ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾದ್ರೆ ಇನ್ನು ಮುಂದೆ ಎಸ್ಕಾಂಗಳಿಗೆ ದಂಡ.

ಬೆಂಗಳೂರು, ಡಿಸೆಂಬರ್ 6, 2021 (www.justkannada.in): ಬೆಸ್ಕಾಂ ಮತ್ತು ರಾಜ್ಯದ ಇತರೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ನಿಯಮಗಳ ಪ್ರಕಾರ ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸುವಲ್ಲಿ ವಿಫಲವಾದರೆ ಪ್ರತಿ ದಿನದ ವೈಫಲ್ಯಕ್ಕೆ ಗ್ರಾಹಕರಿಗೆ ರೂ.೧,೦೦೦ ಪರಿಹಾರ ಕಟ್ಟಿಕೊಡಬೇಕಾಗುತ್ತದೆ.

ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹುಮುಖ್ಯ ಕ್ರಮವನ್ನು ಕೈಗೊಂಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ), ಗ್ರಾಹಕರ ಹಕ್ಕುಗಳ ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದ್ದು, ಮುಂದಿನ 30 ದಿನಗಳೊಳಗೆ ಗ್ರಾಹಕರಿಂದ ಸೂಕ್ತ ಸಲಹೆಗಳನ್ನು ಆಹ್ವಾನಿಸಿದೆ.

ಕೆಇಆರ್‌ಸಿ (ವಿದ್ಯುಚ್ಛಕ್ತಿ ಗ್ರಾಹಕರ ಹಕ್ಕುಗಳು, ಪರವಾನಗಿದಾರರ ಕಾರ್ಯಪ್ರದರ್ಶನದ ಗುಣಮಟ್ಟಗಳ ಪ್ರಕಾರ ವಿದ್ಯುತ್ ಸರಬರಾಜು ಮಾಡುವ ಕರ್ತವ್ಯ) ನಿಬಂಧನೆಗಳು, ೨೦೨೧, ಎಸ್ಕಾಂಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಬದ್ಧತೆಯನ್ನು ತರುವ ಮೂಲಕ ಈ ಡಿಜಿಟಲ್ ಯುಗದಲ್ಲಿ ಗ್ರಾಹಕರಿಗೆ ಸೂಕ್ತ ಸೇವಾ ತೃಪ್ತಿಯನ್ನು ಒದಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ.

ಈ ನಿಯಮಗಳಲ್ಲಿ, “ಖಾತ್ರಿಪಡಿಸಿರುವ ಗುಣಮಟ್ಟ”ದ ಪ್ರಕಾರ ಸೇವೆ ನೀಡುವಲ್ಲಿ ಎಸ್ಕಾಂಗಳು ವಿಫಲವಾದರೆ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಪರಿಹಾರವನ್ನು ಕಟ್ಟಿಕೊಡುವ ಪ್ರಸ್ತಾವನೆಯೂ ಸೇರಿದೆ. ಇದಕ್ಕಾಗಿ ಈ ಕರಡು ನಿಯಮಗಳು, ಹೊಸ ವಿದ್ಯುತ್ ಸಂಪರ್ಕ ಅಥವಾ ಹೆಚ್ಚಳ/ಲೋಡ್ ಅಥವಾ ವೋಲ್ಟೇಜ್ ಮಟ್ಟದಲ್ಲಿ ಬದಲಾವಣೆಗೆ ಸಂಬಂಧಿಸಿದ ಗ್ರಾಹಕರ ಬೇಡಿಕೆಗೆ ಕಾಲಮಿತಿಯೊಳಗೆ ಅಂತಹ ಬೇಡಿಕೆಗಳನ್ನು ಪೂರೈಸುವುದನ್ನು ಖಾತ್ರಿಪಡಿಸಲು ಹಿಂಬರಹವನ್ನು ನೀಡುವಂತಹ ಕರ್ತವ್ಯಗಳನ್ನು ಎಸ್ಕಾಂಗಳಲ್ಲಿ ಪರಿಚಯಿಸುವಂತೆ ಪ್ರಸ್ತಾಪಿಸಿದೆ.

