ಕಠ್ಮಂಡುವಿನಲ್ಲಿ ಪಾನಿಪೂರಿ ಬ್ಯಾನ್.

ಕಠ್ಮಂಡು, ಜೂನ್ 27, 2022 (www.justkannada.in): ನೇಪಾಳದ ಕಠ್ಮಂಡು ಕಣಿವೆಯ ಲಲಿತ್‌ ಪುರ್ ಮೆಟ್ರೊಪಾಲಿಟನ್ ಸಿಟಿ, 12 ಜನರಲ್ಲಿ ಕಾಲೆರಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಾನಿಪೂರಿ ಮಾರಾಟವನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

ಸುಮಾರು 12 ಕಾಲೇರಾ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ, ಲಲಿತ್ ಪುರ್ ಮೆಟ್ರೊಪಾಲಿಟನ್ ಸಿಟಿ (ಎಲ್‌ಎಂಸಿ) ಶನಿವಾರದಂದು ನಗರದಾದ್ಯಂತ ಪಾನಿಪೂರಿ ಮಾರಾಟವನ್ನು ನಿಷೇಧಿಸಿದೆ. ಪಾನಿಪೂರಿಗೆ ಬಳಸುವ ನೀರಿನಲ್ಲಿ ಕಾಲೇರಾ ಬ್ಯಾಕ್ಟೀರಿಯಾ ಕಂಡು ಬಂದಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪಾನಿಪೂರಿ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲು ನಗರದಲ್ಲಿ ಆಂತರಿಕ ಸಿದ್ಧತೆಗಳು ನಡೆದಿದ್ದು, ಕಣಿವೆಯಲ್ಲಿ ಕಾಲೇರಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂರಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಮುನಿಸಿಪಲ್ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚ್ಚೇತು ಅವರು ಮಾಹಿತಿ ನೀಡಿದ್ದಾರೆ.

ಕಠ್ಮಂಡುವಿನಲ್ಲಿ ಇನ್ನೂ 7 ಕಾಲೇರಾ ಪ್ರಕರಣಗಳ ಗೋಚರಿಸಿದ್ದು, ಕಣಿವೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ೧೨ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ತಿಳಿಸಿದೆ.

ನೇಪಾಳದ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ಹಾಗೂ ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಚುಮನ್‌ಲಾಲ್ ದಶ್ ಅವರ ಪ್ರಕಾರ, ಖಟಂಡು ಮೆಟ್ರೊಪೋಲಿಸ್‌ನಲ್ಲಿ 5 ಕಾಲೆರಾ ಪ್ರಕರಣಗಳು ಗುರುತಿಸಲಾಗಿದ್ದು, ಈ ಪೈಕಿ ಚಂದ್ರಗಿರಿ ಮುನಿಸಿಪಾಲಿಟಿ ಹಾಗೂ ಬುಧನಿಲ್‌ ಕಂತ ಮುನಿಸಿಪಾಲಿಟಿಯಲ್ಲಿ ತಲಾ ಒಂದು ಪ್ರಕರಣಗಳು ಸೇರಿವೆ.

ಎಲ್ಲಾ ಸೋಂಕಿತರಿಗೂ ಸಹ ಟೇಕುವಿನಲ್ಲಿರುವ ಸುಖರಾಜ್ ಟ್ರಾಪಿಕಲ್ ಅಂಡ್ ಇನ್ಫೆಕ್ಷನ್ಸ್ ಡಿಸೆಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ರಾಜಧಾನಿಯ ವಿವಿಧ ಭಾಗಗಳಲ್ಲಿ ಐದು ಕಾಲೆರಾ ಪ್ರಕರಣಗಳು ದಾಖಲಾಗಿದ್ದವು. ಸೋಂಕಿತರ ಪೈಕಿ ಇಬ್ಬರಿಗೆ ಈಗಾಗಲೇ ಚಿಕಿತ್ಸೆ ನೀಡಿ, ಡಿಸ್ಚಾರ್ಜ್ ಸಹ ಮಾಡಲಾಗಿದೆ. ಕಾಲರಾ ಸೂಚನೆಗಳು ಕಂಡು ಬಂದರೆ ಜನರು ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ಹಾಗೂ ಜನಸಂಖ್ಯಾ ಸಚಿವಾಲಯ ಕೋರಿದೆ.

ಭೇದಿ, ಕಾಲರಾ ಹಾಗೂ ಇನ್ನೂ ಇತರೆ ನೀರಿನಿಂದ ಉದ್ಭವಿಸುವ ಖಾಯಿಲೆಗಳು ಬೇಸಿಗೆ ಹಾಗೂ ಮಳೆಗಾಲದಲ್ಲಿ ಹರಡುತ್ತಿರುವುದಾಗಿ ಸಚಿವಾಲಯ ಅಲ್ಲಿನ ಜನರಲ್ಲಿ ಅರಿವು ಮೂಡಿಸುತ್ತಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Panipuri-Ban –nepal- Kathmandu.