ಭರ್ಜರಿ ಉಗ್ರ ಬೇಟೆ: ದಾಳಿಗೆ ಸ್ಕೆಚ್ ಹಾಕಿದ್ದ 5 ಶಂಕಿತರ ಸೆರೆ

ಬೆಂಗಳೂರು:ಆ-31: ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಹಬೀಬುರ್ ರೆಹಮಾನ್ ದೊಡ್ಡಬಳ್ಳಾಪುರದಲ್ಲಿ ಎನ್​ಐಎ ಬಲೆಗೆ ಬೀಳುತ್ತಿದ್ದಂತೆ ಪರಾರಿಯಾಗಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಯ ಐವರು ಉಗ್ರರು ಈಗ ಸೆರೆಸಿಕ್ಕಿದ್ದಾರೆ.

ಎರಡು ದಿನಗಳಿಂದ ಪಶ್ಚಿಮ ಬಂಗಾಳ, ಕೋಲ್ಕತ ಮತ್ತು ಅಸ್ಸಾಂನಲ್ಲಿ ಎನ್​ಐಎ ತಂಡ ತೀವ್ರ ಶೋಧ ನಡೆಸಿದೆ. ಅಸ್ಸಾಂನ ಅತಾವುರ್ ರೆಹಮಾನ್ ಅಲಿಯಾಸ್ ನಜಿರುಲ್ಲಾ ಇಸ್ಲಾಂ, ಬಾಂಗ್ಲಾದೇಶದ ಆರೀಫ್ ಮತ್ತು ಜಹೀದುಲ್ಲಾ ಇಸ್ಲಾಮ್ ಅಲಿಯಾಸ್ ಕೌಸರ್, ಪಶ್ಚಿಮ ಬಂಗಾಳದ ಆಸೀಫ್ ಇಕ್ಬಾಲ್ ಅಲಿಯಾಸ್ ನದೀಮ್ ಹಾಗೂ ಇನ್ನೊಬ್ಬ ಉಗ್ರನನ್ನು ಎನ್​ಐಎ ಬಂಧಿಸಿದೆ. ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಎನ್​ಐಎ ತಂಡ ವಿಚಾರಣೆ ನಡೆಸುತ್ತಿದೆ. ಸೆ. 3ರಂದು ಬೆಂಗಳೂರಿಗೆ ಕರೆತಂದು ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಬಳಿಕ ಚಿಕ್ಕಬಾಣಾವಾರದಲ್ಲಿ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದು ಮಹಜರು ನಡೆಸಲಿದ್ದಾರೆ.

ಎನ್​ಐಎ ಅಧಿಕಾರಿಗಳು ಜೂ. 25ರಂದು ದೊಡ್ಡಬಳ್ಳಾಪುರದ ಮಸೀದಿಯೊಂದರಲ್ಲಿ ಹಬೀಬುರ್​ನನ್ನು ಬಂಧಿಸಿದ ಬಳಿಕ ಆತನ ಜತೆಗಿದ್ದ 6 ಉಗ್ರರು ಪರಾರಿಯಾಗಿದ್ದರು. ಇವರು ಕರ್ನಾಟಕ ಸೇರಿ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಭಯೋತ್ಪಾದಕ ಕೃತ್ಯವೆಸಗಲು ಸಂಚು ರೂಪಿಸಿದ್ದರು. ಇದಕ್ಕಾಗಿ ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಸುತ್ತಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಪಶ್ಚಿಮ ಬಂಗಾಳದ ತಾನರ್ಪರದಲ್ಲಿ ನೆಲೆಸಿದ್ದ ಜೆಎಂಬಿ ಸಂಘಟನೆಯ ಮುಖಂಡ ಜಹೀರುಲ್ ಶೇಖ್ ಎಂಬಾತನನ್ನು ಆ.11ರಂದು ಎನ್​ಐಎ ಅಧಿಕಾರಿಗಳು ಬಂಧಿಸಿದ್ದರು. ಚಿಕ್ಕಬಾಣಾವರದಲ್ಲಿ ಹಬೀಬುರ್ ಜತೆಗೆ ನೆಲೆಸಿದ್ದ ಉಗ್ರರ ಬಗ್ಗೆ ಆತ ಸುಳಿವು ಕೊಟ್ಟಿದ್ದ. ಇದನ್ನು ಆಧರಿಸಿ ತೀವ್ರ ಶೋಧ ಕೈಗೊಂಡಿದ್ದ ಎನ್​ಐಎ ಅಧಿಕಾರಿಗಳು ಆ.26ರಂದು ಹಬೀಬುರ್ ಜತೆಗಿದ್ದ ನಜೀರ್ ಶೇಖ್​ನನ್ನು ಅಗರ್ತಲಾದಲ್ಲಿ ಬಂಧಿಸಿ, ಆ. 28ರಂದು ಬೆಂಗಳೂರಿಗೆ ಕರೆತಂದಿದ್ದರು. ಇದೀಗ ಇನ್ನುಳಿದ ಐವರನ್ನು ಬಂಧಿಸಲಾಗಿದೆ.

