ಮುಚ್ಚಿರುವ ಇ ಶೌಚಾಲಯ ತೆರೆದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸುವಂತೆ ಆಗ್ರಹ: ಮೈಸೂರಿನಲ್ಲಿ ವಿನೂತನ ಪ್ರತಿಭಟನೆ…

ಮೈಸೂರು,ಜು,1,2019(www.justkannada.in): ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಬಾಗಿಲು ಮುಚ್ಚಿರುವ ಇ ಶೌಚಾಲಯವನ್ನು ತೆರೆದು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವಂತೆ ಆಗ್ರಹಿಸಿ ಮೈಸೂರು ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.

ಡಿ.ದೇವರಾಜ ಅರಸು ರಸ್ತೆಯಲ್ಲಿ ಮುಚ್ಚಿರುವ ಇ ಶೌಚಾಲಯ ತೆರೆಯುವಂತೆ ತಂಬಿಗೆ ಹಿಡಿದು ಪ್ರತಿಭಟನಾಕಾರರು ವಿನೂತನವಾಗಿ ಅಣುಕು ಪ್ರದರ್ಶನ ನಡೆಸಿದರು.  ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಇ-ಶೌಚಾಲಯಗಳು ನಿರ್ವಹಣೆಯಿಲ್ಲದೇ ಬಾಗಿಲು ಮುಚ್ಚಿ ಹಲವು ತಿಂಗಳುಗಳಾಗಿವೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಪಾಲಿಕೆಯ ಸ್ವಚ್ಛ ಭಾರತ ಕಾರ್ಯಕ್ರಮವು ಕೇವಲ ಪ್ರಶಸ್ತಿಯ ಲಾಲಸೆಗೆ ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಸೀಮಿತವಾಗಿದೆ. ನಗರದ ಹೃದಯ ಭಾಗದಲ್ಲಿನ ವಾಣಿಜ್ಯೋದ್ಯಮದ ಪ್ರಮುಖ ರಸ್ತೆಯಲ್ಲಿಯೇ ಇ-ಶೌಚಾಲಯವು ಶೋಚನೀಯ ಸ್ಥಿತಿಯಲ್ಲಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಹಾಗೆಯೇ ಇದರಿಂದ ದಿನನಿತ್ಯ ಮಹಿಳೆಯರು, ಸಕ್ಕರೆ ಕಾಯಿಲೆಯವರು ಶೌಚಾಲಯದ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರುಷರು ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ದೇವರಾಜ ಮೊಹಲ್ಲಾ ನಿವಾಸಿಗಳಿಗೂ ಕಿರಿಕಿರಿಯಾಗುತ್ತಿದ್ದು, ಪಾಲಿಕೆಯ ಅಧಿಕಾರಿಗಳು  ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಿ ಬಾಗಿಲು ತೆರೆಯುವಂತೆ ಧರಣಿನಿರತರು ಆಗ್ರಹಿಸಿದರು.

Key  words: open – e-toilet -for -public –use-protest -mysore.