ಕನ್ನಡದ ಹೊಸ ಆವಿಷ್ಕಾರಗಳು ಹೆಚ್ಚಬೇಕು- ನೂತನ ಕನ್ನಡದ ಕೀಲಿಮಣೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಟಿ.ಎಸ್.ನಾಗಾಭರಣ ಅಭಿಮತ’

ಬೆಂಗಳೂರು,ಆ,14,2020(www.justkannada.in):  ಕನ್ನಡದ ತಂತ್ರಜ್ಞಾನ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಕ-ನಾದ ಸಂಸ್ಥೆಯು ಕನ್ನಡದ ಕೀಲಿಮಣೆಯೊಂದನ್ನು ಆವಿಷ್ಕರಿಸಿರುವುದು ಅತ್ಯಂತ ಶ್ಲಾಘನೀಯವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬಣ್ಣಿಸಿದರು.

ಕ-ನಾದ ಸಂಸ್ಥೆಯು ನೂತನವಾಗಿ ಆವಿಷ್ಕರಿಸಿರುವ ಕನ್ನಡದ ಯೂನಿಕೋಡ್ ಕೀಲಿಮಣೆಯನ್ನು ವಿಧಾನಸೌಧದ 2ನೇ ಮಹಡಿಯಲ್ಲಿರುವ ತಮ್ಮ ಕಛೇರಿಯಲ್ಲಿ ಸರಳ ಕಾರ್ಯಕ್ರಮದಲ್ಲಿ ಇಂದು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕನ್ನಡಕ್ಕೆ ಇಂತಹ ಹೊಸ ಹೊಸ ಆವಿಷ್ಕಾರಗಳು ಹೆಚ್ಚೆಚ್ಚು ಆಗಬೇಕಿದೆ. ಆ ಮೂಲಕ ಕನ್ನಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಎಲ್ಲರೂ ಇದೂವರೆವಿಗೂ ಇಂಗ್ಲಿಷ್ ಕಿಲಿಮಣೆಯಲ್ಲಿ ಕನ್ನಡವನ್ನು ಟಂಕಿಸಲಾಗುತ್ತಿದೆ. (ಟಂಕಿಸುವುದು, ಒತ್ತುವುದು, ಬಳಸುವುದು, ಸೃಜಿಸುವುದು)  ಆದರೆ ಕ-ನಾದ ಸಂಸ್ಥೆಯ ಗುರುಪ್ರಸಾದ್ ಮತ್ತವರ ತಂಡವು ಹೊಸದಾಗಿ ಕನ್ನಡದ ಕೀಲಿಮಣೆಯನ್ನು ರೂಪಿಸಿದ್ದಾರೆ. ಇದರ ಪ್ರಯೋಜನವು ಎಲ್ಲ ಸರ್ಕಾರಿ ಕಛೇರಿಗಳು, ಸಂಘ-ಸಂಸ್ಥೆಗಳು ಪಡೆಯುವಂತಾಗಲಿ ಎಂದು ಹಾರೈಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಮಾತನಾಡಿ, ಕನ್ನಡ ಭಾಷೆಯಲ್ಲಿ ಶಿಕ್ಷಣ ಅಭಿವೃದ್ಧಿಯತ್ತ ಸಾಗಲು ಇಂತಹ ಅನ್ವೇಷಣೆಗಳು ಇನ್ನೂ ಹೆಚ್ಚು ನಡೆಯಬೇಕಿದೆ. ಕನ್ನಡಿಗರ  ಅನ್ವೇಷಣೆಯಾದ ಕ-ನಾದ ಕೀಲಿಮಣೆ ಆವಿಷ್ಕಾರವು ಕನ್ನಡ ಹಾಗೂ ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಉಪಕರಣವಾಗಿದೆ. ಈ ಕೀಲಿಮಣೆಯಲ್ಲಿ ಕನ್ನಡವನ್ನು ಸುಲಭವಾಗಿ ಮತ್ತು ವೇಗವಾಗಿ ಬಳಸಬಹುದಾಗಿದೆ. ಇದು ಕನ್ನಡ ಹಾಗೂ ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಉಪಕರಣವಾಗಲಿದೆ ಎಂದು ತಿಳಿಸಿದರು.

