ಲಂಬ ಹಸಿರು ಉದ್ಯಾನವನಗಳಾಗಿ ಪರಿವರ್ತನೆಗೊಳ್ಳಲಿವೆ ನಮ್ಮ ಮೆಟ್ರೊ ಪಿಲ್ಲರ್‌ ಗಳು.

kannada t-shirts

ಬೆಂಗಳೂರು, ಸೆಪ್ಟೆಂಬರ್ 17, 2022 (www.justkannada.in): ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಶೀಘ್ರದಲ್ಲೇ ನಮ್ಮ ಮೆಟ್ರೊ ಪಿಲ್ಲರ್‌ ಗಳು ಲಂಬ ಉದ್ಯಾನವನಗಳಾಗಿ ಪರಿವರ್ತನೆಗೊಳ್ಳಲಿವೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಿಬಿಎಂಪಿಗೆ ೨೦೨೧-೨೦೨೨ನೇ ಸಾಲಿಗೆ ೧೫ನೇ ಹಣಕಾಸು ಆಯೋಗದ ವಾಯು ಗುಣಮಟ್ಟ ಸುಧಾರಣೆ ನಿಧಿಯ ಭಾಗವಾಗಿ ರೂ.೧೪೦ ಕೋಟಿ ಬಿಡುಗಡೆ ಮಾಡಿತು.

ಇದಾದ ನಂತರ, ಬಿಬಿಎಂಪಿ ಮೆಟ್ರೊ ಪಿಲ್ಲರ್‌ ಗಳು, ಬಿಬಿಎಂಪಿ ಮೇಲ್ಸೇತುವೆ ಪಿಲ್ಲರ್‌ ಗಳು ಹಾಗೂ ಟಿಟಿಎಂಸಿ ಮತ್ತು ಬಿಎಂಟಿಸಿ ಬಸ್ ಡಿಪೋಗಳನ್ನು ಲಂಬ ಉದ್ಯಾನವನಗಳನ್ನಾಗಿ ನಿರ್ಮಾಣ ಮಾಡಲು ರೂ. ೫ ಕೋಟಿ ವೆಚ್ಚ ಮಾಡಲಿದ್ದು, ಇದಕ್ಕಾಗಿ ಮಾಸ್ಟರ್-ಲೆವೆಲ್ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.

ಈ ಸಂಬಂಧ ಮಾತನಾಡಿದ ಬಿಎಂಆರ್‌ ಸಿಎಲ್‌ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, “ಪ್ರಸ್ತಾವನೆಗಳು ಹಾಗೂ ಕಾರ್ಯಸಾಧ್ಯತೆಗಳನ್ನು ಆಧರಿಸಿ, ನಾವು ಈ ಯೋಜನೆಯನ್ನು ಇತರೆ ಭಾಗೀದಾರರೊಂದಿಗೆ ಸೇರಿ ಅನುಷ್ಠಾನಗೊಳಿಸಲಿದ್ದೇವೆ,” ಎಂದು ತಿಳಿಸಿದರು.

ಈ ಲಂಬ ಉದ್ಯಾನವನಗಳು (ವರ್ಟಿಕಲ್ ಗಾರ್ಡನ್‌ ಗಳು) ನಗರದ ಸೌಂದರ್ಯವನ್ನು ಹೆಚ್ಚಿಸಲಿವೆ. ನಗರದಾದ್ಯಂತ ಮೆಟ್ರೊ ನಿರ್ಮಣ ಕೆಲಸಗಳು ಹೆಚ್ಚಾಗುತ್ತಿದ್ದು, ಮೆಟ್ರೊ ಪಿಲ್ಲರ್‌ ಗಳು ನಗರದ ಸೌಂದರ್ಯವನ್ನು ಹದಗೆಡಿಸಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು.

“ಈ ಲಂಬ ಹಸಿರು ಉದ್ಯಾನವನಗಳು ನಗರದ ನೋಟವನ್ನು ಸುಧಾರಿಸಲಿದೆ ಎಂದು ನನ್ನ ಅಭಿಪ್ರಾಯ. ನಗರದಲ್ಲಿ ಅನೇಕ ಕಟ್ಟಡಗಳು, ವಸತಿ ಯೋಜನೆಗಳು ಹಾಗೂ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ನಮ್ಮ ಬೆಂಗಳೂರು ಈಗಾಗಲೇ ಸಾಕಷ್ಟು ಹಸಿರನ್ನು ಕಳೆದುಕೊಂಡಿದೆ. ಹಾಗಾಗಿ, ಮೆಟ್ರೊ ಪಿಲ್ಲರ್‌ ಗಳಿಗೆ ಹಸಿರು ಹೊದಿಕೆಯನ್ನು ಹೊದಿಸಿದರೆ, ನಗರದ ಸೌಂದರ್ಯ ಹೆಚ್ಚುತ್ತದೆ,” ಎಂದು ಜೆಪಿ ನಗರದ ನಿವಾಸಿ ರಕ್ಷಿತಾ ಕುಮಾರ್ ಅಭಿಪ್ರಾಯಪಟ್ಟರು.