ವಿದ್ಯುತ್ ಸರಬರಾಜು ಮಾಡಲು, ಹೊಸ ಉಪಕೇಂದ್ರ ಅಥವಾ ಮೇನ್‌ ಗಳ ವಿತರಣೆಯ ವಿಸ್ತರಣೆಯ ನಿರ್ಮಾಣ ಕಾಮಗಾರಿಗಳೂ ಅಗತ್ಯವಿಲ್ಲದಿರುವಂತಹ ಸಂದರ್ಭಗಳಲ್ಲಿ, ಮೆಟ್ರೋ ನಗರಗಳಲ್ಲಾದರೆ ಅರ್ಜಿ ಸಲ್ಲಿಸಿದ 7 ದಿನಗಳೊಳಗೆ ಎಸ್ಕಾಂಗಳು ವಿದ್ಯುತ್ ಸರಬರಾಜನ್ನು ಒದಗಿಸಬೇಕು. ಅದೇ ರೀತಿ ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ೧೫ ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೩೦ ದಿನಗಳೊಳಗೆ ಸರಬರಾಜನ್ನು ಒದಗಿಸಬೇಕು. ಹೊಸ ಮೂಲಭೂತಸೌಕರ್ಯ ಒದಗಿಸುವ ಅಗತ್ಯವಿರುವ ಸ್ಥಳಗಳಲ್ಲಿ, ಅಗತ್ಯವಿರುವ ಲೋಡ್ ಅನ್ನು ಅವಲಂಭಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೇವೆ ಒದಗಿಸಲು ೪೫ ರಿಂದ ೧೮೦ ದಿನಗಳ ಕಾಲಾವಕಾಶವಿರುತ್ತದೆ. ಈ ನಿಯಮಗಳನ್ನು ಪೂರೈಸುವಲ್ಲಿ ಎಸ್ಕಾಂಗಳು ವಿಫಲವಾದರೆ ಪ್ರತಿ ದಿನಕ್ಕೆ ರೂ.೧,೦೦೦ ದಂಡ ಪಾವತಿಸಬೇಕಾಗುತ್ತದೆ.

ಜೊತೆಗೆ ಎಸ್ಕಾಂಗಳಿಗೆ ದಿನದ ೨೪ ಗಂಟೆಗಳ ಕಾಲ ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನಕೇಂದ್ರಿಕರಿಸುವಂತೆಯೂ, ಕೃಷಿಯಂತಹ ಕೆಲವು ವರ್ಗಗಳ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ‘ಕಡಿಮೆ ಗಂಟೆಗಳ’ (lower hours)ನ್ನು ನಿಗಧಿಪಡಿಸುವಂತಹ ಅಂಶಗಳ ಕಡೆಯೂ ಹೆಚ್ಚು ಗಮನ ಕೇಂದ್ರೀಕರಿಸುವಂತೆ ಈ ನಿಯಮಗಳು ಸೂಚಿಸುತ್ತವೆ.

ವಿದ್ಯುತ್ ಅಡಚಣೆಯ ಸಮಯ ಮತ್ತು ಆವರ್ತನದ ಲೆಕ್ಕಾಚಾರಕ್ಕೆ ಸಂಬಂಧಪಟ್ಟಂತೆ ಕೆಇಆರ್‌ಸಿ ಒಂದು ಕಾರ್ಯವಿಧಾನವನ್ನು ಪರಿಚಯಿಸಿದ್ದು, ಇದರ ಪ್ರಕಾರವಾಗಿ ಕನಿಷ್ಠ ವಿದ್ಯುತ್ ನಿಲುಗಡೆ ಸಮಯವನ್ನು ೩ ರಿಂದ ೧೦ ನಿಮಿಷಗಳಿಗೆ ನಿಗಧಿಪಡಿಸುವಂತೆ ಸಲಹೆ ನೀಡಿದೆ.

ಪೀಣ್ಯದ ಓರ್ವ ಗ್ರಾಹಕರ ಪ್ರಕಾರ, “ಬಹಳ ಕಡಿಮೆ ಅವಧಿಗೆ ಉಂಟಾಗುವಂತಹ ಬಹು ವಿದ್ಯುತ್ ಸಂಪರ್ಕ ಕಡಿತಗಳಿಂದಾಗಿ ಫ್ಯೂಸ್‌ಗಳು ಮತ್ತು ಸ್ಟಬಿಲೈಜರ್‌ಗಳು ಹಾನಿಯಾಗುತ್ತವೆ. ಎಸ್ಕಾಂಗಳು ನಿಗಧಿತ ಅವಧಿಗೆ ವಿದ್ಯುತ್ ಕಡಿತಗೊಳಿಸಿದಾಗ, ಅಪರೂಪದ ಸಂದರ್ಭಗಳಲ್ಲಿ ಗ್ರಾಹಕರಿಗೆ ಅರ್ಥವಾಗುತ್ತದೆ. ಆದರೆ, ಈ ರೀತಿ ಅನಿಗಧಿತ (unscheduled) ವಿದ್ಯುತ್ ಕಡಿತಗಳನ್ನು ಮಾಡಿದಾಗ ಬಹಳ ದೊಡ್ಡ ಸಮಸ್ಯೆಗಳು ಉಂಟಾಗುತ್ತದೆ,” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Obstruction -power -supply -no longer – penalty – Escom