ಯಡಿಯೂರಪ್ಪ ಮಾತ್ರವಲ್ಲ, ಪೂರ್ಣ ಅವಧಿಯನ್ನು ಮುಗಿಸಿದ ಕರ್ನಾಟಕದ ಮುಖ್ಯಮಂತ್ರಿಗಳೇ ಅಪರೂಪ

ಬೆಂಗಳೂರು, ಜುಲೈ 29, 2021(www.justkannada.in): ಬಿಎಸ್ ವೈ ಎಂದೇ ಉಲ್ಲೇಖಿಸಲ್ಪಡುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ನಾಲ್ಕು ಬಾರಿ ರಾಜ್ಯದ ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ರಾಜ್ಯದ ಇತಿಹಾಸದಲ್ಲಿಯೇ ಇಷ್ಟು ಬಾರಿ ಮುಖ್ಯಮಂತ್ರಿ ಪದವಿಗೇರಿದ ಏಕೈಕ ರಾಜಕಾರಣಿ ಎನಿಸಿಕೊಂಡಿದ್ದಾರೆ. ಆದರೂ ಸಹ, ಒಮ್ಮೆಯೂ ಅವರು ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯವರೆಗೆ ಮುಂದುವರೆಯುವುದು ಸಾಧ್ಯವಾಗಲಿಲ್ಲ. ಹಾಗಾಗಿ ಅವರು ಎಲ್ಲರಿಗಿಂತ ದುರಾದೃಷ್ಟಕರ ರಾಜಕಾರಣಿ ಎಂಬ ಪಟ್ಟಕ್ಕೂ ಭಾಜನರಾಗಿದ್ದಾರೆ.

ಮೈಸೂರು ರಾಜ್ಯದಿಂದ, 1973ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾದಾಗಿನಿಂದ ಈವರೆಗೆ ೧೫ ಜನರು ರಾಜ್ಯದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಈ ೧೫ ಜನರ ಪೈಕಿ ಡಿ. ದೇವರಾಜ ಅರಸ್ (೧೯೭೨-೧೯೭೭), ಎಸ್.ಎಂ. ಕೃಷ್ಣ (೧೯೯೯-೨೦೦೪) ಮತ್ತು ಸಿದ್ದರಾಮಯ್ಯ (೨೦೧೩-೨೦೧೮), ಈ ಕೇವಲ ಮೂವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಅಥವಾ ತಮ್ಮ ಅಧಿಕಾರದ ಅಂತಿಮ ದಿನಗಳಲ್ಲಿ ಸರ್ಕಾರವನ್ನು ವಿಸರ್ಜಿಸಿದ್ದಾರೆ. ಇದರಲ್ಲಿ ವಿಶೇಷವೇನೆಂದರೆ ಈ ಮೂರು ಮುಖ್ಯಮಂತ್ರಿಗಳು ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ದೇವರಾಜ ಅರಸು ರವರು ಜನವರಿ ೭, ೧೯೮೦ರಂದು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪತನದ ನಂತರ ತಮ್ಮ ಪದವಿಗೆ ರಾಜೀನಾಮೆ ನೀಡಿದ ಕಾರಣದಿಂದಾಗಿ ಮುಖ್ಯಮಂತ್ರಿಯಾಗಿ ಅವಧಿಯನ್ನು ಪೂರ್ಣಗೊಳಿಸುವುದು ಸಾಧ್ಯವಾಗಲಿಲ್ಲ. ಇದಾದ ನಂತರ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಸ್ವಂತ ಬಣವನ್ನು ಪ್ರಾರಂಭಿಸಿದರು. ಆದಾಗ್ಯೂ, ಅದೇ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಗೆದ್ದ ನಂತರ ಅರಸು ರವರು ತಮ್ಮ ಹಲವು ಎಂಎಲ್‌ಎಗಳೊಂದಿಗೆ ಪುನಃ ಇಂದಿರಾ ಗಾಂಧಿಯವರ ಬಣಕ್ಕೆ ಸೇರ್ಪಡೆಗೊಳ್ಳಲು ತೀರ್ಮಾನಿಸಿದರು. ಆದರೆ ಆರ್. ಗುಂಡುರಾವ್ ಅವರು ಅವರ ಸ್ಥಾನವನ್ನು ತುಂಬಿ, ಕರ್ನಾಟಕದಲ್ಲಿ ಆರನೇ ವಿಧಾನಸಭೆಯ ಅಂತ್ಯದವರೆಗೂ, ಅಂದರೆ ಜನವರಿ ೧೯೮೩ರವರೆಗೂ ಮುಂದುವರೆದರು.

ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮೊಟ್ಟ ಮೊದಲ ಕಾಂಗ್ರೇಸೇತರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ೧೯೮೩ರಲ್ಲಿ ಜನತಾ ಪಾರ್ಟಿ ಟಿಕೆಟ್ ಮೇಲೆ ವಿಜಯ ಸಾಧಿಸಿದ ಒಂದು ವರ್ಷದ ನಂತರ ತಮ್ಮ ಪದವಿಗೆ ರಾಜೀನಾಮೆ ನೀಡಲು ನಿರ್ಧರಿಸಿದರು. ೧೯೮೫ರಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಅವರು ವಿಜಯವನ್ನು ಸಾಧಿಸಿದರೂ ಸಹ ಭ್ರಷ್ಟಾಚಾರದ ಆರೋಪದ ಮೇಲೆ ೧೯೮೮ರಲ್ಲಿ ರಾಜೀನಾಮೆ ಸಲ್ಲಿಸಬೇಕಾಯಿತು.

ಆಗ ಜನತಾ ಪಕ್ಷದ ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ೨೮೧ ದಿನಗಳ ಕಾಲ ಆಡಳಿತ ನಡೆಸಿದರು. ನಂತರದಲ್ಲಿ ವಿಶ್ವಾಸಮತದ ಕೊರತೆಯ ಕಾರಣದಿಂದಾಗಿ ರಾಜ್ಯಪಾಲರು ಬೊಮ್ಮಾಯಿ ಅವರ ಸರ್ಕಾರವನ್ನು ವಜಾಗೊಳಿಸಿದರು.

ಪುನಃ ಕಾಂಗ್ರೆಸ್ ಪಕ್ಷ ಕರ್ನಾಟಕದ ಒಂಬತ್ತನೇ ವಿಧಾಸಭಾ ಚುನಾವಣೆಯಲ್ಲಿ ಪುನರಾಯ್ಕೆಯಾಯಿತು. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾದರು. ಅವರೂ ಸಹ ಮುಖ್ಯಮಂತ್ರಿಯಾಗಿ ಒಂದು ವರ್ಷವನ್ನೂ ಪೂರ್ಣಗೊಳಿಸಲಾಗಲಿಲ್ಲ. ಏಕೆಂದರೆ, ರಾಜ್ಯದಲ್ಲಿ ೧೯೯೦ರಲ್ಲಿ ಉದ್ಭವಿಸಿದ ಕೋಮು ಹಿಂಸಾಚಾರದ ನಂತರ ಅವರನ್ನು ಅಂದಿನ ಐಎನ್‌ಸಿ ಅಧ್ಯಕ್ಷರಾದ ರಾಜೀವ್ ಗಾಂಧಿ ಅವರು ವಜಾಗೊಳಿಸಿದರು. ನಂತರ ಎಸ್. ಬಂಗಾರಪ್ಪ ಅವರು ಅವರ ಸ್ಥಾನವನ್ನು ತುಂಬಿದರು. ಆದರೆ ಬಂಗಾರಪ್ಪ ಅವರು ಕರ್ನಾಟಕದ ೧೨ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷ ೩೩ ದಿನಗಳ ನಂತರ, ರಾಜೀವ್ ಗಾಂಧಿ ಅವರು ಬಂಗಾರಪ್ಪ ಅವರನ್ನು ತಮ್ಮ ಪದವಿಗೆ (ಆರೋಗ್ಯ ಕಾರಣಗಳಿಂದಾಗಿ) ರಾಜೀನಾಮೆ ನೀಡುವಂತೆ ಸೂಚಿಸಿದರು.

ಅದಾದ ನಂತರ ಒಂಬತ್ತನೇ ವಿಧಾಸಭೆಯ ಅವಧಿ ಮುಕ್ತಾಯವಾಗುವುದಕ್ಕೆ ಮುಂಚೆ ಎಂ.ವೀರಪ್ಪ ಮೊಯ್ಲಿಯವರು ಎರಡು ವರ್ಷ ೨೨ ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. ೧೯೯೪ರಲ್ಲಿ ಚುನಾವಣೆ ನಡೆದು ಜನತಾ ದಳ ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಹೆಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾದರು. ಆದರೆ ಅವರೂ ಸಹ ಪ್ರಧಾನಿ ಹುದ್ದೆ ಲಭಿಸಿದ ಕಾರಣದಿಂದಾಗಿ ಒಂದೂವರೆ ವರ್ಷದ ನಂತರ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು.

ನಂತರ ಜೆ.ಹೆಚ್.ಪಟೇಲ್ ಅವರು ೧೯೯೯ರ ವಿದಾನಸಭಾ ಚುನಾವಣೆಗಳು ನಡೆಯುವವರೆಗೂ, ಉಳಿದ ಮೂರು ವರ್ಷ ೧೨೯ ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.

