ಬಿಎಸ್​ವೈ ರಾಜ್ಯಭಾರ ಹಗ್ಗದ ಮೇಲಿನ ನಡಿಗೆ

ಬೆಂಗಳೂರು:ಜುಲೈ-28: ದಕ್ಷಿಣ ಭಾರತದಲ್ಲಿ ಇನ್ನೊಮ್ಮೆ ಕೇಸರಿ ಬಾವುಟ ಹಾರಿಸಲು ಕಾರಣವಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ಇರುವ ದಾರಿ ಕಲ್ಲು-ಮುಳ್ಳಿನಿಂದ ಕೂಡಿದ್ದು, ಹಗ್ಗದ ಮೇಲಿನ ನಡಿಗೆಯಂತೆ ಸರ್ಕಾರವನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ.

ರಾಜ್ಯ ರಾಜಕೀಯ ವಲಯದಲ್ಲಿ ಛಲವಾದಿ ಎಂದೇ ಹೆಸರುಗಳಿಸಿರುವ ಯಡಿಯೂರಪ್ಪ ಮುಂದೆ ಹತ್ತು ಹಲವು ಸವಾಲುಗಳಿದ್ದರೂ ಜಿಡ್ಡುಗಟ್ಟಿರುವ ಆಡಳಿತ ಯಂತ್ರಕ್ಕೆ ಛಾಟಿ ಬೀಸಿ ಚುರುಕುಗೊಳಿಸುವುದು ಹಾಗೂ ಹಳಿ ತಪ್ಪಿರುವ ಆರ್ಥಿಕ ಸ್ಥಿತಿಯನ್ನು ಸರಿ ದಾರಿಗೆ ತರುವುದು ಬಹುದೊಡ್ಡ ಹೊಣೆಗಾರಿಕೆಯಾಗಿವೆ. ಈ ಎರಡು ಜವಾಬ್ದಾರಿಗಳ ಸುತ್ತಲೇ ಉಳಿದೆಲ್ಲ ಸವಾಲುಗಳು ಸುತ್ತುವುದರಿಂದ ಈ ಎರಡು ವಿಷಯದಲ್ಲಿ ಅವರ ನಿರ್ವಹಣೆ ಹೇಗಿರುತ್ತದೆ ಎಂಬುದನ್ನು ಇಡೀ ರಾಜ್ಯವೇ ಎದುರು ನೋಡುತ್ತಿದೆ. ರಾಜಕೀಯವಾಗಿ ಎದುರಾಗುವ ಸವಾಲುಗಳನ್ನು ಯಡಿಯೂರಪ್ಪ ಸುಲಭವಾಗಿ ಎದುರಿಸಬಲ್ಲರು ಎಂಬುದನ್ನು 15ನೇ ವಿಧಾನಸಭೆಯಲ್ಲಿ ಎರಡನೇ ಬಾರಿ ಸಿಎಂ ಆಗುವ ಮೂಲಕ ಸಾಬೀತು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಂತಹ ಬಿಗಿಹಿಡಿತ ಇದ್ದಾಗಲೂ ಅವರನ್ನು ದಾರಿಗೆ ತಂದು ಮುಖ್ಯಮಂತ್ರಿ ಆಗುವ ಮೂಲಕ ರಾಜ್ಯ ಬಿಜೆಪಿಗೆ ತಾವು ಅನಿವಾರ್ಯವೆಂಬುದನ್ನು ತೋರಿಸಿರುವುದು ಅವರ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿ. ಪ್ರತಿಪಕ್ಷದ ಸಾಲು ಸಹ ಪ್ರಬಲವಾಗಿಯೇ ಇದೆ. ಅತೃಪ್ತರಿಂದಾಗಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆ ಇದೆ. ಜೆಡಿಎಸ್ ಈಗಾಗಲೇ ವಿಷಯಾಧಾರಿತ ಬೆಂಬಲದ ಮಾತನ್ನಾಡಿದೆ. ಆದರೂ ಪ್ರತಿಪಕ್ಷ ದುರ್ಬಲವೆಂದು ಕಡೆಗಣಿಸುವಂತಿಲ್ಲ. ಆದ್ದರಿಂದ ಬಹಳ ಎಚ್ಚರಿಕೆಯ ಹೆಜ್ಜೆಯನ್ನು ಯಡಿಯೂರಪ್ಪ ಇಡಬೇಕಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಗಳಿಂದಲೂ ಆಡಳಿತ ಯಂತ್ರ ಬಿರುಸು ಕಳೆದುಕೊಂಡಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಲ್ಲ ಎಂಬ ಭಾವನೆಯಲ್ಲಿಯೇ ಆಡಳಿತ ಯಂತ್ರ 14 ತಿಂಗಳನ್ನು ಕಳೆದಿದೆ. ಅಧಿಕಾರಿಗಳು ಕೆಲಸ ಮಾಡುವುದಕ್ಕಿಂತ ಕಾಲ ಕಳೆದಿದ್ದೆ ಹೆಚ್ಚು. ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ವೇಗಕ್ಕೆ ಅಧಿಕಾರಿ ವರ್ಗ ಸ್ಪಂದಿಸಲಿಲ್ಲ. ಇಂತಹ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸಬೇಕಾಗಿದೆ. ಕೆಳ ಹಂತದಲ್ಲಿ 2.50 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡದೆ ಆಡಳಿತ ಯಂತ್ರ ಸುಗಮವಾಗಿ ಸಾಗಲು ಸಾಧ್ಯವಿಲ್ಲ. ಅಧಿಕಾರಿಗಳ ಮೇಲೆ ಛಾಟಿ ಬೀಸುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಯಂತ್ರವನ್ನು ಸರಿದಾರಿಗೆ ತರಬೇಕಾಗಿದೆ. ಇಲ್ಲದಿದ್ದರೆ ಜನಪರ ಕೆಲಸ ಮಾಡುವ ಯಡಿಯೂರಪ್ಪ ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಆಡಳಿತ ಯಂತ್ರಕ್ಕೆ ಯಾವ ರೀತಿ ಚುರುಕು ಮೂಡಿಸಲಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಜಾರಿಗೆ ತರುವರೇ?

