ನಟ ಪುನೀತ್ ಇಹಲೋಕ ತ್ಯಜಿಸಿ ಒಂದು ವರ್ಷ: ಆದರೆ ಜನರ ಮೇಲೆ ಈಗಲೂ ಮುಂದುವರೆದಿದೆ ಅಪ್ಪು ಪ್ರಭಾವ..

ಬೆಂಗಳೂರು, ಅಕ್ಟೋಬರ್ 29, 2022 (www.justkannada.in): ಪುನೀತ್ ರಾಜ್‌ ಕುಮಾರ್ ಅವರ ಕಣ್ಣುಗಳ ದಾನದ ನಂತರ ಬೆಂಗಳೂರಿನಲ್ಲಿ ಕಣ್ಣಿನ ವೈದ್ಯರ ಪ್ರಕಾರ ಕಣ್ಣುಗಳನ್ನು ದಾನ ಮಾಡುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.

ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿರುವ ಡಾ. ಭುಜಂಗಶೆಟ್ಟಿ ಅವರು, “೧೯೯೪-೨೦೨೧ರ ನಡುವೆ ನಮ್ಮಲ್ಲಿ ೬೫,೦೦೦ ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡಿದ್ದರು. ಆದರೆ ಅಪ್ಪು ನಿಧನದ ನಂತರ ಕೇವಲ ಒಂದು ವರ್ಷದಲ್ಲಿ ೮೫,೦೦೦ ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ೨,೦೦೦ ಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ನಿಯಾಗಳನ್ನು ಸಂಗ್ರಹಿಸಿದ್ದೇವೆ. ಇದು ಅಪ್ಪು ಪರಿಣಾಮ,” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಜೀವನಸಾರ್ಥಕತೆ ಎಂಬ ವೆಬ್‌ ಸೈಟ್‌ ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ೨೦೦೭ರಿಂದ ಈವರೆಗೆ ರಾಜ್ಯದಲ್ಲಿ ೧,೧೦೮ ಕಾರ್ನಿಯಾಗಳನ್ನು ದಾನ ಪಡೆಯಲಾಗಿದೆ. ೨೦೨೦ (ಕೋವಿಡ್ ವರ್ಷದಲ್ಲಿ) ರಲ್ಲಿ ಇದರ ಪ್ರಮಾಣ ಬಹಳ ಕಡಿಮೆ ಇತ್ತು, ಅಂದರೆ ಕೇವಲ ೫೨ ಕಾರ್ನಿಯಾಗಳ ದಾನ ಮಾತ್ರ ಪಡೆಯಲಾಗಿತ್ತು. ೨೦೨೧ರಲ್ಲಿ ಇದರ ಸಂಖ್ಯೆ ಸ್ವಲ್ಪ ಏರಿಕೆ, ಅಂದರೆ ೬೬ಕ್ಕೆ ಏರಿತು. ಆದರೆ ಪುನೀತ್ ಅವರ ನಿಧನದ ನಂತರ ೨೦೨೨ರಲ್ಲಿ ಈವರೆಗೆ ೧೭೬ಕ್ಕೆ ಏರಿಕೆಯಾಗಿದೆ.

ವೈದ್ಯರು ತಿಳಿಸಿದಂತೆ ಕಣ್ಣುಗಳ ದಾನ ಬಹಳ ಮುಖ್ಯ. ಏಕೆಂದರೆ ಒಂದು ಕಣ್ಣು ಅನೇಕರಿಗೆ ದೃಷ್ಟಿ ದಾನ ನೀಡುತ್ತದೆ. ಉದಾಹರಣೆಗೆ ಪುನೀತ್ ಅವರ ಎರಡೂ ಕಣ್ಣುಗಳಿಂದ ನಾಲ್ಕು ಜನರಿಗೆ ದೃಷ್ಟ ಬಂದಿದೆ. ಪುನೀತ್ ಅವರ ಒಂದೊಂದು ಕಣ್ಣನ್ನು, ಕಾರ್ನಿಯಾದ ಮೇಲ್ಪಟ್ಟ ಹಾಗೂ ಒಳಗಿನ ಪದರಗಳನ್ನು ಪ್ರತ್ಯೇಕಿಸಿ ತಲಾ ಇಬ್ಬರಿಗೆ ಅಳವಡಿಸಿ ದೃಷ್ಟಿ ಒದಗಿಸಲಾಗಿದೆ. ಮೇಲ್ಮಟ್ಟದ ಪದರವನ್ನು ಸೂಪರ್‌ಫಿಷಿಯಲ್ ಕಾರ್ನಿಯಲ್ ಸಮಸ್ಯೆ ಇದ್ದಂತಹ ಇಬ್ಬರಿಗೆ ಅಳವಡಿಸಿದರೆ, ಒಳಗಿನ ಪದರವನ್ನು ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಪದರ ಸಮಸ್ಯೆ ಇದ್ದಂತಹ ಇಬ್ಬರು ವ್ಯಕ್ತಿಗಳಿಗೆ ಅಳವಡಿಸಲಾಯಿತು.