೨೦೧೭ರಲ್ಲಿ ಎಂ. ಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿರುವ ಮೆಟ್ರೊ ಪಿಲ್ಲರ್‌ ಗಳಿಗೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್ಪ್ರೆಸ್‌ ವೇ ಅಡಿ ಇದೇ ರೀತಿ ಲಂಬ ಉದ್ಯಾನವನ್ನು ನಿರ್ಮಾಣ ಮಾಡಲಾಗಿತ್ತು.

ಸರಿಯಾಗಿ ನಿರ್ವಹಿಸಿದರೆ ಉಳಿದುಕೊಳ್ಳಬಹುದು

ಈ ಕುರಿತು ಮಾತನಾಡಿರುವ ಕೆಲವು ಪರಿಸರ ತಜ್ಞರು ಈ ಲಂಬ ಉದ್ಯಾನವನಗಳು, ಕತ್ತರಿಸುತ್ತಿರುವ ಮರಗಳು ಹಾಗೂ ಕಣ್ಮರೆಯಾಗಿರುವ ಹಸಿರಿಗೆ ಪರ್ಯಾಯವಲ್ಲ. ಆದರೆ ಸ್ವಲ್ಪ ಮಟ್ಟಿಗೆ ನೆರವಾಗಬಹುದು ಅಷ್ಟೇ ಅಂದಿದ್ದಾರೆ. “ಇದು ಕೇವಲ ಉಸಿರಾಟದ ಕಣಗಳನ್ನು ಸೆರೆಹಿಡಿಯುವಲ್ಲಿ ನೆರವಾಗಬಹುದು. ಆದರೆ ಈ ಲಂಬ ಉದ್ಯಾನವನಗಳಲ್ಲಿರುವ ಎಲೆ ವ್ಯಾಪ್ತಿ ಪ್ರಮಾಣ ಬಹಳ ಕಡಿಮೆ ಇರುತ್ತದೆ, ಹಾಗೂ ಅವುಗಳನ್ನು ಸರಿಯಾಗಿ ನಿರ್ವಹಿಸಬೇಕಾಗುತ್ತದೆ. ಕ್ರಮಬದ್ಧವಾಗಿ ನಿರ್ವಹಿಸಿದರೆ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು,” ಎಂದು ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ವಿವರಿಸಿದರು.

ಇತರೆ ಯೋಜನೆಗಳು

ಲಂಬ ಉದ್ಯಾನವನಗಳಲ್ಲದೆ, ನಗರದಲ್ಲಿ ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ವಿವಿಧ ಏಜೆನ್ಸಿಗಳು ಹಲವು ಹೊಸ ಉಪಕ್ರಮಗಳನ್ನು ಪರಿಚಯಿಸುತ್ತಿವೆ.

ಬಿಎಂಟಿಸಿಯು ಇ-ಬಸ್ಸುಗಳಿಗೆ ಅನುಮತಿ ನೀಡಿದೆ ಹಾಗೂ ಐದು ಹೊಸ ಡಬ್ಬಲ್-ಡೆಕ್ಕರ್ ವಿದ್ಯುತ್ ಬಸ್‌ ಗಳನ್ನು ಖರೀದಿಸುತ್ತಿದೆ. ಜೊತೆಗೆ ೧೦೦ ಹೊಸ ಮೆಟ್ರೊ ಫೀಡರ್ ಇವಿ ಬಸ್ಸುಗಳನ್ನು ಖರೀದಿಸುತ್ತಿದೆ. ಅದೇ ರೀತಿ, ಬಿಬಿಎಂಪಿಯು ಸಹ ಪಾದಚಾರಿ ಸೌಲಭ್ಯಗಳು ಹಾಗೂ ಉದ್ಯಾನವನಗಳು ಹಾಗೂ ಹಸಿರು ಸ್ಥಳಗಳ ನಿರ್ಮಾಣಕ್ಕೆ ಅನುದಾನ ನೀಡಿದೆ. ಜೊತೆಗೆ ಬೈಸಿಕಲ್ ಪಥಗಳಂತಹ ಮೋಟಾರೇತರ ಮೂಲಸೌಕರ್ಯ ಅಭಿವೃದ್ಧಿಯ ಕಡೆಗೂ ಗಮನ ನೀಡುತ್ತಿದೆ.

ಈ ಮಾಸ್ಟರ್-ಲೆವೆಲ್ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು, ಬಿಎಂಟಿಸಿ, ಸಂಚಾರಿ ಪೋಲಿಸ್, ಬಿಡಬ್ಲ್ಯುಎಸ್‌ಎಸ್‌ಬಿ, ಕೆಎಸ್‌ ಪಿಸಿಬಿ, ಬೆಸ್ಕಾಂ ಹಾಗೂ ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳು ಯೋಜನೆ ರೂಪಿಸುವಿಕೆಯಲ್ಲಿ ಕೈಜೋಡಿಸಿವೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Our metro –pillars- will be- converted-vertical -green parks.

website developers in mysore