ನ್ಯೂರಾಲಿಂಕ್‌  ನ ನೂತನ ಆವಿಷ್ಕಾರ: ಮುಂದಿನ ಆರು ತಿಂಗಳಲ್ಲಿ ಮಾನವ ಪ್ರಯೋಗ ಸಾಧ್ಯತೆ – ಎಲಾನ್ ಮಸ್ಕ್.

ನವದೆಹಲಿ, ಡಿಸೆಂಬರ್ ,2, 2022 (www.justkannada.in): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಇನ್ನು ಆರು ತಿಂಗಳ ಒಳಗಾಗಿ ತಮ್ಮ ಬ್ರೇನ್‌ ಚಿಪ್ ಕಂಪನಿ ನ್ಯೂರಾಲಿಂಕ್ ಆವಿಷ್ಕರಿಸಿರುವ, ಮನುಷ್ಯರಲ್ಲಿ ದೃಷ್ಟಿಯನ್ನು ಮರಳಿಸುವ ಜಗತ್ತಿನ ಮೊಟ್ಟ ಮೊದಲ ತಂತ್ರಜ್ಞಾನವನ್ನು ಮನುಷ್ಯರಲ್ಲಿ ಪ್ರಯೋಗಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದ್ದಾರೆ.

ನ್ಯೂರಾಲಿಂಕ್, ಚಲನಾಶಕ್ತಿಯನ್ನು ಹಾಗೂ ಮಾತುಗಳನ್ನಾಡುವ ಶಕ್ತಿಯನ್ನು ಕಳೆದುಕೊಂಡಿರುವಂತಹ ರೋಗಿಗಳಲ್ಲಿ ಚಲನೆ ಹಾಗೂ ಸಂವಹನಾಶಕ್ತಿಯನ್ನು ಮರಳಿಸುವಂತಹ ಬ್ರೇನ್‌ ಚಿಪ್ ಇಂಟರ್‌ ಫೇಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸ್ಯಾನ್‌ ಫ್ರಾನ್ಸಿಸ್ಕೊ ಬೇ ಪ್ರದೇಶ ಹಾಗೂ ಟೆಕ್ಸಸ್‌ ನ ಆಸ್ಟಿನ್‌ ನಲ್ಲಿರುವ ಕಂಪನಿ ‘ನ್ಯೂರಾಲಿಂಕ್,’ ಇತ್ತೀಚಿನ ವರ್ಷಗಳಲ್ಲಿ ಈ ತಂತ್ರಜ್ಞಾನದ  ಪ್ರಯೋಗವನ್ನು ಪ್ರಾಣಿಗಳ ಮೇಲೆ ನಡೆಸುತ್ತಿದ್ದು, ಮನುಷ್ಯರ ಮೇಲೆ ಪ್ರಯೋಗಿಸಲು ಯುಎಸ್ ರೆಗ್ಯೂಲೇಟರಿ ಅನುಮೋದನೆಯನ್ನು ಕೋರಿದೆ.

“ನಾವು ಆವಿಷ್ಕರಿಸಿರುವ ಸಾಧನವನ್ನು ಮನುಷ್ಯರ ಮೇಲೆ ಪ್ರಯೋಗಿಸುವುದಕ್ಕೆ ಮುಂಚೆ ಅದು ನಿಜವಾಗಿಯೂ ಮನುಷ್ಯರಲ್ಲಿ ಕೆಲಸ ಮಾಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ಬಹಳ ಎಚ್ಚರಿಕೆಯನ್ನು ವಹಿಸುತ್ತಿದ್ದೇವೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕಾಗದ ವ್ಯವಹಾರಗಳನ್ನೂ ಈಗಾಗಲೇ ಎಫ್‌ಡಿಎಗೆ ಸಲ್ಲಿಸಿದ್ದು, ಇನ್ನು ಆರು ತಿಂಗಳಲ್ಲಿ ನಮ್ಮ ಮೊಟ್ಟ ಮೊದಲ ನ್ಯೂರಲ್ ಲಿಂಕ್ (ನರರಗೋಗಳ ಸಂಪರ್ಕ) ಅನ್ನು ಮನುಷ್ಯನ ಮೇಲೆ ಪ್ರಯೋಗಿಸಲು ಅನುಮತಿ ಲಭಿಸುವ ಸಾಧ್ಯತೆ ಇದೆ,” ಎಂದು ಈ ಸಾಧನದ ಸಾರ್ವಜನಿಕ ಅಪ್‌ ಡೇಟ್ ಕುರಿತು ಮಸ್ಕ್ ಅವರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ರಾಯರ್ಸ್ಕ ಸುದ್ದಿ ಸಂಸ್ಥೆ ಯು.ಎಸ್. ಫುಡ್ ಅಂಡ್ ಡ್ರಗ್ ಅಸ್ಮಿನಿಷ್ಟ್ರೇಷನ್ (ಎಫ್‌ಡಿಎ)ನೊಂದಿಗೆ ಸಂಪರ್ಕ ಸ್ಥಾಪಿಸಲು ಪ್ರಯತ್ನಿಸಿತು. ಆದರೆ ಉತ್ತರ ಪಡೆಯುವಲ್ಲಿ ಸಫಲವಾಗಿಲ್ಲವಂತೆ.

