ಬಾದಾಮಿ ಕ್ಷೇತ್ರದ ಬದಲಾವಣೆ: ಊಹಾಪೂಹಕ್ಕೆ ತೆರೆ ಎಳೆದ ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು ,ಜುಲೈ,6,2021(www.justkannada.in): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.jk

ಬಾದಾಮಿ ಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹಲವರು ಅಭಿಮಾನದಿಂದ ಕರೆಯುತ್ತಿದ್ದಾರೆ. ಆದರೆ, ನಾನು ಬಾದಾಮಿಯಿಂದಲೇ ಕಣಕ್ಕಿಳಿಯುತ್ತೇನೆ. ಯಾವುದೇ ತೀರ್ಮಾನವನ್ನು ನಿಮ್ಮ ಅಭಿಪ್ರಾಯ ಪಡೆದಕೊಂಡೇ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಬಾದಾಮಿ ಕ್ಷೇತ್ರದ ಜನತೆ ಒಳ್ಳೆಯವರು. ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿ ಒಂದು ದಿನ ಮಾತ್ರ ಪ್ರಚಾರ ಕೈಗೊಂಡಿದ್ದೆ. ಆದರೂ ಕ್ಷೇತ್ರದ ಜನತೆ ಅಭಿಮಾನದಿಂದ ಗೆಲ್ಲಿಸಿದ್ದಾರೆ. ಅವರ ಈ ಋಣವನ್ನು ಮರೆಯಲು ಸಾಧ್ಯವೇ ಇಲ್ಲ. ಬಾದಾಮಿ ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸದ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿದೆ.

ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಕೆರೂರು ಏತ ನೀರಾವರಿ ಯೋಜನೆ ಇದರಲ್ಲಿ ಪ್ರಮುಖವಾದದ್ದು. ಜೊತೆಗೆ ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವಾರು ಕೆಲಸಗಳೂ ಆಗಿವೆ. ಇನ್ನೂ ಎರಡು ವರ್ಷಗಳ ಅವಧಿ ಇದೆ. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮ ವಹಿಸುತ್ತೇನೆ ಎಂದು ಹೇಳಿದರು. ಇದು ಶಾಸಕನಾಗಿ ನನ್ನ ಜವಾಬ್ದಾರಿಯೂ ಹೌದು ಎಂದರು.

ನೀವು ಬಾದಾಮಿ ಕ್ಷೇತ್ರದಿಂದಲೇ ಗೆದ್ದು ಶಾಸಕರಾಗಬೇಕು. ಮುಖ್ಯಮಂತ್ರಿಯೂ ಆಗಬೇಕು ಎಂದು ಅಭಿಮಾನಿಗಳು ಹಾರೈಸಿದರು.

Key words: next election- contested –badami-Former CM- Siddaramaiah