ನಮ್ಮ ಜನಸ್ನೇಹಿ ಸರ್ಕಾರ ಕೈಗಾರಿಕೋದ್ಯಮದ ಪುನಶ್ಚೇತನಕ್ಕೆ ಪೂರಕ : ಸಚಿವ ಸಿ.ಪಿ.ಯೋಗೇಶ್ವರ್

ಮೈಸೂರು,ಮಾರ್ಚ್,03,2021(www.justkannada.in) :  ನಮ್ಮದು ಜನಸ್ನೇಹಿ ಸರ್ಕಾರವಾಗಿದ್ದು, ಜನರು ಹಾಗೂ ಕೈಗಾರಿಕೋದ್ಯಮದ ಪುನಶ್ಚೇತನಕ್ಕೆ ಪೂರಕವಾದ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಬುಧವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಸಮ್ಮಿತಿ ಮೇಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್-೧೯ ಹಿನ್ನೆಲೆ ಜಗತ್ತಿನ ಎಲ್ಲಾ ಕೈಗಾರಿಕಾ ಕ್ಷೇತ್ರಗಳು ತಲ್ಲಣಗೊಂಡಿವೆ. ಕೈಗಾರಿಕಾಭಿವೃದ್ದಿಗೆ ಸಾಕಷ್ಟು ಹಿನ್ನಡೆ ಆಗಿದೆ. ಇದರ ಬೆನ್ನಲ್ಲೇ ಕೈಗಾರಿಕಾ ವಲಯದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವಿದ್ದು, ಕೈಗಾರಿಕೋದ್ಯಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇಂತಹ ಸ್ಪಷ್ಟ ಸಂದೇಶ ನೀಡುವ ಸಲುವಾಗಿಯೇ ಸಮ್ಮತಿ ಮೇಳದ ಮೂಲಕ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ೬ ಲಕ್ಷ ಸಣ್ಣ ಕೈಗಾರಿಕೆಗಳಿದ್ದರೂ ಸಹ ಈವರೆಗೂ ಒಂದು ಲಕ್ಷ ಸಣ್ಣ ಕೈಗಾರಿಕೆಗಳು ನೋಂದಣಿ ಮಾಡಿಸಿ ಸಮ್ಮತಿ ಪತ್ರ ಪಡೆದುಕೊಂಡಿವೆ. ಈಗಾಗಲೇ, ಹಸಿರು ನ್ಯಾಯ ಪೀಠವು ಇಲಾಖೆಯನ್ನು ಈ ವಿಚಾರವಾಗಿ ಪ್ರಶ್ನಿಸಿದೆ. ಹೀಗಾಗಿ, ಕಡ್ಡಾಯವಾಗಿ ಸಣ್ಣ ಕೈಗಾರಿಕೆಗಳು ನೋಂದಣಿ ಮಾಡಿಸಿ, ಸಮ್ಮತಿ ಪತ್ರ ಪಡೆದು ವ್ಯವಸ್ಥಿವಾಗಿ ನೆಲ, ಜಲ, ವಾಯು ಹಾಗೂ ಶಬ್ದ ಮಾಲಿನ್ಯವನ್ನೂ ನಿಯಂತ್ರಿಸಬೇಕು ಎಂದು ಆದೇಶಿಸಿದರು.

ಸಣ್ಣ ಕೈಗಾರಿಕೆಗಳನ್ನು ಪರಿಸರ ವಿಜ್ಞಾನ ಇಲಾಖೆ ವ್ಯಾಪ್ತಿಯಡಿ ನೋಂದಣಿ ಮಾಡಿ ಸಮ್ಮತಿ ಪತ್ರ ನೀಡಿ ಕಾನೂನು ಕಟ್ಟಳೆಗಳು ಅರಿವು ಮೂಡಿಸಬೇಕಾಗಿದೆ. ಹಾಗಾಗಿ, ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಾನು ಆದೇಶಿಸಿದ್ದೇನೆ ಎಂದರು.

ಕೈಗಾರಿಕೆಗಳ ನೋಂದಣಿ ಶುಲ್ಕದ ಏರಿಕೆ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಬಂದಿವೆ. ಕೈಗಾರಿಕೆಗಳ ಬಂಡವಾಳ ಹೂಡಿಕೆ ಮೇಲೆ ಶೇ.೦.೨ ರಷ್ಟು ಶುಲ್ಕ ವಿಧಿಸಿರುವುದು ನ್ಯಾಯಸಮ್ಮತವಲ್ಲವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾನು ಅಧಿಕಾರಿಗಳ ಜೊತೆ ಚರ್ಚಿಸಿ ಪರಿಷ್ಕರಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ವಿವರಿಸಿದರು.

ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ ಗುಣಾತ್ಮಕ ಉತ್ಪಾದನೆಗೆ ಮುಂದಾಗುವ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶ ನಮಗೂ ಇದೆ. ಕೈಗಾರಿಕೋದ್ಯಮಿಗಳ ಮೇಲೆ ಅನಗತ್ಯ ಶುಲ್ಕ ವಿಧಿಸಿ ಭಯಪಡಿಸುವುದಿಲ್ಲ. ಈಗಿರುವ ಶುಲ್ಕವನ್ನೇ ಮಾರ್ಚ್ ೩೧ ರವರೆಗೆ ಮುಂದುವರೆಸಿ, ಸಮ್ಮತಿ ಮೇಳದ ಕಾಲಾವಧಿಯನ್ನೂ ಮಾರ್ಚ್ ಅಂತ್ಯದವರೆಗೆ ವಿಸ್ತರಿಸುತ್ತೇನೆ.

ಹೊಸ ಶುಲ್ಕ ವಿಧಿಸುವಾಗಲೂ ಅದು ಹೊರೆಯಾಗದಂತೆ ನೋಡಿಕೊಳ್ಳುತ್ತೇನೆ. ನಾನೂ ಕೂಡ ಕಾರ್ಖಾನೆಗಳನ್ನು ನಡೆಸುತ್ತಿರುವ ಕಾರಣ ಕೈಗಾರಿಕೆಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಪೂರ್ಣ ಅರಿವಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಅವರು ಮಾತನಾಡಿ, ಪ್ರಸ್ತುತದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ರೈತಾಪಿ ವರ್ಗದ ಜೊತೆ ಕೈಗಾರಿಕೆಗಳೂ ದೇಶದ ಬೆನ್ನೆಲುಬಾಗಿ ನಿಲ್ಲಬೇಕು. ಇದರಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಹೆಚ್ಚಾಗಿರುತ್ತದೆ ಎಂದರು.

ಮೂರು ತಿಂಗಳ ಹಿಂದೆಯಷ್ಟೆ ಆರಂಭವಾದ ಸಮ್ಮತಿ ಮೇಳದ ಆಶ್ರಯದಲ್ಲಿ ೨ ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಪತ್ರ ಕೊಡಲಾಗಿದೆ. ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಪತ್ರ ದೊರಕುತ್ತಿರುವುದು ಇದೇ ಮೊದಲು. ಸಣ್ಷ ಕೈಗಾರಿಕೆಗಳು ಕಡ್ಡಾಯವಾಗಿ ಸಮ್ಮತಿ ಪತ್ರ ಪಡೆಯುವ ಮೂಲಕ ಕಾನೂನು ಚೌಕಟ್ಟಿಗೆ ಒಳಪಡಬೇಕು ಎಂದು ಹೇಳಿದರು.

ಪರಿಸರ ಮಾಲಿನ್ಯ ಮಂಡಳಿಯ ಮಾರ್ಗಸೂಚಿ ಅನುಸರಿಸುವ ಮುಖೇನ ಸಣ್ಣ ಕೈಗಾರಿಕೆಗಳು ನಮ್ಮ ಪರಿಸರ ಸಂರಕ್ಷಣೆಗೂ ಮುಂದಾಗಬೇಕಾಗುತ್ತದೆ. ಈಗಾಗಲೇ ಸರ್ಕಾರ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ಕೊಟ್ಟಿದೆ. ಹಾಗಿದ್ದರೂ, ಇಲಾಖೆಯಿಂದ ಸಮ್ಮತಿ ಪತ್ರ ಪಡೆಯಲು ಸಣ್ಣ ಕೈಗಾರಿಕೆಗಳು ಮುಂದೆ ಬಾರದಿದ್ದರೆ ಅಂತಹ ಕೈಗಾರಿಕೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

Our,People,Government,Supplement,Revival,Industrial,Industry,Minister,C.P.Yogeshwar

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ಅವರು ಮಾತನಾಡಿ, ಕೋವಿಡ್-೧೯ ಕಾರಣದಿಂದ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಇತ್ತೀಚಿಗಷ್ಟೆ ಚೇತರಿಕೆ ಕಾಣುತ್ತಿರುವ ಕೈಗಾರಿಕೆಗಳ ಸಮ್ಮಿತಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನೆರೆದಿದ್ದ ಕೈಗಾರಿಕೋದ್ಯಮಿಗಳಿಗೆ ಸಮ್ಮತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕಾಸಿಯಾ ಪರಿಸರ ಮತ್ತು ಪರಿಸರ ವಿಜ್ಞಾನ ಪ್ಯಾನಲ್ ಅಧ್ಯಕ್ಷರಾದ ಹೆಚ್.ಕೆ.ಮಲ್ಲೇಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

key words : Our-People-Government-Supplement-Revival-Industrial-Industry-Minister-C.P.Yogeshwar