ಬಿಎಸ್ ವೈ ನನ್ನನ್ನು‌ ಮನೆ ಮಗನಂತೆ ನೋಡಿಕೊಳ್ತಾರೆ: ನಾನು ಸಚಿವ ಸ್ಥಾನ ಬೇಕು ಅಂತ ಎಂದೂ ಕೇಳಿಲ್ಲ- ಮುರುಗೇಶ್ ನಿರಾಣಿ ಹೇಳಿಕೆ…

ಬಾಗಲಕೋಟೆ,ಫೆ,26,2020(www.justkannada.in): ನಾನು ಸಚಿವ ಸ್ಥಾನ ಬೇಕು ಅಂತ ಎಂದೂ ಕೇಳಿಲ್ಲ.  ಮುಂದೆಯೂ ಕೇಳುವುದಿಲ್ಲ. ಬಿಎಸ್ ವೈ ನನ್ನನ್ನು‌ ಮನೆ ಮಗನಂತೆ ನೋಡಿಕೊಳ್ತಾರೆ  ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಶಾಸಕ ಮುರುಗೇಶ್ ನಿರಾಣಿ,  ಮುಂದೆ ನಡೆಯುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ನನಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ ಕೊಡದಿದ್ದರೂ ಸಂತೋಷ. ವಚನಾನಂದ ಶ್ರೀಗಳ ಹೇಳಿಕೆಯಿಂದ ನನಗೇನೂ ವ್ಯತ್ಯಾಸವಾಗಿಲ್ಲ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ವಚನಾನಂದ ಶ್ರೀಗಳ ಹೇಳಿಕೆ ನಂತರ ನನ್ನನ್ನು ಕಡೆಗಣಿಸಿಲ್ಲ. ಅವರ ಹೇಳಿಕೆ ನಂತರ ಮೂಲ‌ ಬಿಜೆಪಿಗರನ್ನಾರನ್ನೂ ಸಚಿವರನ್ನಾಗಿ ಮಾಡಿಲ್ಲ. ಅವರ ಹೇಳಿಕೆಗೂ ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಸಂಬಂಧವಿಲ್ಲ. ವಚನಾನಂದ ಶ್ರೀಗಳ ಮಾತಿನಿಂದ ಯಡಿಯೂರಪ್ಪ ನನ್ನ ಮೇಲೆ ಮುನಿಸಿಕೊಂಡಿಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ಹಾಗೂ ನಮ್ಮದು ತಂದೆ ಮಕ್ಕಳ ಸಂಬಂಧ. ಯಡಿಯೂರಪ್ಪ ನನ್ನನ್ನು‌ ಮನೆ ಮಗನಂತೆ ನೋಡಿಕೊಳ್ತಾರೆ. ಮುರುಗೇಶ್ ನಿರಾಣಿ ಏನು ಅಂತ ಯಡಿಯೂರಪ್ಪ ಅವರಿಗೆ ಗೊತ್ತು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಜಗದೀಶ್ ಶೆಟ್ಟರ್ ಮನೆಯಲ್ಲಿ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ,  ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅಲ್ಲಿ ರಾಜಕೀಯ ಚರ್ಚೆ ನಡೆದಿದೆ ಅಂತ ಯಾರು ಹೇಳಿದ್ದು. ಅದು ಕೇವಲ ಮಾಧ್ಯಮಗಳ ಊಹಾಪೋಹ. ನಾನು ನನ್ನ ಸಕ್ಕರೆ ಕಾರ್ಖಾನೆ ಸಂಬಂಧಿತ ಕೆಲಸದ ಬಗ್ಗೆ ಮಾತನಾಡಲು ಶೆಟ್ಟರ್ ಮನೆಗೆ ಹೋಗಿದ್ದೆ. ಆ ಬಗ್ಗೆ ಬೇಕಾದರೆ ದಾಖಲೆ ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಸಿಎಎ ವಿಚಾರದಲ್ಲಿ ದೇಶದ್ರೋಹಿ ಹೇಳಿಕೆ ಖಂಡಿಸಿದ ಮುರುಗೇಶ್ ನಿರಾಣಿ

ದೇಶದ್ರೋಹಿ ಘೋಷಣೆ ಹಾಕಿದವರ ವಿರುದ್ದ ಗರಂ ಆದ ಮುರುಗೇಶ್ ನಿರಾಣಿ, ದೇಶದ್ರೋಹಿ ಘೋಷಣೆ ಕೂಗೋದು ಯಾರಿಗೋ ಹುಟ್ಟಿ ಯಾರದ್ದೋ ಹೆಸರು ಹೇಳಿದ ಹಾಗೆ. ಇವರನ್ನೆಲ್ಲ ದೇಶ ಬಿಟ್ಟು ಓಡಿಸಬೇಕುಯಾವ ದೇಶದ ಪರ ಘೋಷಣೆ ಕೂಗ್ತಾರೊ ಆ ದೇಶದಲ್ಲಿ ಹೋಗಿ ಇರಬೇಕು. ಇಂತಹವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ದೆಹಲಿ ನಡೆದ ಪೌರತ್ವ ದಂಗೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ಟ್ರಂಪ್ ಬಂದ ವೇಳೆ ಕೇಂದ್ರಕ್ಕೆ ಮುಜುಗರ ತರಲು  ಈ ರೀತಿ ಮಾಡಲಾಗಿದೆ. ಕಾಂಗ್ರೆಸ್ ನವರು ಇಂತಹ ಕಾರ್ಯ ಮಾಡಿಯೇ ಮಾಡ್ತಾರೆ. ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಕೇಂದ್ರ ಸರಕಾರಕ್ಕೆ ಇದೆ ಎಂದು ಕಾಂಗ್ರೆಸ್ ವಿರುದ್ದ ಆರೋಪಿಸಿದರು.

Key words: no-ministerial position –bjp MLA-Murugesh nirani- bagalkot