ಖಾಸಗೀಕರಣಕ್ಕೆ ವಿರೋಧ:  ಕೇಂದ್ರ ಸರ್ಕಾರದ ವಿರುದ್ದ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಸಿಬ್ಬಂದಿಗಳಿಂದ ಪ್ರತಿಭಟನೆ…

ಮೈಸೂರು,ಅ,21,2019(www.justkannada.in): ಕೇಂದ್ರ ಸರ್ಕಾರ ನಿರ್ಧರಿಸಿರುವ ಸರ್ಕಾರಿ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹೊಸ ನೀತಿಯನ್ನ ಖಂಡಿಸಿ  ಸರ್ಕಾರಿ ಸ್ವಾಮ್ಯದ ಕಾರ್ಖಾನೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನ ನೌಕರರು ಕೇಂದ್ರ ಸರ್ಕಾರದ ವಿರುದ್ದ  ಪ್ರತಿಭಟನೆ ನಡೆಸಿದರು. ತಮ್ಮ ಕೂಗು ಕೇಂದ್ರಕ್ಕೆ ಮುಟ್ಟುವ ತನಕ ವಿವಿಧ ರೀತಿಯ ಚಳುವಳಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಖಾಸಗಿಯವರಿಗೆ ಈ ಉದ್ಯಮದ ಶೇ.26ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೀಗ ಸರ್ಕಾರದ ಬಳಿ ಇರುವ ಎಲ್ಲ ಶೇ.54ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಮುಂದಾಗಿದೆ. ಇಡೀ ಸಂಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆಸಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವಾಲಯದ ಅಧೀನದ ಬಿಇಎಂಎಲ್ ಮೈಸೂರು ಸೇರಿ ಬೆಂಗಳೂರು, ಕೆಜಿಎಫ್, ಪಾಲಕ್ಕಾಡ್ ‌ನಲ್ಲಿ ಉತ್ಪಾದನಾ ಘಟಕ ಹೊಂದಿದೆ. 4 ಪ್ರಾದೇಶಿಕ, 20 ಸೇವಾ ಕಚೇರಿ ಹೊಂದಿರುವ ಬೃಹತ್ ಸಂಸ್ಥೆಯಾಗಿದ್ದು, ಇಲ್ಲಿ ರೈಲು, ಮೆಟ್ರೋ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಟ್ರಕ್ಕುಗಳು, ಸರ್ವೋತ್ತರ ಬ್ರಿಡ್ಜ್, ಮಿಸೈಲ್, ಮಿಸೈಲ್ ಲಾಂಚರ್, ಬುಲ್ಡೋಜರ್, ಯುದ್ಧಕ್ಕೆ ಸಂಬಂಧಿಸಿದ ವಾಹನಗಳನ್ನು ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆಯಾಗಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ. ಇದು ಏಷ್ಯಾದಲ್ಲೇ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದ್ದು, ವಾರ್ಷಿಕವಾಗಿ ಸುಮಾರು 3,500 ಕೋಟಿ ರೂ.ಗಿಂತಲೂ ಮಿಗಿಲಾದ ವಹಿವಾಟು ಇಲ್ಲಿ ನಡೆಯುತ್ತಿದೆ. ಅಲ್ಲದೇ 1964ರಿಂದಲೂ ಇದೂ ಲಾಭದಲ್ಲಿಯೇ ಸಾಗುತ್ತಾ ಬಂದಿದೆ. ಆಗಿದ್ದರೂ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಇದನ್ನು ಕೇಂದ್ರ ಸರ್ಕಾರ ನಿಲ್ಲಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Key words: Opposition – privatization-Protests – factory staff –against- central government …