ನಂತರ ೨೦೦೪ರವರೆಗೆ ಎಸ್.ಎಂ.ಕೃಷ್ಣ ಮುಂದಾಳತ್ವದ ಸರ್ಕಾರದ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕ ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಜೆಡಿಎಸ್, ಬಿಜೆಪಿ ಜೊತೆ ಸೇರಿ ಸರ್ಕಾರವನ್ನು ರಚಿಸಲು ಮುಂದಾದ ಕಾರಣದಿಂದಾಗಿ ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸಲಾಗಲಿಲ್ಲ. ೨೦೦೬ರ ಫೆಬ್ರವರಿ ೩ರಂದು ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ತಲಾ ೨೦ ತಿಂಗಳು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದಾಗಿ ಒಪ್ಪಂದವಾಗಿತ್ತು. ಆದರೆ ತನ್ನ ಅವಧಿ ಮುಗಿಯುತ್ತಿದ್ದಂತೆ ಹೆಚ್.ಡಿ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರು. ಇದರಿಂದಾಗಿ ಸರ್ಕಾರ ವಿಸರ್ಜನೆಯಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು.

ಇದಾದ ನಂತರ ೨೦೦೭ರ ನವೆಂಬರ್ ೧೨ರಂದು ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಕೇವಲ ಒಂದು ವಾರದೊಳಗೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆಗ ಮೇ ೨೦೦೮ರವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಪದವಿಯೇ ಇರಲಿಲ್ಲ. ನಂತರ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆದು ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಆಗ ಯಡಿಯೂರಪ್ಪ ಅವರು ಅತೀ ದೀರ್ಘ ಅವಧಿಯವರೆಗೆ, ಅಂದರೆ ಮೂರು ವರ್ಷ ೬೬ ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ನಂತರ ರಾಜ್ಯ ಲೋಕಾಯುಕ್ತದ ಆರೋಪವನ್ನು ಎದುರಿಸುತ್ತಿದ್ದ ಅವರಿಗೆ ಶಿಕ್ಷೆಯಾಗಿ, ಬಿಜೆಪಿ ರಾಷ್ಟ್ರ ಸಮಿತಿಯಿಂದ ಒತ್ತಡ ಬಂದ ಕಾರಣದಿಂದಾಗಿ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಇದರಿಂದಾಗಿ ೨೦೧೧ರ ಆಗಸ್ಟ್ ೫ರಂದು ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾದರು. ಆದರೆ ಅವರೂ ಸಹ ಕೇವಲ ಒಂದೇ ವರ್ಷದಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದಾಗಿ ರಾಜೀನಾಮೆ ನೀಡಬೇಕಾಯಿತು. ಅವರ ನಂತರ ಜಗದೀಶ್ ಶೆಟ್ಟರ್ ಅವರು ೧೩ನೇ ವಿಧಾನಸಭೆಯ ಅಂತ್ಯದವರೆಗೂ ಅಂದರೆ ೩೦೪ ದಿನಗಳ ಅವಧಿ ಅಂತ್ಯವಾಗುವವೆರಗೂ ಮುಖ್ಯಮಂತ್ರಿಯಾಗಿ ಮುಂದುವರೆದರು.

೨೦೧೮ರ ಮೇ ತಿಂಗಳಲ್ಲಿ ಬಿಜೆಪಿ ೧೦೫ ಸದಸ್ಯರೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಸರ್ಕಾರ ರಚಿಸಲು ರಾಜ್ಯಪಾಲರು ಬಿ.ಎಸ್.ಯಡಿಯೂರಪ್ಪ ಅವರನ್ನು ಆಹ್ವಾನಿಸಿದರು. ಆಗ ಒಟ್ಟು ೨೨೪ ಸದಸ್ಯರ ಬಲವಿರುವ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಬಹುಮತವನ್ನು ಸಾಬಿತುಪಡಿಸುವುದು ಸಾಧ್ಯವಾಗದಿರುವ ಕಾರಣದಿಂದಾಗಿ ಸರ್ಕಾರ ಕೇವಲ ಎರಡು ದಿನಗಳು ಮಾತ್ರ ಉಳಿಯುತು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟು ೧೧೬ ಸದಸ್ಯರ ಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿತು. ಆಗ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ೨೦೧೮ರ ಮೇ ೨೩ರಂದು ಪ್ರಮಾಣವಚನ ಸ್ವೀಕರಿಸಿದರು. ಆದರೆ ಚುನಾವಣಾ ನಂತರದ ಮೈತ್ರಿ ಪುನಃ ವಿಫಲವಾಯಿತು. ಜುಲೈ ೨೦೧೯ರಂದು ಒಂದು ತಿಂಗಳ ಅವಧಿಯವರೆಗಿನ ರಾಜಕೀಯ ಬಿಕಟ್ಟಿನ ನಂತರ ೧೭ ಎಂಎಲ್‌ಎಗಳು ಪಕ್ಷ ತೊರೆದು ಬಿಜೆಪಿ ಸೇರಿದರು.