ಮುಖ್ಯ ಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣಾ ಸಮಿತಿ ವಾಹನಗಳ ನೋಂದಣಿ ಮೇಲೆ ಸೆಸ್ ಹಾಕಬೇಕು, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸೆಸ್ ವಿಧಿಸಬೇಕು. ಸಹಾಯಧನಗಳನ್ನು ಕಡಿಮೆ ಮಾಡಬೇಕು. ಸಹಾಯಧನಗಳು ನೇರ ವರ್ಗಾವಣೆಯಾಗಬೇಕೆಂಬ ಸಲಹೆ ನೀಡಿದೆ. ಹಿಂದಿನ ಸರ್ಕಾರ ಈ ಸಲಹೆಗಳನ್ನು ನಿರ್ಲಕ್ಷ್ಯ ಮಾಡಿತ್ತು. ಯಡಿಯೂರಪ್ಪ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬೃಹತ್ ಯೋಜನೆಗಳು

ನೀರಾವರಿಗೆ 17,212 ಕೋಟಿ ರೂ., ಶಾಲೆಗಳಿಗೆ 1,200 ಕೋಟಿ ರೂ., ರಸ್ತೆ, ಸೇತುವೆ ಅಭಿವೃದ್ಧಿಗೆ 10,410 ಕೋಟಿ ರೂ., ಎಸ್​ಸಿಪಿ, ಟಿಎಸ್​ಪಿಗೆ 30,445 ಕೋಟಿ ರೂ., ನದಿ ನೀರು ನೀಡುವ ಜಲಧಾರೆಗೆ 4,000 ಕೋಟಿ ರೂ., ಹಾಲಿನ ಪ್ರೋತ್ಸಾಹಕ್ಕೆ 2,502 ಕೋಟಿ ರೂ., ಇಂಧನಕ್ಕೆ 11 ಸಾವಿರ ಕೋಟಿ ರೂ. ಅಲ್ಲದೇ ಚೀನಾದೊಂದಿಗೆ ಸ್ಪರ್ಧೆ, ಶೂನ್ಯ ಬಂಡವಾಳ ಕೃಷಿ, ಇಸ್ರೇಲ್ ಕೃಷಿ, ಕೃಷಿ ಉತ್ಪನ್ನಗಳಿಗೆ ಬೆಲೆ ಕೊರತೆ ಪಾವತಿ ಯೋಜನೆಗಳ ಜಾರಿಯ ಸವಾಲು ಇದೆ.