ಈ ಹಿಂದೆ ಪುನೀತ್ ಅವರ ತಂದೆ, ದಿವಂಗತ ಡಾ. ರಾಜ್‌ ಕುಮಾರ್ ಅವರೂ ಸಹ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ನಂತರ ಪುನೀತ್ ಅವರ ತಾಯ ಪಾರ್ವತಮ್ಮ ಅವರೂ ಸಹ ೨೦೧೭ರಲ್ಲಿ ತಮ್ಮ ನಿಧನದ ನಂತರ ಕಣ್ಣುಗಳನ್ನು ದಾನ ನೀಡಿದರು. ಫೆಬ್ರವರಿ ೨೦೨೦ರಿಂದ ಸೆಪ್ಟೆಂಬರ್ ೨೦೨೧ರವರೆಗೆ ಕಣ್ಣು ದಾನದ ಪ್ರತಿಜ್ಞೆಗಳ ಪ್ರಮಾಣ ಶೇ.೭೦ರಷ್ಟು ಕಡಿಮೆಯಾಯಿತು.

ರಾಜ್ಯದ ಬಹುಪಾಲು ಕಣ್ಣಿನ ಆಸ್ಪತ್ರೆಗಳಲ್ಲಿಯೂ ಸಹ ಕಳೆದ ಒಂದು ವರ್ಷದಲ್ಲಿ ಕಣ್ಣು ದಾನ ಹಾಗೂ ಪ್ರತಿಜ್ಞೆಗಳ ಪ್ರಮಾಣದಲ್ಲಿ ಏರಿಕೆಯನ್ನು ದಾಖಲಿಸಿವೆ. ಸರ್ಕಾರೇತರ ಸಂಸ್ಥೆಗಳೂ ಸಹ ಹೆಚ್ಚಿನ ಪ್ರತಿಜ್ಞೆಗಳನ್ನು ನೋಂದಾಯಿಸಿವೆ. ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಏನೆಂದರೆ, ಮೃತಪಟ್ಟ ವ್ಯಕ್ತಿಗಳ ರಕ್ತಸಂಬಂಧಿಗಳು ಸ್ವಯಂಪ್ರೇರಿತವಾಗಿ ಕಣ್ಣು ದಾನ ಮಾಡಲು ಮುಂದಕ್ಕೆ ಬರುತ್ತಿದ್ದಾರೆ. ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೆ ಅಂದಾಜು ೯೦ ಕಣ್ಣುಗಳ ದಾನ ಪಡೆಯಲಾಗಿವೆ. ಓರ್ವ ಕಣ್ಣಿನ ತಜ್ಞ ವೈದ್ಯರು ತಿಳಿಸಿರುವಂತೆ ಕಣ್ಣು ದಾನ ಮಾಡುವ ಪ್ರತಿಜ್ಞೆ ಪ್ರಮಾಣ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದ ನಿಜಕ್ಕೂ ದೃಷ್ಟಿ ಇಲ್ಲದಿರುವವರಿಗೆ ಒಂದು ವರದಾನವಿದ್ದಂತೆ, ಎಂದರು.

ಡಾ. ರಾಜ್‌ ಕುಮಾರ್, ಪಾರ್ವತಮ್ಮ ರಾಜ್‌ ಕುಮಾರ್, ಅಂಬರೀಶ್ ಹಾಗೂ ಪುನೀತ್ ಅವರ ಸಮಾಧಿಗಳಿರುವಂತಹ ಹೊರವರ್ತುಲ ರಸ್ತೆ (ಕಂಠೀರವ ಸ್ಟುಡಿಯೋ ಬಳಿ) ಈಗ ಜನಪ್ರಿಯವಾಗಿದೆ.

ಕಳೆದ ಒಂದು ವರ್ಷದಲ್ಲಿ ಅಪ್ಪುವಿನ ಸಮಾಧಿ ದೊಡ್ಡ ಪ್ರಮಾಣದ ಜನರನ್ನು ಆಕರ್ಷಿಸುತ್ತಿದೆ. ಮೂಲಗಳ ಪ್ರಕಾರ ಒಂದು ದಿನಕ್ಕೆ ಈ ಹಿಂದೆ ಸುಮಾರು ಮೂರರಿಂದ ನಾಲ್ಕು ಸಾವಿರ ಜನರು ಬರುತ್ತಿದ್ದರಂತೆ. ಆದರೆ ಅಪ್ಪುವಿನ ನಿಧನದ ನಂತರ, ಈಗ ಒಂದು ದಿನಕ್ಕೆ ೧೦,೦೦೦ ರಿಂದ ೧೨,೦೦೦ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: one year-death-actor-Punith rajkumar-inspire