ಬಿಎಸ್‌ವೈ ಮುಂದಾಳತ್ವದ ಬಿಜೆಪಿ ಜುಲೈ ೨೩, ೨೦೧೯ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಸೋಲಿಸಿ, ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಜುಲೈ ೨೬, ೨೦೨೧ರವರೆಗೆ, ಎರಡು ವರ್ಷ ಕಾಲ ಆಡಳಿತ ನಡೆಸಿದರು.

ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ನಾಯಕನಾದರೂ ಸಹ ಅವರು ತಮ್ಮ ಅಧಿಕಾರಾವಧಿಯಿಡೀ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದರು. ಯಡಿಯೂರಪ್ಪ ಅವರು ೨೦೦೭ರಲ್ಲಿ ತಾವು ಬಳಸುತ್ತಿದ್ದಂತಹ ಹೆಸರನ್ನು, ಜುಲೈ ೨೬, ೨೦೧೯ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮುಂಚೆ ಬದಲಾವಣೆಯನ್ನೂ ಮಾಡಿಕೊಂಡರು. ಆಂಗ್ಲ ಭಾಷೆಯಲ್ಲಿ ಬಳಸುವ ತಮ್ಮ ಹೆಸರಿನಲ್ಲಿ ‘ಡಿ’ ಅಕ್ಷರದ ಸ್ಥಾನದಲ್ಲಿ ‘ಐ’ ಅಕ್ಷರವನ್ನು ಉಪಯೋಗಿಸುತ್ತಿದ್ದರು. ಈ ರೀತಿ ಸ್ಪೆಲ್ಲಿಂಗ್ ಬದಲಾಯಿಸಿದರೂ ಸಹ ಅವರ ಅದೃಷ್ಟ ಬದಲಾಗಲಿಲ್ಲ.

ಈ ಹಿಂದೆಯೂ ಸಹ ಮೈಸೂರು ರಾಜ್ಯವಾಗಿದ್ದಾಗಲೂ ಸಹ ಮುಖ್ಯಮಂತ್ರಿಗಳಾಗಿದ್ದಂತಹವರು ಸಂಪೂರ್ಣ ಐದು ವರ್ಷಗಳ ಕಾಲ ಯಾವುದೇ ತಡೆಗಳಿಲ್ಲದೆ ಅಧಿಕಾರ ನಡೆಸಿರುವ ಇತಿಹಾಸವಿಲ್ಲ. ಅವರಲ್ಲಿ ಕೆ. ಚಂಗಲರಾಯ ರೆಡ್ಡಿ (ಅಕ್ಟೋಬರ್ ೨೫, ೧೯೪೭ ರಿಂದ ಮಾರ್ಚ್ ೩೦, ೧೯೫೨), ಕೆಂಗಲ್ ಹನುಮಂತಯ್ಯ (ನಾಲ್ಕು ವರ್ಷ, ೧೪೨ ದಿನ, ಆಗಸ್ಟ್ ೧೯, ೧೯೫೬ರವರೆಗೆ), ಕಡಿದಾಳ ಮಂಜಪ್ಪ (೭೨ ದಿನ, ಅಕ್ಟೋಬರ್ ೩೧, ೧೯೫೬ರವರೆಗೆ), ಎಸ್. ನಿಜಲಿಂಗಪ್ಪ (ನವೆಂಬರ್ ೧, ೧೯೫೬ ರಿಂದ ಮೇ ೧೬, ೧೯೫೮ರವರೆಗೆ ಹಾಗೂ ಜೂನ್ ೨೧, ೧೯೬೨ರಿಂದ ಮೇ ೨೮, ೧೯೬೮ರವರೆಗೆ), ಬಿ.ಡಿ. ಜತ್ತಿ (ಮೇ ೧೬, ೧೯೫೮ರಿಂದ ಮಾರ್ಚ್ ೯, ೧೯೬೨ರವರೆಗೆ); ಎಸ್.ಆರ್. ಕಂಠಿ (ಮಾರ್ಚ್ ೧೪, ೧೯೬೨ ರಿಂದ ಜೂನ್ ೨೦, ೧೯೬೨ರವರೆಗೆ) ಮತ್ತು ವೀರೇಂದ್ರ ಪಾಟೀಲ್ (ಮೇ ೨೯, ೧೯೬೮ರಿಂದ ಮಾರ್ಚ್ ೧೮, ೧೯೭೧ರವರೆಗೆ) ಅವರು ಸೇರಿದ್ದಾರೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Not only -Yeddyurappa – Karnataka -Chief Ministers – completed – full term – rare