ನ್ಯೂರಾಲಿಂಕ್ ಸಾಧನ ಮನುಷ್ಯರ ಮೇಲೆ ಪ್ರಯೋಗಿಸಲಿರುವ ಮೊದಲ ಎರಡು ಅಪ್ಲಿಕೇಷನ್‌ಗಳೇನೆಂದರೆ, ಮಾತನಾಡುವ ಹಾಗೂ ಕೈಕಾಲುಗಳ ಚಲನೆಯ ಶಕ್ತಿಯನ್ನು ಕಳೆದುಕೊಂಡಿರುವಂತಹ ಜನರಲ್ಲಿ ಚಲನೆ ಮತ್ತು ಮಾತುಗಳನ್ನು ಪುನರ್‌ ಸ್ಥಾಪಿಸುವುದಾಗಿದೆ ಎಂದು ಮಸ್ಕ್ ಅವರು ವಿವರಿಸಿದ್ದಾರೆ. “ಹುಟ್ಟಿನಿಂದಲೂ ಕುರುಡಾಗಿರುವಂತಹ ವ್ಯಕ್ತಿಯಾದರೂ ಸರಿ, ಈ ತಂತ್ರಜ್ಞಾನದಿಂದ ಅವರಿಗೆ ಕಣ್ಣು ಕಾಣಿಸುವ ಹಾಗೆ ಮಾಡಬಹುದು ಎನ್ನುವುದು ನಮ್ಮ ಬಲವಾದ ನಂಬಿಕೆಯಾಗಿದೆ,” ಎಂದಿದ್ದಾರೆ.

ಈ ಕಾರ್ಯಕ್ರಮವನ್ನು ಮೂಲತಃ ೨೦೨೨ರ ಅಕ್ಟೋಬರ್ ೩೧ಕ್ಕೆ ನಿಗಧಿಪಡಿಸಲಾಗಿತ್ತು. ಆದರೆ ವಿವಿಧ ಕಾಣಗಳಿಂದಾಗಿ ಅದನ್ನು ಮುಂದೂಡಲಾಯಿತು. ನ್ಯೂರಾಲಿಂಕ್‌ ನ ಕೊನೆಯ ಸಾರ್ವಜನಿಕ ಪ್ರಯೋಗ, ಸುಮಾರು ಒಂದು ವರ್ಷಕ್ಕೂ ಹಿಂದೆ, ಒಂದು ಕೋತಿಯ ಮೇಲೆ ನಡೆಸಲಾಗಿತ್ತು. ಕೋತಿಯ ಮೆದುಳಿಗೆ ಈ ಬ್ರೇನ್ ಚಿಪ್ ಅನ್ನು ಅಳವಡಿಸಿ, ಅದು ಸ್ವತಃ ಆಲೋಚಿಸುವ ಶಕ್ತಿಯನ್ನು ಗಳಿಸಿ ಕಂಪ್ಯೂಟರ್ ಆಟವನ್ನು ಆಡುವಂತೆ ಮಾಡಲಾಗಿತ್ತು.

ವಿದ್ಯುತ್ ವಾಹನಗಳ ತಯಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಸಂಸ್ಥೆ ಸ್ಪೇಸ್‌ಎಕ್ಸ್, ಹಾಗೂ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟ್ಟರ್‌ ನ ಮಾಲೀಕರಾಗಿರುವ ಎಲಾನ್ ಮಸ್ಕ್ ಮುಂಚಿನಿಂದಲೂ ಜಗತ್ತಿನಲ್ಲಿ ಯಾರೂ ಮಾಡದಿರುವಂತಹ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಿದ್ದಾರೆ. ತಮ್ಮ ಕಂಪನಿ ನ್ಯೂರಾಲಿಂಕ್‌ ನ ಯೋಜನೆಗಳನ್ನು ೨೦೧೬ರಲ್ಲಿ ಜಗತ್ತಿನ ಮುಂದೆ ಪ್ರಸ್ತುತಪಡಿಸಿದ್ದರು.

