರಿಂದ ಇಂಥ ಆರೋಪಗಳ ಎಲ್ಲ ಆಯಾಮಗಳು ತನಿಖೆಯ ವ್ಯಾಪ್ತಿಗೊಳಪಡಬೇಕು. ವ್ಯಕ್ತಿಯೊಬ್ಬರ ಖಾಸಗಿತನದಲ್ಲಿ ನೇರವಾದ ಮಧ್ಯಪ್ರವೇಶ ಶ್ರೀಸಾಮಾನ್ಯನ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ನೇರವಾದ ಪ್ರಯತ್ನ ಇದಾಗುತ್ತದೆ. ಆದಾಗ್ಯೂ ಇಂತಹ ಕದ್ದಾಲಿಕೆ ನಡೆದಿದ್ದರೆ ಅಂಥ ಸಂದರ್ಭದಲ್ಲಿ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸಂಭವಿಸಿರುವ ಅಪರಾಧ ಪ್ರಕರಣಗಳು ತನಿಖೆಗೆ ಒಳಪಡಬೇಕು. ಸತ್ಯ ಸಾರ್ವಜನಿಕರಿಗೆ ಲಭ್ಯವಾಗಬೇಕು. ತನ್ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುವ ಕ್ರಮಗಳಿಗೆ ಇಂಬು ಕೊಡಬೇಕು ಎಂದು ಹೆಚ್.ಕೆ ಪಾಟೀಲ್ ಆಗ್ರಹಿಸಿದ್ದಾರೆ.

ಅಲ್ಲದೆ ಇಂಥ ತನಿಖೆಗಳು ಕೇವಲ ಸಂಕುಚಿತ ಉದ್ದೇಶವನ್ನಿಟ್ಟುಕೊಂಡು ರಾಜಕೀಯ ಪ್ರತಿಕಾರದ ಕ್ರಮಗಳಾಗಿ ಬಳಕೆಯಾಗಬಾರದು. ಬದಲಿಗೆ ನಿಜವಾಗಿ ನಡೆದಿರುವ ಅಪರಾಧಗಳು ನೀತಿಗೆಟ್ಟ ಕ್ರಮಗಳು ಮುಂತಾದವುಗಳು ತನಿಖೆಯಾಗಿ ಇವುಗಳಲ್ಲಿ ಭಾಗಿಯಾದವರಿಗೆ ಮತ್ತು ಕಾರಣೀಕರ್ತರಾದ ಅಧಿಕಾರಿಗಳಿಗೆ ಸೂಕ್ತವಾದ ಶಿಕ್ಷೆಯಾಗುವಲ್ಲಿ ಗಂಭೀರವಾದ ಪಾತ್ರವಹಿಸಬೇಕು. ಅದಕ್ಕಾಗಿ ಪರಿಣಾಮಕಾರಿಯಾದ ತನಿಖೆಯಾಗುವಂತೆ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಿ ಎಲ್ಲ ಅಂಶಗಳನ್ನು ಒಳಗೊಂಡ ಆದೇಶ ಹೊರಡಿಸಬೇಕೆಂದು ಆಗ್ರಹಿಸುವೆ” ಎಂದು ತಮ್ಮ ಎರಡು ಪುಟದ ಪತ್ರದಲ್ಲಿ ಹೆಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.

Key words: phone tapping- journalists -l public – investigate- HK Patil -letter – CM bs yeddyurappa