ನವೀನ್ ಕುಟುಂಬಕ್ಕೆ ಪರಿಹಾರ ಮತ್ತು ಓದಿಗೆ ಖರ್ಚಾಗಿರುವ ಹಣವನ್ನೂ ಸರ್ಕಾರವೇ ಕೊಡಲಿ- ಯುಟಿ ಖಾದರ್ ಆಗ್ರಹ.

ಬೆಂಗಳೂರು,ಮಾರ್ಚ್,2,2022(www.justkannada.in)  ಉಕ್ರೇನ್ ನಲ್ಲಿ ರಷ್ಯಾದಾಳಿಗೆ ಬಲಿಯಾದ ನವೀನ್  ಅವರ ಕುಟುಂಬಕ್ಕೆ ಸಾಂತ್ವಾನ ಅಷ್ಟೆ ಅಲ್ಲ. ಇಲ್ಲಿಯವರೆಗೆ ನವೀನ್ ಓದಿಗೆ ಎಷ್ಟು  ಖರ್ಚಾಗಿದೆಯೋ ಅದನ್ನು ಸರ್ಕಾರ ಕೊಡಬೇಕು. ಸರಿಯಾದ ಪರಿಹಾರವನ್ನು ಆ ಕುಟುಂಬಕ್ಕೆ ಕೊಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದರು.

ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್, ವಿದ್ಯಾರ್ಥಿಗಳ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಇದ್ಯಾವುದು ಕೂಡ ಆಗ್ತಾ ಇಲ್ಲ. ನಮಗೆ ಕಾಲ್ ಮಾಡಿ ಹೆತ್ತವರು ಮಾತಾಡ್ತಾ ಇದ್ದಾರೆ. ನಮ್ಮ ಮಕ್ಕಳು ಅಲ್ಲಿ ಸಿಲುಕಿದ್ದಾರೆ ಅಂತ. ನಿಜವಾಗಿ ಇವರಿಗೆ ಕಾಳಜಿ ಇದ್ದರೆ ಅವರನ್ನು ರಕ್ಷಣೆ ಮಾಡಬೇಕು. ಉಕ್ರೈನ್ ನಲ್ಲಿರುವ ಎನ್ ಜಿಒಗೆ ಹೇಳಿದ್ರೆ ಅಟ್ ಲೀಸ್ಟ್ ಊಟನಾದ್ರೂ ಕೊಡ್ತಾರೆ ಅವರು. ಬಾರ್ಡರ್ ಗೆ ಬನ್ನಿ ಬನ್ನಿ ಅಂದರೆ ಯಾವ ಬಾರ್ಡರ್ ಗೆ ಬರ್ತಾರೆ ಅವರು. ಇವರು ಭಾರತೀಯರನ್ನ ಕರೆತರುವಲ್ಲಿ  ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಅವರು ರಿಸ್ಕ್ ತೆಗೆದುಕೊಂಡು ಬಂದ ವೇಳೆ ಇವರ ಪ್ರಚಾರ ಏಕೆ..?