ಕ-ನಾದ ಸಂಸ್ಥೆಯ ಸಂಸ್ಥಾಪಕರಾದ ಗುರುಪ್ರಸಾದ್ ಅವರು ಮಾತನಾಡಿ, ಕನ್ನಡದ ನೂತಲ ಕೀಲಿಮಣೆಯು ಪ್ರಾಧಿಕಾರದ ಅಧ್ಯಕ್ಷರಿಂದ ಅಧಿಕೃತವಾಗಿ ಬಿಡುಗಡೆಗೊಂಡಿದ್ದು ಸಂತಸದ ವಿಷಯವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ, ಕನ್ನಡಿಗ, ಕನ್ನಡ ಸಾಹಿತ್ಯ ಪರವಾದ ಸಾಕಷ್ಟು ಕೆಲಸಗಳನ್ನು ನಿರ್ವಹಿಸುತ್ತಿದೆ. ಈ ಕ-ನಾದ ನೂತನವಾಗಿ ರೂಪಿಸಿರುವ ಕನ್ನಡ ಕೀಲಿಮಣೆಯು ಆಂಗ್ಲ ಕೀಲಿಮಣೆಗಿಂತ ಶೇ.30ರಷ್ಟು ವೇಗವಾಗಿ ಬಳಸಬಹುದಾಗಿದೆ, ಕರ್ನಾಟಕದ ಎಲ್ಲ ಕಛೇರಿ, ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಉಪಯುಕ್ತ ಸಾಧನವಾಗಿದೆ, ಶಾಲೆಗಳಲ್ಲಿ ಆಂಕಿಕ ವಿದ್ಯುನ್ಮಾನ ಗಣಕಯಂತ್ರ ಕನ್ನಡ ಸಾಕ್ಷರತೆಗೆ ಉತ್ತಮ ಉಪಕರಣವಾಗಲಿದೆ, ಕನ್ನಡ ಭಾಷಾ ಕಲಿಕಾ ತರಬೇತಿಗೆ ಎಲ್ಲ ಭಾರತೀಯ ಭಾಷೆಯ ಬಳಕೆಗೆ ಉತ್ತಮ ಸಾಧನವಾಗಲಿದೆ, ಶಾಲೆಗಳಿಗೆ ಸೂಕ್ತವಾದ ಸಣ್ಣ ಗಾತ್ರದ ಗಣಕಯಂತ್ರ ಜೋಡಣೆಯ ಯೋಜನೆಯಾಗಿದೆ, ಅಲ್ಲದೆ ದ್ವಿಭಾಷಾ ವಿನ್ಯಾಸದಿಂದ ಆಂಗ್ಲಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಒಂದು ಕನ್ನಡದ ಕೀಲಿಮಣೆ, ಸಣ್ಣದೊಂದು ಲ್ಯಾಪ್ ಟಾಪ್ ನ್ನು ಕೇವಲ 12,000 ರೂಗಳಿಗೆ ಈ ಹೊಸ ಮಾದರಿ ಲ್ಯಾಪ್ ಟಾಪ್ ಕ-ನಾದ ಸಂಸ್ಥೆಯಿಂದ ದೊರೆಯಲಿದೆ. ಅಸಕ್ತರು ಕ-ನಾದ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಈ ಲ್ಯಾಪ್ ಟಾಪ್ ಅನ್ನು ಮೊಬೈಲ್ ಗೆ ಬಳಸಬಹುದಾದ ಫವರ್ ಬ್ಯಾಂಕಿನಿಂದಲೂ ಚಾಲೂ ಮಾಡಬಹುದಾಗಿದ್ದು ವಿದ್ಯುತ್ ಸಮಸ್ಯೆ ಎದುರಿಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಅಲ್ಲದೆ ನೂತನವಾಗಿ ರೂಪಿಸಲಾಗಿರುವ ಕನ್ನಡದ ಕೀಲಿಮಣೆ (ಕೀಬೋರ್ಡ್)ಯಿಂದ ಇಂಗ್ಲಿಷನ್ನು ಸಹ ಸುಲಭವಾಗಿ ಕಲಿಯಬಹುದಾಗಿದೆ. ಈ ಕುರಿತು ಶಿಕ್ಷಣ ಸಚಿವರಿಗೂ ವಿವರಿಸುವುದಾಗಿ ತಿಳಿಸಿದರು.

ಕ-ನಾದ ಸಂಸ್ಥೆಯ ಸಂಸ್ಥಾಪಕರಾದ ವಿಶ್ವನಾಥ, ನಿರ್ದೇಶಕರಾದ ಗೋಪಾಲ್ ಅಯ್ಯಂಗಾರ್, ಲಿಪಿತಜ್ಞರಾದ ಡಾ.ಬಿವಿಕೆ ಶಾಸ್ತ್ರಿ, ಶೆರಿನ್, ಬೆರಳಚ್ಚು ತಜ್ಞ ಶ್ರೀ ರೇಣುಕ, ಸತೀಶ್ ಅಗ್ಪಲ ಹಾಗೂ ಸಮೃಧ ಇತರರು ಉಪಸ್ಥಿತರಿದ್ದರು.