ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾಸ್ಕ್ ಹಿಂದಿರುವ ‘ವಾಂಟೆಡ್’ ವ್ಯಕ್ತಿಯನ್ನು ಪತ್ತೆಹಚ್ಚುವ ಹೊಸ ತಂತ್ರಜ್ಞಾನ ಅಳವಡಿಕೆ.

ಬೆಂಗಳೂರು ಅಕ್ಟೋಬರ್ 7, 2021 (www.justkannada.in): ಈ ಹಿಂದೆ ವರದಿಯಾಗಿದ್ದಂತಹ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ, ಬೆಂಗಳೂರಿನ ಕಂಠೀರವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕೃತಕ ಬುದ್ಧಿವಂತಿಕೆ ಆಧಾರಿತ ಮುಖ ಗುರುತಿಸುವ ಕ್ಯಾಮೆರಾಗಳನ್ನು (AI-based face recognition cameras) ಅಳವಡಿಸಿದ ದೇಶದ ಮೊಟ್ಟ ಮೊದಲ ರೈಲು ನಿಲ್ದಾಣ ಎಂದು ಗುರುತಿಸಕೊಂಡಿದೆ. ಅಧಿಕಾರಿಗಳ ಪ್ರಕಾರ ಯಾವುದಾದರೂ ಅಪರಾಧಿ ಮಾಸ್ಕ್ ಧರಿಸಿದ್ದರೂ ಸಹ ಈ ಕ್ಯಾಮೆರಾಗಳಲ್ಲಿ ಅವರ ಮುಖ ಕಾಣಿಸುತ್ತದಂತೆ, ಇದರಿಂದ ಅಪರಾಧಿಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ನೆರವಾಗುತ್ತದೆ.

ಅಪರಾಧ ಪ್ರಕರಣಗಳಲ್ಲಿ ಸಿಲುಕಿ ತಪ್ಪಿಸಿಕೊಂಡು ಓಡಾಡುವ ಅಪರಾಧಿಗಳು ಪೊಲೀಸರ ಕಣ್ಣು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುತ್ತಾರೆ. ಅದರಲ್ಲಿ ಮಾಸ್ಕ್ ಧರಿಸಿ ಓಡಾಡುವುದೂ ಸಹ ಒಂದು. ಮೇಲಾಗಿ ಈ ಕೋವಿಡ್ ಸನ್ನಿವೇಶ ಉದ್ಭವಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಓಡಾಡುವುದು ಸಾಮ್ಯಾವಾಗಿಬಿಟ್ಟಿದೆ. ಇದು ಅಪರಾಧಿಗಳಿಗೆ ತಪ್ಪಿಸಿಕೊಳ್ಳುವ ಸುಲಭ ದಾರಿಯಾಗಿ ಹೊರಹೊಮ್ಮಿದೆ. ಆದರೆ ಹೀಗೆ ಮಾಸ್ಕ್ ಧರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಅಪರಾಧಿಗಳನ್ನು ಈ ಕ್ಯಾಮೆರಾಗಳು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ಮಾಸ್ಕ್ ಧರಿಸಿರುವ ಯಾವುದೇ ವ್ಯಕ್ತಿಯ ಮುಖ ಈ ವಿನೂತನ, ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ ಕ್ಯಾಮೆರಾದಲ್ಲಿ ಕಾಣುತ್ತದೆ. ಈಗಾಗಲೇ ಈ ಸಿಸ್ಟಂನ ಡೇಟಾಬೇಸ್‌ನಲ್ಲಿ ೧೦೦ಕ್ಕೂ ಹೆಚ್ಚಿನ ಸಂಖ್ಯೆಯ ನಾಪತ್ತೆ ಆಗಿರುವ ಅಪರಾಧಿಗಳ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.

ರೈಲ್ವೆ ಭದ್ರತಾ ಪಡೆ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಒಟ್ಟು ರೂ.೨.೪ ಕೋಟಿ ವೆಚ್ಚದಲ್ಲಿ ೧೫೭ ಈ ರೀತಿಯ ಮುಖ ಗುರುತಿಸುವ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿದೆ. ಇಲ್ಲಿ ಗಮನಿಸಬೇಕಾಗಿರುವ ಮುಖ್ಯವಾದ ಸಂಗತಿ ಮತ್ತು ಶ್ಲಾಘನೀಯ ಸಂಗತಿ ಏನೆಂದರೆ ಈಗಾಗಲೇ ಈ ತಂತ್ರಜ್ಞಾನದ ಮೂಲಕ ಕೆಲವು ಅಪರಾಧಿಗಳನ್ನು ಸೆರೆ ಹಿಡಿಯಲಾಗಿದೆ.