ಆರ್ಥಿಕ ಶಿಸ್ತಿನ ಅಗತ್ಯ

ರಾಜ್ಯದ ಹಣಕಾಸಿನ ವಿಚಾರದಲ್ಲಿ ಯಡಿಯೂರಪ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಸೋಮವಾರ ಬಜೆಟ್​ಗೆ ಒಪ್ಪಿಗೆ ಪಡೆಯುತ್ತಿದ್ದಾರೆ. ಇದು ಕುಮಾರಸ್ವಾಮಿ ಮಂಡಿಸಿರುವ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಇದೀಗ 8 ತಿಂಗಳ ಅವಧಿಗೆ ಮಾತ್ರ ಹಣ ವೆಚ್ಚ ಮಾಡಲು ವಿಧಾನಸಭೆಯ ಅನುಮತಿ ಪಡೆಯಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಲೇಖಾನುದಾನ ಮಂಡಿಸಲಾಗುತ್ತದೆ. ಯಡಿಯೂರಪ್ಪ ಮತ್ತೆ 1-2 ತಿಂಗಳಿಗೆ ವಿಧಾನಸಭೆಯ ಒಪ್ಪಿಗೆ ಪಡೆದು ಮತ್ತೆ ಹೊಸದಾಗಿ ಬಜೆಟ್ ಮಂಡಿಸುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಬಿಎಸ್​ವೈ ಈಗ ಕುಮಾರಸ್ವಾಮಿ ಘೋಷಣೆ ಮಾಡಿರುವ ದೊಡ್ಡದೊಡ್ಡ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡುವ ಕೆಲಸವನ್ನಷ್ಟೇ ಮಾಡಬೇಕಾಗಿದೆ. ಆರ್ಥಿಕ ಶಿಸ್ತು ತರುವ ಜವಾಬ್ದಾರಿಯೂ ಅವರ ಮೇಲಿದೆ. ಸಾಲಮನ್ನಾಕ್ಕಾಗಿ ಸುಮಾರು 20 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಿಂದ ಉಳಿದ ಯೋಜನೆಗಳಿಗೆ ಹಣಕಾಸಿನ ಕೊರತೆಯಾಗಲಿದೆ.

ಸಾಲದ ನಿಯಂತ್ರಣ

ರಾಜ್ಯದ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಡಿಯೂರಪ್ಪ ಸಹ ಸಾಕಷ್ಟು ಬಾರಿ ಇದೇ ಮಾತನ್ನು ಹೇಳಿದ್ದಾರೆ. ಈ ಹಣಕಾಸು ವರ್ಷದ ಅಂತ್ಯಕ್ಕೆ ಸಾಲ 3,78,567 ಕೋಟಿ ರೂ.ಗೆ ತಲುಪಲಿದೆ. ಜಿಎಸ್​ಡಿಪಿ ಶೇ.25 ಮೀರುವಂತಿಲ್ಲ. ಈಗ ಈ ಪ್ರಮಾಣ ಶೇ.20.60 ಇದೆ. ಅದೇ ರೀತಿ ವಿತ್ತೀಯ ಕೊರತೆ ಶೇ.3 ದಾಟುವಂತಿಲ್ಲ, ಈಗ ಶೇ.2.65 ಇರುವುದರಿಂದ ಸಂಕಷ್ಟದ ಸ್ಥಿತಿ ಇದೆ. ಕೇಂದ್ರದಿಂದ ಬರುವ ತೆರಿಗೆ ವರ್ಗಾವಣೆ ಈಗ ಶೇ.2.51 ಇದ್ದು, ಮುಂದಿನ ವರ್ಷ ಶೇ.2.47ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಕೇಂದ್ರದ ಅನುದಾನಗಳು ಶೇ.0.94ರಿಂದ ಶೇ.0.87ಕ್ಕೆ ಇಳಿಯಲಿವೆ. ಕೇಂದ್ರ ಸರ್ಕಾರದಲ್ಲಿಯೇ ಈ ತ್ರೖೆಮಾಸಿಕದಲ್ಲಿ ಜಿಎಸ್​ಟಿ ಸಂಗ್ರಹಣೆ ಕಡಿಮೆಯಾಗಿದೆ. ಜಿಎಸ್​ಟಿ ಪರಿಹಾರವನ್ನು 2025ರ ತನಕ ವಿಸ್ತರಣೆ ಮಾಡಿಕೊಳ್ಳಬೇಕೆಂಬ ಬೇಡಿಕೆಗೆ ಕೇಂದ್ರವನ್ನು ಒಪ್ಪಿಸುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯವೂ ಆಗಿದೆ. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಕೇಂದ್ರದಿಂದ 2,500 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರ 950 ಕೋಟಿ ನೀಡಿದೆ. ನರೇಗಾದಲ್ಲಿ ಸುಮಾರು 1,200 ಕೋಟಿ ರೂ. ಬಾಕಿ ನೀಡಬೇಕಾಗಿದೆ. ಉಳಿದ ಹಣವನ್ನು ಬಿಡುಗಡೆ ಮಾಡಿಸಿಕೊಂಡರೆ ಬರ ನಿರ್ವಹಣೆ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದಾಗಿದೆ.
ಕೃಪೆ:ವಿಜಯವಾಣಿ

ಬಿಎಸ್​ವೈ ರಾಜ್ಯಭಾರ ಹಗ್ಗದ ಮೇಲಿನ ನಡಿಗೆ
new-chief-minister-bs-yediyurappa-have-to-face-problems-in-government