ಮಸ್ಕ್ ಅವರು, ಮೆದುಳಿಗೆ ಸಂಕೀರ್ಣವಾದ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ಶಕ್ತಿಯನ್ನು ನೀಡುವಂತಹ ಚಿಪ್ ಒಂದನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಪಾರ್ಶ್ವವಾಯು ಪೀಡಿತ ಜನರಲ್ಲಿ ಚಲಿಸುವ ಶಕ್ತಿ ಹಾಗೂ ಪಾರ್ಕಿನ್‌ ಸನ್ಸ್, ಡೆಮೆನ್ಷಿಯಾ (ಬುದ್ಧಿಮಾಂದ್ಯತೆ) ಹಾಗೂ ಅಲ್ಝೆಮರ್ಸ್ ನಂತಹ ಖಾಯಿಲೆಗಳಿಗೆ ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದಾರೆ. ಮಸ್ಕ್ ಅವರು ಮಾನವನ ಮೆದುಳನ್ನು ಕೃತಕ ಬುದ್ಧಿವಂತಿಕೆಯೊಂದಿಗೆ ಬೆರೆಸುವ ಕುರಿತಾಗಿಯೂ ಮಾತನಾಡುತ್ತಾರೆ.

ನ್ಯೂರಾಲಿಂಕ್ ತನ್ನ ಗುರಿಯ ಡೆಡ್‌ ಲೈನ್‌ನಿಂದ ಹಿಂದೆ ಬಿದ್ದಿದೆ. ಮಸ್ಕ್ ಅವರು ೨೦೨೦ರ ವೇಳೆಗೆ ತಮ್ಮ ಈ ಆವಿಷ್ಕಾರಕ್ಕೆ ಅನುಮೋದನೆ ಲಭಿಸುವ ನಿರೀಕ್ಷೆ ಇದೆ ಎಂದು ೨೦೧೯ರಲ್ಲಿ ಘೋಷಿಸಿದ್ದರು. ನಂತರ ೨೦೨೧ರ ಕೊನೆಯಲ್ಲಿ ನಡೆದಂತಹ ಒಂದು ಸಮಾವೇಶದಲ್ಲಿ ಮಾನವರ ಮೇಲಿನ ಪ್ರಯೋಗ ಮುಂದಿನ ವರ್ಷ ಆರಂಭವಾಗುವುದಾಗಿ ತಿಳಿಸಿದ್ದರು.

ಈ ಪ್ರಕಾರವಾಗಿ ಮಸ್ಕ್ ಅವರ ಈ ಪ್ರತಿಷ್ಠಿತ ನ್ಯೂರಾಲಿಂಕ್ ಸಂಸ್ಥೆ ಎಫ್‌ಡಿಎ ಅನುಮೋದನೆಯನ್ನು ಪಡೆದು, ಮನುಷ್ಯರ ಮೇಲೆ ತನ್ನ ಆವಿಷ್ಕಾರದ ಪ್ರಯೋಗವನ್ನು ನಡೆಸುವ ಡೆಡ್‌ ಲೈನ್‌ನಿಂದ ಹಿಂದೆ ಬಿದ್ದಿದೆ. ಮಸ್ಕ್ ಅವರು ಈ ವರ್ಷದ ಆರಂಭದಲ್ಲಿ ನ್ಯೂರಾಲಿಂಕ್‌ ನ ಉದ್ಯೋಗಿಗಳ ನಿಧಾನಗತಿಯ ಪ್ರಗತಿಯ ಕುರಿತು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿ, ಸಿಂಕ್ರಾನ್ ಎಂಬ ಪ್ರತಿಸ್ಪರ್ಧಿ ಸಂಸ್ಥೆಯನ್ನು ಹೂಡಿಕೆಯ ಸಂಬಂಧ ಸಂಪರ್ಕಿಸಿದ್ದರು ಎಂದು ರಾಯ್ರ್ಸ್  ಸಂಸ್ಥೆ ಆಗಸ್ಟ್ ತಿಂಗಳಲ್ಲಿ ವರದಿ ಮಾಡಿತ್ತು.

ಸಿಂಕ್ರಾನ್ ಸಂಸ್ಥೆ ಯುಎಸ್‌ ಎದಲ್ಲಿ ಮೊಟ್ಟ ಮೊದಲ ಬಾರಿಗೆ ರೋಗಿಯೊಬ್ಬರ ದೇಹದಲ್ಲಿ ತನ್ನ ಸಾಧನವೊಂದನ್ನು ಅಳವಡಿಸುವ ಮೂಲಕ ಜುಲೈ ತಿಂಗಳಲ್ಲಿ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸಿತು. ಅದಕ್ಕೆ ಯು.ಎಸ್. ರೆಗ್ಯೂಲೇಟರಿ ವತಿಯಿಂದ ೨೦೨೧ರಲ್ಲಿ ಮಾನವ ಪ್ರಯೋಗಗಕ್ಕೆ ತೀರುವಳಿ ಲಭಿಸಿತ್ತು ಹಾಗೂ ಆಸ್ಟ್ರೇಲಿಯಾದಲ್ಲಿ ನಾಲ್ವರು ಮನುಷ್ಯರ ಮೇಲಿನ ಅಧ್ಯಯನವನ್ನೂ ಪೂರ್ಣಗೊಳಿಸಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: New invention – Neuralink-human-trial – next six –months- Elon Musk.