ಅಪರಾಧಿಗಳು ಹಾಗೂ ಕಳ್ಳರ ಓಡಾಟದ ಮೇಲೆ ನಿಗಾವಹಿಸಲು ಕಮ್ಯಾಂಡ್ ಸೆಂಟರ್‌ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಸಿಸಿಟಿವಿ ಫುಟೇಜ್ ಅನ್ನು ನಿರಂತರವಾಗಿ ಗಮನಿಸುವ ಕಾರ್ಯಕ್ಕಾಗಿಯೇ ನಿಯೋಜಿಸಲಾಗಿದೆ. ವಾಂಟೆಡ್ ಅಪರಾಧಿ ಅಥವಾ ಕಳ್ಳನ ಮುಖವನ್ನು ಪತ್ತೆ ಹಚ್ಚುವ ಕ್ಯಾಮೆರಾದಲ್ಲಿ ‘ಪಾಪ್-ಅಪ್’ ಸಂದೇಶ (pop-up message) ಮೂಡುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ತಾನಾಗಿಯೇ ರವಾನಿಯಾಗುತ್ತದೆ. ಈ ತಂತ್ರಜ್ಞಾನ ನಗರ ಪೊಲೀಸರಿಗೂ ಬಹಳ ಉಪಯುಕ್ತವಾಗಿದೆ.

ನೈಋತ್ಯ ರೈಲ್ವೆಯ ರೈಲ್ವೆ ಭದ್ರತಾ ಪಡೆಗಳ ಮುಖ್ಯ ಭದ್ರತಾ ಆಯುಕ್ತ ಅಲೋಕ್ ಕುಮಾರ್ ಅವರು ಈ ಕುರಿತು ಮಾತನಾಡುತ್ತಾ, “ನಾವು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಿನೂತನ ತಂತ್ರಜ್ಞಾನದ ಮುಖ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಿ ಈಗಾಗಲೇ ಒಂದು ತಿಂಗಳಿಂದ ಪ್ರಾಯೋಗಿಕವಾಗಿ ಅಪರಾಧಿಗಳನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ವಿಶೇಷ ತಂತ್ರಜ್ಞಾನದ ಕ್ಯಾಮೆರಾಗಳು ಮಾಸ್ಕ್ಗಳು, ಟೋಪಿಗಳು ಅಥವಾ ಮತ್ಯಾವುದಾದರೂ ರೀತಿಯ ವಸ್ತುಗಳನ್ನು ಧರಿಸಿದ್ದರೂ ಸಹ ವ್ಯಕ್ತಿಗಳ ಮುಖವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ವ್ಯಕ್ತಿಯ ೧೫-೨೦%ರಷ್ಟು ಮುಖ ಈ ಕ್ಯಾಮೆರಾದಲ್ಲಿ ಗೋಚರಿಸುತ್ತದೆ. ಇದು ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳಂತಲ್ಲ. ಪ್ರಸ್ತುತ ನಾವು ಈ ವ್ಯವಸ್ಥೆಯ ಅನುಕೂಲಗಳು ಹಾಗೂ ಅನಾನುಕೂಲಗಳನ್ನು ಅಂದಾಜಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಈ ತಂತ್ರಜ್ಞಾನವನ್ನು ಇತರೆ ಸ್ಥಳಗಳಲ್ಲಿಯೂ ಅನುಷ್ಠಾನಗೊಳಿಸಲು ಇನ್ನೂ ಆರು ತಿಂಗಳ ಸಮಯ ಬೇಕಾಗಬಹುದು,” ಎಂದು ವಿವರಿಸಿದರು.

ಈ ಕೃತಕ ಬುದ್ಧಿವಂತಿಕೆ ಆಧಾರಿತ ತಂತ್ರಜ್ಞಾನ, ೨೦ ವರ್ಷಗಳ ಹಿಂದೆ ತೆಗೆದಿರುವ ವ್ಯಕ್ತಿಯ ಚಿತ್ರದೊಂದಿಗೆ ಈಗಿನ ಚಿತ್ರವನ್ನು ಸರಿಹೊಂದಿಸಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಮುಂದಿನ ೧೫-೨೦ ವರ್ಷಗಳಲ್ಲಿ ಬೇಕಾಗುವ ತಂತ್ರಜ್ಞಾನದ ಬದಲಾವಣೆಗೂ ಅವಕಶವಿದೆ. ಈ ತಂತ್ರಜ್ಞಾನ ಈಗಾಗಲೇ ನಗರ ಪೊಲೀಸರಿಗೆ ತಪ್ಪಿಸಿಕೊಂಡಿದ್ದ ವಿಶೇಷಚೇತನ ಮಹಿಳೆಯೊಬ್ಬರನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದೆ. ಜೊತೆಗೆ ಈ ವಿನೂತನ ತಂತ್ರಜ್ಞಾನ ತಪ್ಪಿಸಿಕೊಂಡಿರುವ ಮಕ್ಕಳನ್ನೂ ಸಹ ಗುರುತಿಸಲು ನೆರವಾಗಲಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: New technology – detect- wanted- person –behind- mask – Bangalore railway station