ಶಾಲೆಗಳನ್ನ ತೆರೆಯಲು ತರಾತುರಿಯಲ್ಲಿ ನಿರ್ಧಾರ ಮಾಡಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ…

ಬೆಂಗಳೂರು,ಜೂ,3,2020(www.justkannada.in):  ಸದ್ಯಕ್ಕೆ ಶಾಲೆಗಳನ್ನ ತೆರೆಯದಿರಲು ನಿರ್ಧರಿಸಲಾಗಿದೆ. ಶಿಕ್ಷಣ ಇಲಾಖೆ ತರಾತುರಿಯಲ್ಲಿ ಶಾಲೆಗಳನ್ನ ತೆರೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜುಲೈ 1ರಿಂದ ಶಾಲೆಗಳನ್ನ ಪ್ರಾರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿತ್ತು. ಈ ನಡುವೆ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿರುವ ಸಮಯದಲ್ಲಿ ಶಾಲೆಗಳನ್ನ ಪ್ರಾರಂಭಿಸುವುದು ಬೇಡ ಎಂಬುದು ಹಲವರ ಅಭಿಪ್ರಾಯವಾಗಿದೆ. ಅಲ್ಲದೆ ಶಾಲೆಗಳನ್ನ ಪ್ರಾರಂಭಿಸದಂತೆ ಪೋಷಕರು ಅಭಿಯಾನ ಆರಂಭಿಸಿದ್ದಾರೆ. ಹೀಗಾಗಿ ಶಾಲೆಗಳ ಪ್ರಾರಂಭದ ಬಗ್ಗೆ  ಫೆಸ್ ಬುಕ್ ಲೈವ್ ನಲ್ಲಿ  ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆ ಪುನರ್ ಆರಂಭ ಮಾಡುವ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಮಕ್ಕಳ ಸುರಕ್ಷತೆ, ಕಲಿಕೆ ಹಾಗೂ ಭವಿಷ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಜಾಸತ್ತಾತ್ಮಕವಾಗಿ ಮುಂದೆ ಸಾಗಲಿದ್ದೇವೆ. ತರಾತುರಿಯಲ್ಲಿ ಶಾಲೆಗಳನ್ನ ಪ್ರಾರಂಭಿಸುವ ನಿರ್ಧಾರ ಮಾಡಲಲ್ಲ ಎಂದಿದ್ದಾರೆ.

ಜುಲೈ 1 ಅಥವಾ ಜುಲೈ15 ಶಾಲಾರಂಭದ ದಿನಾಂಕವಲ್ಲ. ಉದ್ದೇಶಿತ ದಿನಾಂಕವಷ್ಟೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಗಳಲ್ಲಿ ಪಾಲಕ, ಪೋಷಕರ ಮತ್ತು ಎಸ್ ಡಿಎಂಸಿ ಸದಸ್ಯರ ಸಭೆ ನಡೆಸಿ, ಅಭಿಪ್ರಾಯವನ್ನ ಸಂಗ್ರಹಿಸಿ ಮುಂದೆ ನಡೆಯುತ್ತೇವೆ. ಶಾಲಾರಂಭದ ಯಾವ ನಿರ್ಧಾರವೂ ಈವರೆಗೂ ತೆಗೆದುಕೊಂಡಿಲ್ಲ. ಸದ್ಯ ಸುರಕ್ಷತೆ ಸಾಮಾಜಿಕ ಅಂತರದ ಬಗ್ಗೆ ಚರ್ಚೆಯಾಗುತ್ತಿದೆ. ಪೋಷಕರ ಅಭಿಪ್ರಾಯಗಳಿಗೆ ಸ್ಪಂದಿಸುವ ಅಗತ್ಯತೆ ಇದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Key words: No decision – – open- schools-Education –Minister- Suresh Kumar