ಬಾಂಬ್ ತಯಾರಿಕೆಯಲ್ಲಿ ನಿಪುಣ: ಪಶ್ಚಿಮ ಬಂಗಾಳದಲ್ಲಿ ಸೆರೆಸಿಕ್ಕಿದ್ದ ಜಹೀರುಲ್ ಗ್ರೆನೇಡ್, ಟೈಮ್ ಬಾಂಬ್, ರಾಕೆಟ್ ಬಾಂಬ್ ತಯಾರಿಸುವಲ್ಲಿ ನಿಪುಣ. ಸಂಘಟನೆಯಲ್ಲಿದ್ದವರಿಗೆ ಬಾಂಬ್ ತಯಾರಿಸುವ ತಂತ್ರ ಕಲಿಸಿಕೊಟ್ಟಿದ್ದ. ಚಿಕ್ಕಬಾಣಾವರದಲ್ಲಿ ಹಬೀಬುರ್ ಜತೆಗಿದ್ದ ನಜೀರ್ ಶೇಖ್ ಕೂಡ ಈತನ ಜತೆಗೆ ಗುರುತಿಸಿಕೊಂಡಿದ್ದ.

ನಜೀರ್ ಮುಖಂಡ: ನಜೀರ್ ಶೇಖ್ ತಂಡದ ಮುಖಂಡನಾಗಿ ಕೆಲಸ ಮಾಡುತ್ತಿದ್ದ. ಸ್ಪೋಟಕ ಸಾಮಗ್ರಿಗಳಿಂದ ವಿವಿಧ ರೀತಿಯ ಬಾಂಬ್ ತಯಾರಿಸುವ ತರಬೇತಿ ಕೊಟ್ಟಿದ್ದ. ಜೂನ್ನಲ್ಲಿ ಬೆಂಗಳೂರಿನ ಹಲವೆಡೆ ಏಕಕಾಲಕ್ಕೆ ರಾಕೆಟ್ ಬಾಂಬ್, ಗ್ರೆನೇಡ್ ದಾಳಿ ನಡೆಸಲು ಸಜ್ಜಾಗಿದ್ದರು. ಜೂ.25ರಂದು ಹಬೀಬುರ್ ರೆಹಮಾನ್ ಸೆರೆ ಸಿಕ್ಕಿದ್ದರಿಂದ ದೊಡ್ಡ ದುರಂತ ತಪ್ಪಿತು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

