ಕರ್ನಾಟಕದಲ್ಲಿ ಎನ್‌ ಇಪಿ ಅನುಷ್ಠಾನಕ್ಕೆ ಒಂದು ವರ್ಷ: ಈವರೆಗೆ ಯಾವುದೇ ವಿದ್ಯಾರ್ಥಿ  ಕೋರ್ಸ್ ನಿಂದ ಹೋರ ಹೋಗಿಲ್ಲ.

ಬೆಂಗಳೂರು, ನವೆಂಬರ್ 18, 2022 (www.justkannada.in): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ವಿವಿಧ ಮುಖ್ಯಾಂಶಗಳ ಪೈಕಿ ಒಂದು ಮುಖ್ಯಾಂಶವೇನೆಂದರೆ ವಿದ್ಯಾರ್ಥಿಗಳು ಅವರು ಕಲಿಯುತ್ತಿರುವ ಕೋರ್ಸ್ ನಿಂದ ವಿವಿಧ ಹಂತಗಳಲ್ಲಿ ಸ್ವಯಂಪ್ರೇರಿತವಾಗಿ ಹೋರಗುಳಿಯಬಹುದು.

ಸಂಬಂಧಪಟ್ಟ ಪ್ರಾಧಿಕಾರಗಳ ಪ್ರಕಾರ, ಕರ್ನಾಟಕದಲ್ಲಿ ಎನ್‌ ಇಪಿ ಬ್ಯಾಚ್‌ ನ ಒಬ್ಬ ಪದವಿ ವಿದ್ಯಾರ್ಥಿಯೂ ಸಹ ಅವರು ಕಲಿಯುತ್ತಿರುವ ಕೋರ್ಸ್ ನಿಂದ  ಒಂದು ವರ್ಷದ ನಂತರ ಹೊರಗುಳಿಯುವ ಆಯ್ಕೆ ಪಡೆದುಕೊಂಡಿಲ್ಲ.

ಕರ್ನಾಟಕ ಇಡೀ ದೇಶಕ್ಕೆ ಉನ್ನತ ಶಿಕ್ಷಣದಲ್ಲಿ ಎನ್‌ ಇಪಿ ಅನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಿದ ರಾಜ್ಯವಾಗಿ ಗುರುತಿಸಿಕೊಂಡಿದೆ. ೨೦೨೧-೨೨ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ಪದವಿ ಕೋರ್ಸುಗಳಿಗೆ ಒಟ್ಟು ೪.೪೬ ಲಕ್ಷ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಇವರೆಲ್ಲರೂ ಸಹ ಈಗ ಎರಡನೇ ವರ್ಷದ ಪದವಿಯಲ್ಲಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ  ಶಿಕ್ಷಣ ಪರಿಷತ್ತಿನ (ಕೆಎಸ್‌ಹೆಚ್‌ಇಸಿ) ಉಪಧ್ಯಕ್ಷ ಬಿ. ತಿಮ್ಮೇಗೌಡ ಅವರು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಂದ ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ ಮೊದಲ ವರ್ಷದ ನಂತರ ಯಾವುದೇ ವಿದ್ಯಾರ್ಥಿ ಕೋರ್ಸ್ ನಿಂದ ಹೊರ ಹೋಗುವ ಆಯ್ಕೆ ಪಡೆದುಕೊಂಡಿಲ್ಲ.

ಆದರೆ, ಕೆಎಸ್‌ ಹೆಚ್‌ ಇಸಿಯು ಪದವಿಯ ಮೊದಲನೇ ವರ್ಷ ಅಥವಾ ಎರಡನೇ ವರ್ಷದ ನಂತರ ಯಾವುದಾದರೂ ವಿದ್ಯಾರ್ಥಿ ಹೊರಗುಳಿಯಲು ಬಯಸುವ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಕೌಶಲ್ಯ ತರಬೇತಿಯನ್ನು ಒದಗಿಸುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. ಈ ಸಂಬಂಧ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಿಮ್ಮೇಗೌಡ ಅವರು, “ವಿಶ್ವವಿದ್ಯಾಲಯಗಳು ಈ ರೀತಿ ತಾವು ಕೋರ್ಸ್ ನಿಂದ ಮೊದಲ ಅಥವಾ ಎರಡನೇ ವರ್ಷದ ನಂತರ ಹೊರ ಹೋಗಲು ಬಯಸುವಂತಹ ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ತಿಂಗಳ ಅವಧಿಯ ಕೌಶಲ್ಯ ಆಧಾರಿತ ತರಬೇತಿಯನ್ನು ಒದಗಿಸಬೇಕು,” ಎಂದು ತಿಳಿಸಿದರು.

ಹೊಸ ಎನ್‌ ಇಪಿ ಪ್ರಕಾರ, ಪದವಿಯ ಮೊದಲನೇ ವರ್ಷದ ನಂತರ ಹೊರ ಹೋಗುವ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗೆ ಪ್ರಮಾಣಪತ್ರ ಲಭಿಸುತ್ತದೆ. “ಆದರೆ ಕೋರ್ಸ್ ನ ಮೊದಲ ವರ್ಷದ ನಂತರವೇ ಪ್ರಮಾಣಪತ್ರವನ್ನು ವಿತರಿಸುವುದು ಕಷ್ಟವಾಗುತ್ತದೆ. ಹಾಗಾಗಿ, ನಾವು ಯುಜಿಸಿ ನಿರ್ದೇಶನಗಳ ಪ್ರಕಾರ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಡಿ ತರಲು ನಿರ್ಧರಿಸಿದ್ದೇವೆ. ಇಂತಹ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿಗಾದರೂ ಕೌಶಲ್ಯ ಅಭಿವೃದ್ಧಿ ತರಬೇತಿ ದೊರೆತರೆ ಪ್ರಮಾಣಪತ್ರವನ್ನು ನೀಡುವುದು ಸುಲಭವಾಗುತ್ತದೆ,” ಎಂದು ತಿಮ್ಮೇಗೌಡ ಅವರು ವಿವರಿಸಿದರು.

ಎನ್‌ ಇಪಿಯು ವಿದ್ಯಾರ್ಥಿಗಳಿಗೆ ಪದವಿ ಕಲಿಯುವ ಸಮಯದಲ್ಲಿ ವಿವಿಧ ಹಂತಗಳಲ್ಲಿ ಹೊರ ಹೋಗುವ ಆಯ್ಕೆಗಳನ್ನು ಒದಗಿಸುತ್ತದೆ. ಈ ಮೂಲಕ ಅವರಿಗೆ ಸ್ವಲ್ಪ ಸಮಯದ ಬಿಡುವಿನ ನಂತರ ಪುನಃ ಕೋರ್ಸ್ ಗೆ  ಸೇರುವ ಆಯ್ಕೆಯನ್ನು ಒದಗಿಸಿದೆ.

ಈ ರೀತಿ ಮೊದಲ ವರ್ಷದ ಪದವಿ ನಂತರ ಹೊರ ಹೋಗುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಎರಡು ವರ್ಷಗಳ ನಂತರ ಹೊರ ಹೋಗುವ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣಪತ್ರ ಹಾಗೂ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಹಾಗೂ ನಾಲ್ಕು ವರ್ಷಗಳನ್ನು ಪೂರೈಸುವ ವಿದ್ಯಾರ್ಥಿಗಳಿಗೆ ‘ಪದವಿಯೊಂದಿಗೆ ಸಂಶೋಧನೆ’ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: One year – implementation – NEP – Karnataka-No student – dropped