ಮೊದಲು ನಾವು ಮಾತನಾಡಲಿಲ್ಲ. ಆದರೆ ಇದೀಗ ಮಾತನಾಡುವ ಸಮಯ ಬಂದಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಇದಕ್ಕೆ ಹೊಣೆ ಹೊರಬೇಕು. ಬಾರ್ಡರ್ ಗೆ ಬಂದವರನ್ನು ಇವಾಗ ಕರೆ ತರ್ತಾ ಇದ್ದಾರೆ. ಆಗ ಬಾರ್ಡರ್ ಗೆ ಬಂದವರು ಅವರ ಖರ್ಚಿನಲ್ಲೇ ಬಂದಿದ್ದು. ಏರ್ ಇಂಡಿಯಾ ಟಿಕೆಟ್ ಕೂಡ ಒಂದು ಲಕ್ಷ ಹೋಗಿದೆ. ಇದಕ್ಕೆ ಕೇಂದ್ರ ಸರ್ಕಾರ ಏನು ಮಾಡ್ತಾ ಇದೆ. ಅವರ ಖರ್ಚಿನಲ್ಲಿ ಬಂದವರಿಗೂ ಇವರು ಪ್ರಚಾರ ತೆಗೆದುಕೊಳ್ತಾ ಇದ್ದಾರೆ. ಇವರಿಗೆ ನಾಚಿಕೆ ಆಗಲ್ವಾ, ಅವರು ರಿಸ್ಕ್ ತೆಗೆದುಕೊಂಡು ಬಂದ ವೇಳೆ ಇವರ ಪ್ರಚಾರ ಏಕೆ..? ಹೇಗೋ ಅವರು ಬಂದಿದ್ದಾರೆ ಮನೆಗೆ ಹೋದ್ರೆ ಸಾಕು ಅನ್ನೋ ವೇಳೆ ಇವರದ್ದು ಅರ್ಧ ಗಂಟೆ ಭಾಷಣ ಬೇರೆ ಎಂದು ಯುಟಿ ಖಾದರ್ ವಾಗ್ದಾಳಿ ನಡೆಸಿದರು.

ಹೆತ್ತವರಿಗೂ ಸ್ಪಷ್ಟವಾದ ಸಂದೇಶ ಕೊಡಿ. ಉಕ್ರೇನ್ ನಲ್ಲಿ ಇರುವ ವಿದ್ಯಾರ್ಥಿಗಳು ಎಲ್ಲಿಗೆ ಬರಬೇಕು ಎಂದು ಸ್ಪಷ್ಟವಾದ ಸೂಚನೆ ಕೊಡಿ. ಹೆಲ್ಪ್ ಲೈನ್ ನಂಬರ್ ಕೂಡಾ ಯಾವುದೇ ಸಹಾಯಕ್ಕೆ ಬರುತ್ತಿಲ್ಲ. ಉಕ್ರೇನ್ ಎಂಜಿಓಗಳ ಜೊತೆ ಸಂಪರ್ಕ ಮಾಡಿ ವಿದ್ಯಾರ್ಥಿಗಳ ಸಹಕಾರಕ್ಕೆ ಕ್ರಮ ಕೈಗೊಳ್ಳಲಿ . ಪ್ರಚಾರದ ಅಬ್ಬರಕ್ಕೆ ಜನರ ನಿರ್ಲಕ್ಷ್ಯ ಮಾಡುತ್ತಾರೆ. ನವೀನ್ ಗೆ ಸಾಂತ್ವನ ಮಾತ್ರ ಅಲ್ಲ ಅವರು ಎಂಬಿಬಿಎಸ್ ಗೆ ಕಟ್ಟಿರುವ ಫೀಸ್ ವಾಪಸ್ ಕೊಡಬೇಕು ಹಾಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಫೆಬ್ರವರಿಯಿಂದ ಮಾರ್ಚ್ ತನಕ ಎಷ್ಟು ವಿಮಾನ ಬುಕ್ ಮಾಡಿದ್ದಾರೆ? ನಿಜವಾದ ಬದ್ಧತೆ ಇದ್ದರೆ ಎಷ್ಟು ವಿಮಾನ ಬುಕ್ ಮಾಡಿದ್ದೇವೆ ಎಂದು ಹೇಳಲಿ ಎಂದು ಪ್ರಶ್ನಿಸಿದ ಯುಟಿ ಖಾದರ್, ವಿದ್ಯಾರ್ಥಿಗಳು ಅಲ್ಲಿ ಓದೋದಿಕ್ಕೆ ಯಾಕೆ ಹೋಗ್ತಾರೆ ಈ ವಿಚಾರ ಈಗ ಮಾತನಾಡೋದು ಸರಿಯಲ್ಲ. ಆದರೆ ಪ್ರಧಾನಿಗಳು ಈ ಬಗ್ಗೆ ಚಿಂತಿಸಬೇಕಿದೆ ಎಂದರು.

Key words: naveen-death-ukraine-UT Khadar