ನಜೀರ್ ಶೇಖ್ ಸುಳಿವಿನಿಂದ ಹೈಅಲರ್ಟ್: ಜೆಎಂಬಿ ಸಂಘಟನೆ ದೇಶದಾದ್ಯಂತ ಭಯೋತ್ಪಾದನಾ ದಾಳಿ ನಡೆಸಲು ಸಿದಟಛಿತೆ ಮಾಡಿಕೊಂಡಿರುವ ಬಗ್ಗೆ ನಜೀರ್ ಎನ್ಐಎ ಅಧಿಕಾರಿಗಳಿಗೆ ಸುಳಿವು ಕೊಟ್ಟಿದ್ದ. ಇದೇ ವೇಳೆ, ಕರಾವಳಿ ಭಾಗದಲ್ಲಿ ಪಾಕಿಸ್ತಾನದಿಂದ ಸ್ಯಾಟಲೈಟ್ ಕರೆ ಬಂದಿರುವ ಲೊಕೇಶನ್ ಪತ್ತೆಯಾಗಿತ್ತು. ಎಚ್ಚೆತ್ತುಕೊಂಡ ಗುಪ್ತಚರ ದಳ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ‘ಎ’ ಶ್ರೇಣಿಯ ಅಲರ್ಟ್ ಘೋಷಿಸಿ, ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು.

ಸ್ಪೋಟಕ ಸಾಮಗ್ರಿ ಜಪ್ತಿ

ಜು.7ರಂದುಚಿಕ್ಕಬಾಣಾವರದ ಮನೆ ಮೇಲೆ ದಾಳಿ ನಡೆಸಿದ್ದ ಎನ್​ಐಎ ತಂಡ 5 ಹ್ಯಾಂಡ್ ಗ್ರೆನೇಡ್, 1 ಟೈಮ್ ಬಾಂಬ್, ರಾಕೆಟ್ ಬಾಂಬ್ ತಯಾರಿಕೆ ಸಾಮಗ್ರಿ, 9 ಎಂಎಂ ಪಿಸ್ತೂಲು, ಜೀವಂತ ಗುಂಡುಗಳು, ಬಾಡಿ ಜಾಕೆಟ್​ಗಳನ್ನು ವಶಪಡಿಸಿಕೊಂಡಿತ್ತು. ರಾಕೆಟ್ ಬಾಂಬ್ ತಯಾರಿಸಲೂ ಪ್ರಾಯೋಗಿಕ ಸಿದ್ಧತೆ ನಡೆಸಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರದ ಸೇತುವೆ ಕೆಳಭಾಗದಲ್ಲಿ ಶಂಕಿತರು ಅಡಗಿಸಿಟ್ಟಿದ್ದ 5 ಸಜೀವ ಬಾಂಬ್​ಗಳು ಪತ್ತೆಯಾಗಿದ್ದವು.

ಗಣೇಶ ಹಬ್ಬದ ಬಳಿಕ ಕೋರ್ಟ್​ಗೆ?

ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತರಲು ಎನ್​ಐಎ ಅಧಿಕಾರಿಗಳು ಕೋರ್ಟ್​ನಿಂದ ವಾರಂಟ್ ಪಡೆದಿದ್ದಾರೆ. ಭಾನುವಾರದಂದು ಸರ್ಕಾರಿ ರಜೆ, ಸೋಮವಾರ ಗೌರಿ-ಗಣೇಶ ಹಬ್ಬದ ರಜೆ ಇದೆ. ಹೀಗಾಗಿ ಮಂಗಳವಾರ (ಸೆ.3ರಂದು) ಕರೆತರಲಿದ್ದಾರೆ. ಚಿಕ್ಕಬಾಣಾವರ ಮನೆ, ದೊಡ್ಡಬಳ್ಳಾಪುರದ ಕೆಲ ಸ್ಥಳಗಳಿಗೆ ಕರೆದೊಯ್ದು ಮಹಜರು ಬಳಿಕ ಕೋಲ್ಕತ್ತಾಗೆ ಕರೆದೊಯ್ಯಲಿದ್ದಾರೆ.

ಕೃಪೆ:ವಿಜಯವಾಣಿ

ಭರ್ಜರಿ ಉಗ್ರ ಬೇಟೆ: ದಾಳಿಗೆ ಸ್ಕೆಚ್ ಹಾಕಿದ್ದ 5 ಶಂಕಿತರ ಸೆರೆ

nia-jamaat-ul-mujahideen-jmb-terrorist-arrest-habibur-rehman